ಮಂಗಳವಾರ, ಸೆಪ್ಟೆಂಬರ್ 21, 2021
23 °C

ದೇಶದ ಹಲವೆಡೆ ಭೂ ಕುಸಿತ: 160ಕ್ಕೂ ಹೆಚ್ಚು ಮಂದಿ ಸಾವು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ. ರಕ್ಷಣಾ ಪಡೆಯು ಅವಶೇಷಗಳಡಿ ಸಿಲುಕಿರುವ 60ಕ್ಕೂ ಹೆಚ್ಚು ಮಂದಿಗಾಗಿ ಶೋಧ ನಡೆಸುತ್ತಿದೆ. ಇದುವರೆಗೆ ಮಳೆಗೆ ಸಂಬಂಧಿಸಿದ ಘಟನೆಗಳಿಂದಾಗಿ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಸಾವಿರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ. ಅಲ್ಲದೆ 2,30,000 ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಭೂಕುಸಿತ ಮತ್ತು ಮಳೆಗೆ ಸಂಬಂಧಿಸಿದ ಅವಘಡಗಳಿಂದಾಗಿ 149 ಮಂದಿ ಸಾವಿಗೀಡಾಗಿದ್ದು, 64 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

‘ರಾಯಗಢ ಮತ್ತು ಸತಾರಾದಲ್ಲಿ ಭೂಕುಸಿತದಿಂದಾಗಿ ಮಣ್ಣಿನಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನಾವು ಶ್ರಮಿಸುತ್ತಿದ್ದೇವೆ. ಆದರೆ, ಅವರು ಮೂರು ದಿನಕ್ಕಿಂತ ಹೆಚ್ಚು ಕಾಲ ಮಣ್ಣಿನೊಳಗೆ ಸಿಲುಕಿರುವುದರಿಂದ  ಜೀವಂತವಾಗಿರುವ ಸಾಧ್ಯತೆಗಳು ಕಡಿಮೆ’ ಎಂದು ಪ್ರಕಟಣೆ ತಿಳಿಸಿದೆ.

‘ಕರ್ನಾಟಕ, ತೆಲಂಗಾಣದಲ್ಲಿ ಪ್ರವಾಹದಿಂದಾಗಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೃಷ್ಣಾ ಮತ್ತು ಗೋದಾವರಿ ನದಿಯಲ್ಲಿ ನೀರಿನ ಮಟ್ಟವು ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಗೋವಾದಲ್ಲಿ ಪ್ರವಾಹದಿಂದಾಗಿ ನೂರಾರು ಮನೆಗಳು ಹಾನಿಗೊಳಗಾಗಿದ್ದು, ಇದು ನಾಲ್ಕು ದಶಕದಲ್ಲೇ ಅತ್ಯಂತ ಭೀಕರ ಪ್ರವಾಹವಾಗಿದೆ’ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

‘ಪಶ್ಚಿಮ ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆ. ಇದು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದೆ. ಈ ವಾರವೂ ಇಲ್ಲಿ ಮಳೆ ಸುರಿಯಲಿದೆ. ಆದರೆ ಕಳೆದ ವಾರಕ್ಕೆ ಹೋಲಿಸಿದರೆ, ಅದರ ತೀವ್ರತೆ ಕಡಿಮೆ ಇರಲಿದೆ’ ಎಂದು ಐಎಂಡಿಯ ಪುಣೆ ಮೂಲದ ಹಿರಿಯ ವಿಜ್ಞಾನಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು