ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಇಬ್ಬರು ಶಿಕ್ಷಕಿಯರಿಂದ 20 ವಿದ್ಯಾರ್ಥಿಗಳ ಒತ್ತೆ

Last Updated 23 ಏಪ್ರಿಲ್ 2022, 11:44 IST
ಅಕ್ಷರ ಗಾತ್ರ

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಬಾಲಕಿಯರ ವಸತಿ ಶಾಲೆಯ ಇಬ್ಬರು ಮಹಿಳಾ ಶಿಕ್ಷಕಿಯರು ವರ್ಗಾವಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ 20 ವಿದ್ಯಾರ್ಥಿಗಳನ್ನು ಹಲವು ಗಂಟೆಗಳ ಕಾಲ ಒತ್ತೆ ಇರಿಸಿಕೊಂಡಿದ್ದರು.

ವಿದ್ಯಾರ್ಥಿಗಳನ್ನು ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಯ ಮೇಲೆ ಕೂಡಿಹಾಕಲಾಗಿತ್ತು. ನಾಲ್ಕು ಗಂಟೆಗಳ ನಂತರ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ವರ್ಗಾವಣೆ ಸುದ್ದಿ ತಿಳಿದ ಶಿಕ್ಷಕಿಯರಾದ ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ತೀವ್ರ ಅಸಮಾಧಾನಗೊಂಡಿದ್ದರು. ‘ಈ ವಿಚಾರವಾಗಿ ಶಿಕ್ಷಕರು ಮೊದಲಿಗೆ ವಿದ್ಯಾರ್ಥಿಗಳನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ನಂತರ, ವರ್ಗಾವಣೆಯನ್ನು ವಿರೋಧಿಸಲು ಅವರನ್ನು ಒತ್ತಾಯಿಸಿದ್ದಾರೆ. ಹೀಗೆ ಮಾಡಿದರೆ ಅಧಿಕಾರಿಗಳು ಆದೇಶಗಳನ್ನು ರದ್ದುಗೊಳಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದರು‘ ಎಂದು ಲಖಿಂಪುರ ಖೇರಿ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ರಾತ್ರಿ 7 ಗಂಟೆಗೆ ಊಟದ ನಂತರ ಇಬ್ಬರೂ ಶಿಕ್ಷಕಿಯರು ಸುಮಾರು 20 ವಿದ್ಯಾರ್ಥಿಗಳನ್ನು ಶಾಲೆಯ ಛಾವಣಿಗೆ ಕರೆದೊಯ್ದು ತಮ್ಮ ವರ್ಗಾವಣೆಯ ವಿಚಾರವನ್ನು ತಿಳಿಸಿದ್ದರು. ನಂತರ ಮೇಲಿಂದ ಕೆಳಗೆ ಬಾರದಂತೆ ಬಾಗಿಲು ಹಾಕಿ ಕೂಡಿಹಾಕಿದ್ದರು. ಭಯಭೀತರಾದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಳ್ಳಲಾರಂಭಿಸಿದರು. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮಧ್ಯರಾತ್ರಿ ಹೊತ್ತಿಗೆ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ’ ಎಂದು ವರದಿಯಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ತಿಳಿಸಿದ್ದಾರೆ. ಇಬ್ಬರು ಮಹಿಳಾ ಶಿಕ್ಷಕಿಯರ ಮೇಲೆ ವಿದ್ಯಾರ್ಥಿನಿಯರನ್ನು ಪ್ರಚೋದಿಸಿದ ಮತ್ತು ವಾರ್ಡನ್ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಹೊರಿಸಲಾಗಿದೆ.

ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. 'ಘಟನೆ ಕುರಿತು ತನಿಖೆ ನಡೆಸಲು ನಾಲ್ವರು ಸದಸ್ಯರ ತನಿಖಾ ತಂಡವನ್ನು ರಚಿಸಲಾಗಿದೆ. ಇಬ್ಬರು ಶಿಕ್ಷಕರು ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಸೇವೆಯಿಂದ ವಜಾಗೊಳಿಸುತ್ತೇವೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT