ಶುಕ್ರವಾರ, ಆಗಸ್ಟ್ 19, 2022
22 °C

ಕಾಶ್ಮೀರದಲ್ಲಿ ಪ್ರತ್ಯೇಕ ದಾಳಿ: ಜೆಇಎಂ ಕಮಾಂಡರ್‌ ಸೇರಿ ಐವರ ಉಗ್ರರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ದಕ್ಷಿಣ ಕಾಶ್ಮೀರದ ಎರಡು ಕಡೆ ಭದ್ರತಾ ಪಡೆಗಳು ಭಾನುವಾರ ನಡೆಸಿದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಜೈಶೆ–ಮೊಹಮ್ಮದ್‌ ಸಂಘಟನೆ ಅತ್ಯುನ್ನತ ಕಮಾಂಡರ್‌, ಪಾಕಿಸ್ತಾನದ ಭಯೋತ್ಪಾದಕ ಸೇರಿ ಐವರು ಉಗ್ರರು ಹತರಾಗಿದ್ದಾರೆ.

‘ಕಳೆದ 12 ಗಂಟೆಗಳ ಅವಧಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಜೆಇಎಂ ಕಮಾಂಡರ್‌ ಜಹೀದ್‌ ಮನ್ಸೂರ್‌ ವಾನಿ ಹಾಗೂ ಪಾಕಿಸ್ತಾನದ ಕಫೀಲ್‌ ಅಲಿಯಾಸ್‌ ಚೋಟು ಸೇರಿ ಐವರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಇದು ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ಟ್ವೀಟ್‌ ಮಾಡಿದ್ದಾರೆ.

‘ಪುಲ್ವಾಮ ಜಿಲ್ಲೆಯ ನೈರಾ ಗ್ರಾಮದಲ್ಲಿ ನಡೆದ ಕಾರ್ಯಾಚರಣೆ ವೇಳೆ ಜೆಇಎಂ ಕಮಾಂಡರ್‌ ಜಹೀದ್‌ ಮನ್ಸೂರ್‌ ವಾನಿ, ಒಬ್ಬ ಪಾಕಿಸ್ತಾನಿ ಸೇರಿ ಮೂವರು ಜೆಇಎಂ ಉಗ್ರರು ಹತರಾಗಿದ್ದು, ಬುಡ್ಗಾಂ ಜಿಲ್ಲೆಯ ಚಾರರ್‌–ಇ–ಶರೀಫ್‌ ಪ್ರದೇಶದಲ್ಲಿ ಇಬ್ಬರು ಲಷ್ಕರ್‌–ಎ–ತೈಬಾ ಸಂಘಟನೆಯ ಉಗ್ರರು ಹತ್ಯೆಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಶನಿವಾರ ರಾತ್ರಿ ಹಾಗೂ ಭಾನುವಾರ ಮುಂಜಾನೆ ನಡೆದ ಕಾರ್ಯಾಚರಣೆ ವೇಳೆ ಐವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಪಾಕಿಸ್ತಾನಿ ಉಗ್ರ ಕಫೀಲ್‌ ಪುಲ್ವಾಮ–ಶೋಪಿಯಾನ್‌ ಭಾಗದಲ್ಲಿ 2020ರಿಂದ ಸಕ್ರಿಯನಾಗಿದ್ದ. ಜೆಇಎಂ ದಕ್ಷಿಣ ಕಾಶ್ಮೀರದ ಮುಖ್ಯಸ್ಥನಾಗಿದ್ದ ಜಹೀದ್‌ ಮನ್ಸೂರ್‌ ವಾನಿ, ಐಇಡಿ ಪರಿಣತನೂ ಆಗಿದ್ದ’ ಎಂದು ಮೂಲಗಳು ತಿಳಿಸಿವೆ.

1990ರ ನಂತರ ಇದೇ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯ ಉಗ್ರರ ಸಂಖ್ಯೆ 200ಕ್ಕಿಂತ ಕೆಳಗಿಳಿದಿದ್ದು, ಈ ವರ್ಷ ಎಂಟು ಪಾಕಿಸ್ತಾನಿ ಸೇರಿ 21 ಉಗ್ರರನ್ನು ಭದ್ರತಾ ಪಡೆಗಳು ಕೊಂದಿದ್ದು, ಕಳೆದ ವರ್ಷ 73 ವಿದೇಶಿಗರು ಸೇರಿ 171 ಉಗ್ರರನ್ನು ಹತ್ಯೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು