ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗೋಲಿಬಾರ್, ಹತ್ಯೆಯ ಬೆದರಿಕೆ; ದಿಲೀಪ್‌ ಘೋಷ್‌ ಹೇಳಿಕೆಗೆ ವ್ಯಾಪಕ ಟೀಕೆ

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ
Last Updated 13 ಏಪ್ರಿಲ್ 2021, 1:52 IST
ಅಕ್ಷರ ಗಾತ್ರ

ಬಾರಾನಗರ್ (ಪಶ್ಚಿಮ ಬಂಗಾಳ): ಸೀತಾಲಕುಚಿಯಲ್ಲಿನ ತುಂಟ ಹುಡುಗರು ಗುಂಡೇಟು ತಿಂದಿದ್ದಾರೆ. ಮುಂದಿನ ಹಂತದ ಮತದಾನದಲ್ಲಿ ತುಂಟತನ ತೋರಿದರೆ ಮತ್ತಷ್ಟು ಗುಂಡೇಟು ತಿನ್ನಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಬೆದರಿಕೆ ಹಾಕಿದ್ದಾರೆ.

ಬಾರಾನಗರ್‌ನಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕೂಚ್‌ಬಿಹಾರ್‌ ಗೋಲಿಬಾರ್‌ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಭಾಷಣದ ವಿಡಿಯೊ ಭಾನುವಾರ ವೈರಲ್ ಆಗಿದೆ.

‘ಸೀತಾಲ‌ಕುಚಿಯಲ್ಲಿ ತುಂಟ ಹುಡುಗರು ಗುಂಡೇಟು ತಿಂದಿದ್ದಾರೆ. ಮತ್ತೆ ಬೇರೆ ತುಂಟ ಹುಡುಗರು ಅದೇ ರೀತಿ ಮಾಡಿದರೆ, ಸಿತಾಲಕುಚಿಯಲ್ಲಿ ಆದದ್ದೇ ಅವರಿಗೂ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸಿಐಎಸ್‌ಎಫ್ ಸಿಬ್ಬಂದಿ ಕೈಯ್ಯಲ್ಲಿ ರೈಫಲ್ ಇರುವುದು ಕೇವಲ ಪ್ರದರ್ಶನಕ್ಕೆ ಎಂದು ಈ ತುಂಟ ಹುಡುಗರು ತಿಳಿದುಕೊಂಡಿರಬಹುದು. ಹಾಗೆ ತಿಳಿದುಕೊಂಡು ಮತ್ತದೇ ತುಂಟಾಟ ಆಡಿದರೆ, ಸೀತಾಲಕುಚಿಯಲ್ಲಿ ನಡೆದದ್ದು ಪುನರಾವರ್ತನೆಯಾಗುತ್ತದೆ. ಈ ಬಾರಿ ನಾಲ್ಕು ಜನರಲ್ಲ, ಅದಕ್ಕಿಂತಲೂ ಹೆಚ್ಚು ಜನರು ಬೀಳಬಹುದು’ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

ದಿಲೀಪ್ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ದಿಲೀಪ್‌ ಘೋಷ್ ಅವರ ಹೇಳಿಕೆ ಪ್ರಚೋದನಕಾರಿಯಾಗಿದೆ. ಮತ್ತಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಟಿಎಂಸಿ ಸಂಸದ ಸುಕೇಂದು ಶೇಖರ್ ರಾಯ್ ಆಗ್ರಹಿಸಿದ್ದಾರೆ.

‘ದಿಲೀಪ್ ಅವರ ಹೇಳಿಕೆ ಬಿಜೆಪಿಯ ನಿರಂಕುಶ‌ ಮುಖವಾಡವನ್ನು ಜಗಜ್ಜಾಹೀರು ಮಾಡಿದೆ’ ಎಂದು ಸಿಪಿಎಂ ನಾಯಕ ಸುಜನ್ ಚಕ್ರವರ್ತಿ ಟೀಕಿಸಿದ್ದಾರೆ.

ಸೀತಾಲಕುಚಿ ಗೋಲಿಬಾರ್‌ಗೆ ಸಂಬಂಧಿಸಿದ ಒಂದು ವಿಡಿಯೋ ಸಹ ಲಭ್ಯವಿಲ್ಲ. ಹೀಗಿದ್ದ ಮೇಲೆ ಸಿಐಎಸ್‌ಎಫ್ ಹೇಳಿದ ಕಥೆಯನ್ನು ಚುನಾವಣಾ ಆಯೋಗವು ನಂಬಿದ್ದು ಹೇಗೆ ಎಂದು ಎಡಪಕ್ಷಗಳು-ಕಾಂಗ್ರೆಸ್‌-ಐಎಸ್‌ಎಫ್‌ ಮೈತ್ರಿಕೂಟವು ಪ್ರಶ್ನಿಸಿದೆ. ಸೀತಾಲಕುಚಿಯಂತಹ ಘಟನೆಗಳು ಮರುಕಳಿಸುತ್ತವೆ ಎಂದಿರುವ ಬಿಜೆಪಿಯ ದಿಲೀಪ್ ಘೋಷ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

'ಬೆದರಿಕೆ ಹಾಕುವವರನ್ನು ನಿಷೇಧಿಸಿ'

ಸೀತಾಲಕುಚಿ ಹತ್ಯಾಕಾಂಡದಂತಹ ಘಟನೆಗಳು ಮರುಕಳಿಸುತ್ತವೆ ಎಂದು ಬೆದರಿಕೆ ಹಾಕುತ್ತಿರುವವರನ್ನು ರಾಜಕಾರಣದಿಂದ ನಿಷೇಧಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ರಾಣಾಘಾಟ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು, 'ಸೀತಾಲಕುಚಿಯಂತಹ ಹತ್ಯಾಕಾಂಡಗಳು ಮರುಕಳಿಸುತ್ತವೆ ಎನ್ನುವ ಈ ರಾಜಕಾರಣಿಗಳು ಮನುಷ್ಯರೇ' ಎಂದು ಪ್ರಶ್ನಿಸಿದ್ದಾರೆ.

'ಕೆಲವು ರಾಜಕಾರಣಿಗಳು ಇಂತಹ ಹತ್ಯಾಕಾಂಡದ ಬೆದರಿಕೆ ಹಾಕುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ ಎಂದು ಬಹಿರಂಗವಾಗಿ ಘೋಷಿಸುತ್ತಿದ್ದಾರೆ. ಈ ಹೇಳಿಕೆಗಳನ್ನು ಕೇಳಿ ನನಗೆ ಆಘಾತವಾಗಿದೆ. ಈ ನಾಯಕರು ಏನು ಮಾಡಲು ಹೊರಟಿದ್ದಾರೆ?' ಎಂದು ಅವರು ಪ್ರಶ್ನಿಸಿದ್ದಾರೆ.

'ಟಿಎಂಸಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ, ಬಿಜೆಪಿಯವರು ತಮ್ಮ ಪಕ್ಷದವರನ್ನೇ ಕೊಲ್ಲುತ್ತಿದ್ದಾರೆ. ತಮ್ಮ ವಾಹನಗಳಿಗೇ ಬೆಂಕಿ ಹಚ್ಚುತ್ತಿದ್ದಾರೆ. ಸೀತಾಲಕುಚಿಯಲ್ಲಿ ಹತ್ಯಾಕಾಂಡ ನಡೆಯುವ ಮುನ್ನ, ರಾಜಾಬೋಂಗ್ಷಿ ಎಂಬ ಬಿಜೆಪಿ ಕಾರ್ಯಕರ್ತನನ್ನು ಕೊಲ್ಲಲಾಗಿದೆ. ಆನಂತರ ಗೋಲಿಬಾರ್ ನಡೆದಿದೆ' ಎಂದು ಅವರು ಆರೋಪಿಸಿದ್ದಾರೆ.

'ನಾನು ಮತ್ತೆ ಅಧಿಕಾರಕ್ಕೆ ಬಂದ ನಂತರ ಈ ಹತ್ಯಾಕಾಂಡ ಮತ್ತು ಹತ್ಯೆಗಳ ಬಗ್ಗೆ ತನಿಖೆ ನಡೆಸುತ್ತೇನೆ' ಎಂದು ಅವರು ಘೋಷಿಸಿದ್ದಾರೆ.

ನುಡಿ-ಕಿಡಿ

ಅಸ್ಸಾಂನಲ್ಲಿ ಎನ್‌ಆರ್‌ಸಿಯಿಂದ 14 ಲಕ್ಷ ಬಂಗಾಳಿಗಳನ್ನು ಬಿಜೆಪಿ ಹೊರಗೆ ಇಟ್ಟಿದೆ. ಆ ಜನರೆಲ್ಲರನ್ನೂ ಬಂಧನ ಕೇಂದ್ರಗಳಿಗೆ ಬಿಜೆಪಿ ಅಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಇದೇ ಆಗುತ್ತದೆ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಟಿಎಂಸಿ ಜನರಲ್ಲಿ ತಪ್ಪು ಮಾಹಿತಿ ನೀಡಿ, ಭಯಹುಟ್ಟಿಸುತ್ತಿದೆ. ಎನ್‌ಆರ್‌ಸಿಯನ್ನು ಇನ್ನೂ ಜಾರಿಗೆ ತಂದಿಲ್ಲ. ಜಾರಿಗೆ ತಂದರೂ ಅದರಿಂದ ಗೂರ್ಖಾ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಒಬ್ಬ ಗೂರ್ಖಾನೂ ಎನ್‌ಆರ್‌ಸಿಯಿಂದ ಹೊರಗುಳಿಯುವುದಿಲ್ಲ

- ಅಮಿತ್ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT