ಮಂಗಳವಾರ, ಮೇ 17, 2022
27 °C
ಇನ್ನಿಬ್ಬರ ವಿರುದ್ಧ ಜಾಮೀನುರಹಿತ ವಾರಂಟ್‌

ಟೂಲ್‌ಕಿಟ್‌ ತನಿಖೆ ಚುರುಕು: ಐಎಸ್‌ಐ ನಂಟು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪರಿಸರ ಕಾರ್ಯಕರ್ತೆ ಬೆಂಗಳೂರಿನ ದಿಶಾ ರವಿ ಅವರ ಬಂಧನದೊಂದಿಗೆ ‘ಟೂಲ್‌ಕಿಟ್‌ ಪ್ರಕರಣ’ದ ತನಿಖೆಯನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದಾರೆ. ದಿಶಾ ಮತ್ತು ಪೊಲೀಸರು ಹುಡುಕುತ್ತಿರುವ ನಿಕಿತಾ ಜೇಕಬ್‌ ಹಾಗೂ ಶಾಂತನು ಮಲಿಕ್‌ ಅವರಿಗೆ ಭಾರತದ ತನಿಖಾ ಸಂಸ್ಥೆಗಳ ನಿಗಾದಲ್ಲಿರುವ ವಿದೇಶಿ ವ್ಯಕ್ತಿ, ಐಎಸ್‌ಐ ಜತೆ ಸಂಬಂಧ ಹೊಂದಿರುವ ಪೀಟರ್‌ ಫ್ರೆಡರಿಕ್‌ ಜತೆಗೆ ನಂಟು ಇದೆ ಎಂದು ದೆಹಲಿ ಪೊಲೀಸರು ಸೋಮವಾರ ಆರೋಪಿಸಿದ್ದಾರೆ.

ನಿಕಿತಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ; ಮಹಾರಾಷ್ಟ್ರದ ಬೀಡ್‌ ನಿವಾಸಿ ಶಾಂತನು ಅವರು ಎಂಜಿನಿಯರ್‌. ಈ ಇಬ್ಬರ ವಿರುದ್ಧವೂ ಪೊಲೀಸರು ಜಾಮೀನುರಹಿತ ವಾರಂಟ್‌ ಪಡೆದುಕೊಂಡಿದ್ದಾರೆ. ಬಂಧನದಿಂದ ರಕ್ಷಣೆ ಕೋರಿ ಈ ಇಬ್ಬರೂ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಖಾಲಿಸ್ತಾನ ಹೋರಾಟದ ಪರವಾಗಿರುವ ಪೋಯೆಟಿಕ್‌ ಜಸ್ಟೀಸ್‌ ಫೌಂಡೇಶನ್‌ ಜನವರಿ 11ರಂದು ಆಯೋಜಿಸಿದ್ದ ‘ಝೂಮ್‌’ ಸಭೆಯಲ್ಲಿ ನಿಕಿತಾ ಮತ್ತು ಶಾಂತನು ಭಾಗವಹಿಸಿದ್ದಾರೆ. ಈ ಸಭೆಯಲ್ಲಿ 60–70 ಜನರು ಇದ್ದರು. ಇವರೆಲ್ಲರ ಜತೆಗೂಡಿ ನಿಕಿತಾ ಮತ್ತು ಶಾಂತನು ಅವರು ಟೂಲ್‌ಕಿಟ್‌ ಸಿದ್ಧಪಡಿಸಿದ್ದಾರೆ. ನಿಕಿತಾ ಅವರ ಮನೆಯಲ್ಲಿ ಹಗಲಿನಲ್ಲಿ ನಡೆಸಿದ ಶೋಧದಲ್ಲಿ ಎರಡು ಲ್ಯಾಪ್‌ಟಾಪ್‌ ಮತ್ತು ಒಂದು ಐಫೋನ್‌ ಸಿಕ್ಕಿವೆ ಎಂದು ದೆಹಲಿ ಪೊಲೀಸ್‌ ಇಲಾಖೆಯ ಸೈಬರ್ ಘಟಕದ ಜಂಟಿ ಆಯುಕ್ತ ಪ್ರೇಮ್‌ನಾಥ್ ಅವರು ವಿವರಿಸಿದ್ದಾರೆ. 

ನಿಕಿತಾ ಮತ್ತು ಶಾಂತನು ಅವರು ತಲೆಮರೆಸಿಕೊಂಡಿದ್ದಾರೆ. ಇದೇ 12ರಂದು ತಮ್ಮ ಮನೆಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಾಗಿ ಪತ್ರ ಬರೆದು ನಿಕಿತಾ ಕೊಟ್ಟಿದ್ದರು. ಆದರೆ, ತನಿಖಾಧಿಕಾರಿಗಳು ಅಲ್ಲಿಗೆ ಹೋದಾಗ ಅವರು ಪರಾರಿಯಾಗಿದ್ದರು. ಶಾಂತನು ಕೂಡ ಮನಯಲ್ಲಿ ಇರಲಿಲ್ಲ ಎಂದು‌ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಆರೋಪಿಸಿದ್ದಾರೆ.

ಈ ಇಬ್ಬರು ತಲೆಮರೆಸಿಕೊಂಡ ಬಳಿಕ ದಿಶಾ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು. ಟೂಲ್‌ಕಿಟ್‌ ಹಂಚಿಕೊಂಡ ವಾಟ್ಸ್‌ಆ್ಯಪ್‌ ಗುಂಪನ್ನು ಆಗಲೇ ಅವರು ಅಳಿಸಿ ಹಾಕಿದ್ದರು. ದಿಶಾ ಅವರನ್ನು ಅವರ ತಾಯಿಯ ಸಮ್ಮುಖದಲ್ಲಿ ಬಂಧಿಸಲಾಗಿದೆ. ಆ  ಸಂದರ್ಭದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಯ ಠಾಣಾಧಿಕಾರಿಯೂ ಇದ್ದರು. ಬಂಧನ ವೇಳೆಯಲ್ಲಿ ಎಲ್ಲ ನಿಯಮಗಳನ್ನೂ ಪಾಲಿಸಲಾಗಿದೆ ಎಂದು ಪ್ರೇಮ್‌ನಾಥ್‌ ಹೇಳಿದ್ದಾರೆ.

ಆದರೆ, ಸಂವಿಧಾನದ 22ನೇ ವಿಧಿಯ ಸೆಕ್ಷನ್‌ 2ರ ಪ್ರಕಾರ ಅತ್ಯಂತ ಹತ್ತಿರದಲ್ಲಿ ಇರುವ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು. ಬಂಧನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗಸೂಚಿಗಳಲ್ಲಿ ಯಾವುದನ್ನೂ ದೆಹಲಿ ಪೊಲೀಸರು ಪಾಲಿಸಿಲ್ಲ ಎಂದೂ ಹೇಳಿದೆ.

ಮ್ಯಾಜಿಸ್ಟ್ರೇಟ್‌ ಅವರು ನಿಯಮಗಳನ್ನು ಉಲ್ಲಂಘಿಸಿರುವುದು ಅಸಮಾಧಾನಕರ. ಅವರು ಅತ್ಯಂತ ‘ಯಾಂತ್ರಿಕ’ವಾಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ನಡೆದಿದೆ. ದಿಶಾ ಅವರನ್ನು ‘ಅಕ್ರಮ ಬಂಧನ’ದಿಂದ ತಕ್ಷಣವೇ ಬಿಡುಗಡೆ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ದೆಹಲಿ ಹೈಕೋರ್ಟ್‌ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು. ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ‘ಅಸಡ್ಡೆ ಮತ್ತು ಅಸಂಬದ್ಧ’ವಾಗಿ ನಡೆಸಿದ  ಮ್ಯಾಜಿಸ್ಟ್ರೇಟ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಿಜೆಎಆರ್‌ ಒತ್ತಾಯಿಸಿದೆ.

‘ಕಸ್ಟಡಿಗೆ ಒಪ್ಪಿಸುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್‌ ಅವರು ಸಂವಿಧಾನದ 22ನೇ ವಿಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಚಾರಣೆ ಸಂದರ್ಭದಲ್ಲಿ ಆರೋ‍ಪಿ ಪರ ವಕೀಲರು ಬರುವ ತನಕ ಮ್ಯಾಜಿಸ್ಟ್ರೇಟ್‌ ಕಾಯಬೇಕಿತ್ತು. ಇಲ್ಲವೇ ಬೇರೊಬ್ಬ ವಕೀಲರ ನೆರವು ಅವರಿಗೆ ದೊರೆಯುವಂತೆ ಮಾಡಬೇಕಿತ್ತು’ ಎಂದು ಪ್ರಸಿದ್ಧ ವಕೀಲೆ ರೆಬೆಕಾ ಮಾಮನ್‌ ಜಾನ್‌ ಹೇಳಿದ್ದಾರೆ.

‘21 ವರ್ಷ ವಯಸ್ಸಿನ ದಿಶಾ ರವಿ ಅವರ ಬಂಧನವು ಪ್ರಜಾಪ್ರಭುತ್ವದ ಮೇಲೆ ಹಿಂದೆಂದೂ ಆದಂತಹ ದಾಳಿ. ನಮ್ಮ ರೈತರನ್ನು ಬೆಂಬಲಿಸುವುದು ಅಪರಾಧ ಅಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ದಿಶಾ ಅವರ ಬಂಧನದ ‘ನೀಚ ಕ್ರಮವನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಬೇಕು’ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಹೇಳಿದೆ. ಆರೋಪಗಳನ್ನು ಕೈಬಿಟ್ಟು ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

***

ದಿಶಾ ಬಳಿಕ ಇನ್ನೊಬ್ಬ ಕಾರ್ಯಕರ್ತೆ ನಿಕಿತಾ ಜೇಕಬ್‌ ಅವರ ಹಿಂದೆ ಪೊಲೀಸರು ಬಿದ್ದಿದ್ದಾರೆ. ಇದು ಅಮಿತ್‌ ಶಾಹಿ ಎಂಬ ಹೆಸರಿನ ತಾನಾಶಾಹಿ (ನಿರಂಕುಶಾಧಿಕಾರ).
-ಜೈರಾಮ್‌ ರಮೇಶ್, ಕಾಂಗ್ರೆಸ್‌ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು