ಶುಕ್ರವಾರ, ಮೇ 20, 2022
23 °C
ಸುರಕ್ಷಿತ ಸ್ಥಳಗಳಿಗೆ ತೆರಳಲು ಅಲ್ಪಸಂಖ್ಯಾತ ಸಮುದಾಯ ಚಿಂತನೆ

ರಜಪೂತ ಚಾಲಕನ ಹತ್ಯೆ: ಸುರಕ್ಷಿತ ಸ್ಥಳಗಳಿಗೆ ತೆರಳಲು ಅಲ್ಪಸಂಖ್ಯಾತರ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕಕ್ರಾನ್‌ ಗ್ರಾಮದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತ ರಜಪೂತ ಸಮುದಾಯದ ಚಾಲಕನನ್ನು ಉಗ್ರರು ಹತ್ಯೆಗೈದ ಘಟನೆಯು ಕಣಿವೆಯಲ್ಲಿನ ಕಡಿಮೆ ಜನಸಂಖ್ಯೆ ಇರುವ ಇತರೆ ಸಮುದಾಯದ ಜನರಲ್ಲಿ ಭಯ ಹಾಗೂ ಅನಿಶ್ಚಿತತೆಯನ್ನು ಉಂಟು ಮಾಡಿದೆ.

ರಜಪೂತ ಸಮುದಾಯದ ಸತೀಶ್‌ ಸಿಂಗ್‌ (50) ಎಂಬುವವರನ್ನು ಅವರ ಮನೆಯ ಬಳಿಯೇ ಬುಧವಾರ (ಏ.13) ಉಗ್ರರು ಗುಂಡಿಟ್ಟು ಕೊಂದಿದ್ದು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ವಲಸೆ ಕಾರ್ಮಿಕರ ಮೇಲೆ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಉಗ್ರರ ಸರಣಿ ದಾಳಿಯು ಸ್ಥಳೀಯರಲ್ಲದ ಜನರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಕಳೆದ 32 ವರ್ಷಗಳಿಂದ ಕಾಶ್ಮೀರದಲ್ಲಿ ಉಳಿದುಕೊಂಡಿರುವ ಸುಮಾರು 800ಕ್ಕೂ ಹೆಚ್ಚು ರಜಪೂತ ಸಮುದಾಯದ ಕುಟುಂಬಗಳು ಈಗ ಉಗ್ರರ ಭೀತಿಯಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಚಿಂತನೆ ನಡೆಸಿವೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ‘ಹಿಂದೂಗಳು ಕಾಶ್ಮೀರ ತೊರೆಯುವಂತೆ’ ಸೂಚಿಸಿ ಪೋಸ್ಟರ್‌ ಹಾಕಿರುವುದು ಕಣಿವೆಯ ಇತರೆ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಭಯ ಉಂಟು ಮಾಡಿದೆ. ‘ಲಷ್ಕರ್‌–ಎ–ಇಸ್ಲಾಮಿ’ ಹೆಸರಿನ ಅಪರಿಚಿತ ಉಗ್ರರ ಗುಂಪು, ಕಾಶ್ಮೀರ ಪಂಡಿತರು ಇರುವ ಬಾರಾಮುಲ್ಲ ಜಿಲ್ಲೆಯ ‘ವೀರಾನ್‌’ ಗ್ರಾಮಸ್ಥರಿಗೆ ಬೆದರಿಕೆ ಹಾಕಿರುವ ಪತ್ರ ಹಂಚಲಾಗಿದ್ದು, ಈ ಪತ್ರವು ಸ್ಥಳೀಯರಲ್ಲದವರ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ.

ಕುಲ್ಗಾಂ ಜಿಲ್ಲೆಯ ಕಕ್ರಾನ್‌ ಗ್ರಾಮದಲ್ಲಿ ಏ.13ರಂದು ನೆರೆಹೊರೆಯ ಮುಸ್ಲಿಮರು ರಂಜಾನ್ ತಿಂಗಳಿನ ಉಪವಾಸ ಮುರಿಯಲು ಮಸೀದಿಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದಾಗ ಖಾಸಗಿ ಸರಕು ಸಾಗಣೆ ವಾಹನ ಚಾಲಕನಾಗಿದ್ದ ಸಿಂಗ್‌ ಅವರನ್ನು ಉಗ್ರನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದ. ರಜಪೂತ ಸಮುದಾಯದ ಜನರನ್ನು ಸ್ಥಳೀಯವಾಗಿ ಪಂಡಿತರು ಎಂದೂ ಕರೆಯಲಾಗುತ್ತಿದೆ.

‘ಹತ್ಯೆಯಾದ ಸತೀಶ್‌ ಸಿಂಗ್‌ ಅವರಿಗೆ ತಾಯಿ, ಪತ್ನಿ ಹಾಗೂ 6ರಿಂದ 15 ವರ್ಷದೊಳಗಿನ ಮೂವರು ಹೆಣ್ಣು ಮಕ್ಕಳಿದ್ದಾರೆ. ಆತ ಯಾರಿಗೂ ತೊಂದರೆ ಕೊಟ್ಟವನಲ್ಲ. ಆದರೂ ಆತನನ್ನು ಯಾಕೆ ಕೊಂದರು? ಎಂದು ಮೃತರ ತಮ್ಮ ಅಂತ್ಯಸಂಸ್ಕಾರದ ವೇಳೆ ಪ್ರಶ್ನಿಸಿದ್ದರು.

‘ಈ ಘಟನೆಗೆ ನೆರೆ ಹೊರೆಯ ಮುಸ್ಲಿಮರು ಸಂತಾಪ ಸೂಚಿಸಿದ್ದಾರೆ. ಆದರೆ ಅವರು ಉಗ್ರರ ಮುಂದೆ ಅಸಹಾಯಕರು. ರಜಪೂತ ಸಮುದಾಯದ ಎಂಟು ಕುಟುಂಬಗಳು ಈ ಊರಿನಲ್ಲಿವೆ. ಇಲ್ಲಿನ ದೇವಸ್ಥಾನಕ್ಕೆ ಪೊಲೀಸರೊಬ್ಬರನ್ನು ನೇಮಿಸಲಾಗಿದೆ. ನಾವು ಈ ಗ್ರಾಮದಲ್ಲಿ ಮೂರು ತಲೆಮಾರುಗಳಿಂದ ವಾಸವಾಗಿದ್ದೇವೆ. 1990ರ ಆರಂಭದಲ್ಲಿ ಉಗ್ರ ಚಟುವಟಿಕೆ ಶುರುವಾಗುವ ಮೊದಲೇ ನಾವು ಇಲ್ಲಿದ್ದೇವೆ’ ಎಂದು ಅವರು ಹೇಳಿದರು.

ಎರಡು ದಿನಗಳ ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಈ ಕುರಿತು ಪ್ರತಿಕ್ರಿಯಿಸಿ, ‘ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಭದ್ರತಾ ಪಡೆಗಳು ನಿಭಾಯಿಸಲಿವೆ’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು