ಗುರುವಾರ , ಜೂನ್ 30, 2022
23 °C

ಬಂಗಾಳ ಹಿಂಸಾಚಾರ‌ ಮಾನವೀಯತೆಗೆ ನಾಚಿಕೆಗೇಡು: ಮಮತಾಗೆ ರಾಜ್ಯಪಾಲ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಬಳಿಕ ನಡೆಯುತ್ತಿರುವ ತಡೆಯಿಲ್ಲದ ಹಿಂಸಾಚಾರ ಪ್ರಕರಣಗಳು ಮಾನವೀಯತೆಗೆ ನಾಚಿಕೆಯನ್ನುಂಟು ಮಾಡುತ್ತಿವೆ ಎಂದು ರಾಜ್ಯಪಾಲ ಜಗದೀಪ್‌ ಧನಖರ್‌ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೋತ್ತರ ಗಲಭೆ ಸಂಬಂಧ ಟ್ವಿಟರ್‌ನಲ್ಲಿ ಕಿಡಿಕಾರಿರುವ ಅವರು, ʼ‌ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವವಿರುವ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆಯುತ್ತಿರುವ ತಡೆಯಿಲ್ಲದ ಹಿಂಸಾಚಾರವು ಮನುಷ್ಯತ್ವಕ್ಕೆ ನಾಚಿಕೆಯನ್ನುಂಟು ಮಾಡುತ್ತಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ನಿಯಂತ್ರಿಸಲು ರಾಜ್ಯ ಪೊಲೀಸ್‌ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಗಲಭೆ ಕೃತ್ಯದಲ್ಲಿ ಭಾಗಿಯಾದವರನ್ನು ಶಿಕ್ಷಿಸಬೇಕು ಮತ್ತು ಶಿಸ್ತು ಮೂಡಿಸಬೇಕುʼ ಎಂದಿದ್ದಾರೆ.

ಹಿಂಸಾಚಾರದ ಬಳಿಕ ಹಾನಿಯಾಗಿರುವ ಮನೆಗಳ ದೃಶ್ಯಗಳನ್ನೊಳಗೊಂಡ ವಿಡಿಯೊ ಹಾಗೂ ಗಲಭೆ ಸಂತ್ರಸ್ತರು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಹಿಂಸಾಚಾರ: ಮನೆಬಿಟ್ಟು ಹೋದವರನ್ನು ವಾಪಸ್ ಕರೆಯಲು ಹೈಕೋರ್ಟ್ ಸೂಚನೆ ​

ʼಬಂಗಾಳದ ಪೊಲೀಸ್‌ ಮಹಾನಿರ್ದೇಶಕರೊಂದಿಗೆ ವಿವರಗಳನ್ನು ಹಂಚಿಕೊಂಡಿದ್ದೇನೆ. ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ತಿಳಿಸಿದ್ದೇನೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಂತಹ ಘೋರ ಲೋಪಗಳನ್ನು ಎಣಿಸುವುದು ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವವು ಶಾಶ್ವತವಾಗಿ ದುರ್ಬಲಗೊಳ್ಳದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗುತ್ತದೆ ಎಂದು ಭಾವಿಸುತ್ತೇನೆʼ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮೇ 2ರಂದು ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದ ಹಲವು ಪ್ರದೇಶಗಳಲ್ಲಿ ಗಲಭೆ ಪ್ರಕರಣಗಳು ವರದಿಯಾಗಿದ್ದವು. ಹಿಂಸಾಚಾರದ ವೇಳೆ ಪಕ್ಷದ 9 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿತ್ತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಅದನ್ನು ಅಲ್ಲಗಳೆದಿತ್ತು.

ಬಳಿಕ, ಗಲಭೆ ಸಂತ್ರಸ್ತರ ಪುನರ್ವಸತಿಗಾಗಿ ಕೊಲ್ಕತ್ತ ಹೈಕೋರ್ಟ್‌ ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರತಿನಿಧಿಗಳನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು.

ಇದನ್ನೂ ಓದಿ: ಬಂಗಾಳ ಹಿಂಸಾಚಾರ: ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ ​

ಚುನಾವಣೆ ನಂತರ ನಡೆದ ಗಲಭೆಯಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಮೇ 25ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಕೋಲ್ಕತ್ತ ಹೈಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ, ಗಲಭೆ ಪೀಡಿತ ಪ್ರದೇಶಗಳಲ್ಲಿನ ಸ್ಥಿತಿ ಹಾಗೂ ಅಲ್ಲಿ ಶಾಂತಿ ನೆಲೆಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು