ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಆಗಮನ: ಹೆಚ್ಚಿದ ಸೇನಾ ಬಲ

Last Updated 28 ಜನವರಿ 2021, 3:40 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್‌ನ ಡಾಸೊ ಏವಿಯೇಶನ್‌ ಕಂಪನಿ ನಿರ್ಮಿಸಿರುವ ಮೂರು ರಫೇಲ್‌ ಯುದ್ಧವಿಮಾನಗಳು ಬುಧವಾರ ಗುಜರಾತ್‌ನ ಜಾಮ್‌ನಗರ್ ವಾಯುನೆಲೆಗೆ ಬಂದಿಳಿದಿವೆ.

ಫ್ರಾನ್ಸ್‌ನಿಂದ 7 ಸಾವಿರ ಕಿ.ಮೀ ಕ್ರಮಿಸಿ 3ನೇ ಹಂತದಲ್ಲಿ ಭಾರತಕ್ಕೆ ತಲುಪಿರುವ ಯುದ್ಧ ವಿಮಾನಗಳು ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಭಾರತೀಯ ವಾಯುಸೇನೆಯು, 'ಮೂರನೇ ಹಂತದ ಮೂರು ರಫೇಲ್‌ ಯುದ್ಧವಿಮಾನಗಳು ಐಎಎಫ್‌ ವಾಯುನೆಲೆಗೆ ಬಂದಿಳಿದಿವೆ. ಅವುಗಳು ತಡೆರಹಿತವಾಗಿ 7000 ಕಿ.ಮೀ ದೂರ ಕ್ರಮಿಸಿ ಇಲ್ಲಿಗೆ ತಲುಪಿವೆ. ಯುಎಇಯಲ್ಲಿರುವ ಫ್ರಾನ್ಸ್‌ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಒಂದು ಬಾರಿ ನಿಲುಗಡೆ ಮಾಡಲಾಗಿದೆ. ಯುಎಇ ವಾಯುಪಡೆಯು ಒದಗಿಸಿದ ಟ್ಯಾಂಕರ್(ಇಂಧನ) ಬೆಂಬಲವನ್ನು ಭಾರತೀಯ ವಾಯುಪಡೆ ಪ್ರಶಂಸಿಸುತ್ತದೆ' ಎಂದು ತಿಳಿಸಿದೆ.

ಫ್ರಾನ್ಸ್‌ನ ಡಾಸೊ ಏವಿಯೇಶನ್‌ ಕಂಪನಿ ನಿರ್ಮಿಸಿರುವ ರಫೇಲ್‌ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆ. 10ರಂದು ವಾಯು ಪಡೆಗೆ ಸೇರ್ಪಡೆಗೊಳಿಸಲಾಯಿತು. ಎರಡನೇ ಹಂತದ ರಫೇಲ್‌ ಯುದ್ಧ ವಿಮಾನಗಳು ಕಳೆದ ವರ್ಷ ನವೆಂಬರ್‌ನಲ್ಲಿ ಭಾರತಕ್ಕೆ ಬಂದು ತಲುಪಿದ್ದವು.

ಭಾರತವು ಫ್ರಾನ್ಸ್ ದೇಶದಿಂದ ₹ 59 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿವೆ. 2023ರ ವೇಳೆಗೆ ಎಲ್ಲಾ 36 ರಫೇಲ್ ವಿಮಾನಗಳು ಭಾರತದಲ್ಲಿರಲಿವೆ ಎಂದು ಏರ್‌ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT