ಬುಧವಾರ, ಮಾರ್ಚ್ 22, 2023
25 °C

ತಮಿಳುನಾಡು: ಸಿಎಂ ಸ್ಟಾಲಿನ್ ಮಗ ಉದಯನಿಧಿ ಸಚಿವರಾಗಿ ಪ್ರಮಾಣವಚನ

ಇಟಿಬಿ ಶಿವಪ್ರಿಯನ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಡಿಎಂಕೆ ಶಾಸಕ ಮತ್ತು ಪಕ್ಷದ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್‌ ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉದಯನಿಧಿ ಅವರು ತಮ್ಮ ತಂದೆ ಎಂ.ಕೆ.ಸ್ಟಾಲಿನ್‌ ಸಂಪುಟ ಸೇರಿದರು. ರಾಜ್ಯಪಾಲ ಆರ್‌.ಎನ್‌.ರವಿ ಅವರು ಅಧಿಕಾರದ ಗೋಪ್ಯತೆಯನ್ನು ಬೋಧಿಸಿದರು.

ಮುಖ್ಯಮಂತ್ರಿ ಸ್ಟಾಲಿನ್‌ ಸೇರಿದಂತೆ ಸಂಪುಟದ ಇತರ ಸದಸ್ಯರು, ಪಕ್ಷದ ಹಿರಿಯ ನಾಯಕರು ಪಾಲ್ಗೊಂಡಿದ್ದರು.

ಪರ– ವಿರುದ್ಧ ಚರ್ಚೆ:

ಉದಯನಿಧಿ ಸ್ಟಾಲಿನ್‌ ಅವರು ಸಂಪುಟ ಸೇರುತ್ತಿದ್ದಂತೆ ತಮಿಳುನಾಡಿನಲ್ಲಿ ಅವರ ಪರ ಮತ್ತು ವಿರುದ್ಧ ಚರ್ಚೆಗಳು ಆರಂಭವಾಗಿವೆ.

ಉದಯನಿಧಿ ಅವರ ಆಗಮವನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಡಿಎಂಕೆ ಚಿಹ್ನೆಯಾದ ‘ಉದಯಿಸುತ್ತಿರುವ ಸೂರ್ಯ’ನಿಗೆ (ರೈಸಿಂಗ್ ಸನ್‌) ಹೋಲಿಸಿ ಸ್ವಾಗತಿಸಿದ್ದರೆ,  ಕೆಲ ವಿಮರ್ಶಕರು ಮತ್ತು ವಿರೋಧ ಪಕ್ಷದವರು ದ್ರಾವಿಡ ಪಕ್ಷದ ಇತಿಹಾಸದಲ್ಲಿ ಮತ್ತೊಬ್ಬ ‘ಪುತ್ರನ ಉದಯ’ವಾಗಿದೆ (ಸನ್‌ರೈಸ್‌) ಎಂದು ಟೀಕಿಸಿದ್ದಾರೆ.

‘ಪ್ರಮುಖ ಹುದ್ದೆಗಳಿಗೆ ತಮ್ಮ ಮಗ ಮತ್ತು ಮಗಳನ್ನು ನೇಮಿಸುವ ಬಗ್ಗೆ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಇದ್ದಂತಿಲ್ಲ’ ಎಂದು ರಾಜಕೀಯ ವಿಶ್ಲೇಷಕ ಸುಮಂತ್‌ ಸಿ ರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

ನಟ ಮತ್ತು ನಿರ್ಮಾಪಕರೂ ಆಗಿರುವ 45 ವರ್ಷದ ಉದಯನಿಧಿ ಅವರು ಸಚಿವರಾಗಿದ್ದಕ್ಕೆ ಡಿಎಂಕೆ ಕಾರ್ಯಕರ್ತರು ಶ್ಲಾಘಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. 

ಲೋಕಸಭಾ ಸದಸ್ಯ ಟಿ.ಆರ್‌. ಬಾಲು ಅವರ ಮಗ ಹಾಗೂ ಮೂರು ಬಾರಿಯ ಶಾಸಕ  ಟಿ.ಆರ್‌.ಬಿ. ರಾಜಾ ಅವರು, ‘ಕತ್ತಲೆಯನ್ನು ಓಡಿಸುವ ಶಕ್ತಿ ಇರುವುದು ಸೂರ್ಯನಿಗೆ ಮಾತ್ರ. ಉದಯನಿಧಿ ಸ್ಟಾಲಿನ್‌ ತಮಿಳುನಾಡು ಸರ್ಕಾರದಲ್ಲಿ ಹೊಸ ಸೂರ್ಯನಂತೆ ಬೆಳಗಲಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಎಐಡಿಎಂಕೆ ಟೀಕೆ:

‘ತನ್ನ ಕುಟುಂಬವನ್ನು ಪ್ರಮುಖ ಹುದ್ದೆಗಳಿಂದ ದೂರ ಇಡುವುದಾಗಿ’ ಸ್ಟಾಲಿನ್‌ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆ ವಿಡಿಯೊ ಈಗ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ ಎಂದಿರುವ ಎಐಡಿಎಂಕೆ ವಕ್ತಾರ ಕೋವೈ ಸತ್ಯನ್‌, ‘ಸ್ಟಾಲಿನ್‌ ಅವರು ಜನರ ಬಳಿ ಸುಳ್ಳು ಹೇಳಿದ್ದಾರೆ’ ಎಂದು ದೂರಿದ್ದಾರೆ.

‘ಸದ್ಯ ಸಂಪುಟ ಸೇರಿರುವ ಉದಯನಿಧಿ ಅವರು 2024ರ ವೇಳೆಗೆ ಉಪ ಮುಖ್ಯಮಂತ್ರಿ ಹುದ್ದೆಗೇರಬಹುದು. ಬಳಿಕ 2026ರ ವಿಧಾನಸಭಾ ಚುನಾವಣೆ ವೇಳೆಗೆ ಡಿಎಂಕೆಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಬಹುದು’ ಎಂದು ಅವರು ಜರೆದಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣನ್‌ ತಿರುಪತಿ ಅವರು, ‘ಸ್ಟಾಲಿನ್‌ ವಿರೋಧ ಪಕ್ಷದಲ್ಲಿದ್ದಾಗ ತನ್ನ ಕುಟುಂಬದವರು ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದರು. ಅಲ್ಲದೆ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂದೂ ಹೇಳಿದ್ದರು’ ಎಂದು ನೆನಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು