ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕೇಂದ್ರಿತ ‘ಟೂರಿಸ್ಟ್‌ ವಿಲೇಜ್‌ ನೆಟ್ವರ್ಕ್‌’ ಯೋಜನೆಗೆ ಚಾಲನೆ

ಯುವಕರನ್ನು ಭರವಸೆ, ಶಾಂತಿ ಮತ್ತು ಪ್ರಶಾಂತತೆಯ ರಾಯಭಾರಿಗಳನ್ನಾಗಿಸಲು ಕ್ರಮ
Last Updated 8 ಫೆಬ್ರುವರಿ 2022, 15:32 IST
ಅಕ್ಷರ ಗಾತ್ರ

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ನೇತೃತ್ವದ ಇಲ್ಲಿನ ಆಡಳಿತವು ಯುವ ಕೇಂದ್ರೀತ ‘ಪ್ರವಾಸಿ ಗ್ರಾಮ ನೆಟ್‌ವರ್ಕ್‌’(ಟೂರಿಸ್ಟ್‌ ವಿಲೇಜ್‌ ನೆಟ್‌ವರ್ಕ್‌) ಎಂಬ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯು ಪ್ರವಾಸೋದ್ಯಮಕ್ಕೆ ಆದ್ಯತೆ, ಯುವಕರಿಗೆ ಸುಸ್ಥಿರ ಉದ್ಯೋಗ ನೀಡುವುದರ ಜತೆಗೆ ಕೇಂದ್ರಾಡಳಿತ ಪ್ರದೇಶದ 75ಕ್ಕೂ ಹೆಚ್ಚು ಗ್ರಾಮಗಳ ಅಭಿವೃದ್ಧಿ ಹಾಗೂ ಸುಧಾರಣೆಯ ಉದ್ದೇಶವನ್ನು ಹೊಂದಿರುವುದಲ್ಲದೇ, ಐತಿಹಾಸಿಕ ಹಿನ್ನೆಲೆ, ರಮಣೀಯ ಭೂದೃಶ್ಯ ಹಾಗೂ ಹಾಗೂ ಸಾಂಸ್ಕೃತಿಕ ಮಹತ್ವದಿಂದ ಜನಪ್ರಿಯತೆ ಗಳಿಸಿರುವ ಕೇಂದ್ರಾಡಳಿತ ಪ್ರದೇಶದ ಹಳ್ಳಿಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಸಿಗಲಿದೆ.

ಯುವಕರನ್ನು ಕೇಂದ್ರಿಕರಿಸಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಜಾರಿಗೊಳಿಸಿರುವ ಈ ಯೋಜನೆಯು ಯುವ ಸಮೂಹದ ಆಸೆಗಳ ಈಡೇರಿಕೆ ಮತ್ತು ಅವರ ಏಳ್ಗೆಯ ಕಳಕಳಿಯನ್ನು ಹೊಂದಿದೆ. ಕಣಿವೆ ಪ್ರದೇಶದ ಯುವಕರನ್ನು ಭರವಸೆ, ಶಾಂತಿ ಮತ್ತು ಪ್ರಶಾಂತತೆಯ ರಾಯಭಾರಿಗಳನ್ನು ರೂಪಿಸಲು ವೇದಿಕೆ ನೀಡುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

ಈ ಯೋಜನೆಯಡಿ ಕೇಂದ್ರಾಡಳಿತ ಪ್ರದೇಶದಾದ್ಯಂತ ಹೋಮ್‌ಸ್ಟೇಗಳಿಗೆ ಆದ್ಯತೆ ಸಿಗಲಿದೆ. ಇದರಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆ ವೃದ್ಧಿಯಾಗಲಿದ್ದು, ಈ ಮೂಲಕ ಯುವಕರು ಉದ್ಯಮಿಗಳಾಗಲಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗಿದೆ.

ಈ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ‘ಪ್ರತಿ ಗ್ರಾಮದ ವಿಶೇಷತೆಯನ್ನು ಗುರುತಿಸಿ ಅದರ ಭೂದೃಶ್ಯವನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಲಿದೆ. ಇದರ ಜತೆಗೆ ದೇಶಿಯ ಜ್ಞಾನ ವ್ಯವಸ್ಥೆ ಜತೆಗೆ ಸಾಂಸ್ಕೃತಿಕ ವೈವಿದ್ಯ ಮತ್ತು ಈ ಗ್ರಾಮಗಳ ಪರಂಪರೆಯನ್ನು ಸಮರ್ಥವಾಗಿ ಬಿಂಬಿಸಲಿದೆ’ ಎಂದು ಹೇಳಿದರು.

‘ಜಮ್ಮು ಮತ್ತು ಕಾಶ್ಮಿರದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪೂರಕ ವಾತಾವರಣ ಇರುವುದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಪ್ರಾಧ್ಯಾನ್ಯತೆ, ಗ್ರಾಮಗಳ ಸುಸ್ಥಿರ ಅಭಿವೃದ್ಧಿಗೆ ಆರ್ಥಿಕ ಬೆಂಬಲ ನೀಡಲಾಗುವುದು. ಯೋಜನೆಯ ಭಾಗವಾಗಿರುವ ಗ್ರಾಮಗಳಿಗೆ ಡಿಜಿಟಲ್‌ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದರು.

‘ವಿಭಿನ್ನ ನೆಲೆಯ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಪ್ರಪಂಚದ ವಿವಿಧ ಭಾಗಗಳ ಜನರು ಇಲ್ಲಿನ ಹೋಂಸ್ಟೇಗಳಿಗೆ ಭೇಟಿ ನೀಡುವುದರಿಂದ ಇದು ದೂರದೃಷ್ಟಿಯ ಸಾಂಸ್ಕೃತಿಕ ವಿನಿಮಯಕ್ಕೆ ನಾಂದಿ ಹಾಡಲಿದೆ’ ಎಂದು ಸರ್ಕಾರದ ವಕ್ತಾರರು ತಿಳಿಸಿದರು.

‘ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಮತ್ತು ಸಂಬಂಧಿತ ವಲಯಗಳಲ್ಲಿ ಅತ್ಯಾಧುನಿಕ ಚಟುವಟಿಕೆಗಳ ವಿನಮಯಕ್ಕೆ ಸಹಕಾರಿಯಾಗಲಿದೆ. ಇದು ಪ್ರಪಂಚದಾದ್ಯಂತ ಹೆಸರುವಾಸಿಯಾದ ಇಲ್ಲಿನ ಕರಕುಶಲ ಮತ್ತು ಕೈಮಗ್ಗಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಸಹಾಯವಾಗಲಿದೆ’ ಎಂದು ಹೇಳಿದರು.

‘ಈ ಉದ್ದೇಶಿತ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಲಿಂಗ ತಾರತಮ್ಯ ತೊಲಗಿಸುವ ಸಮ ಮತ್ತು ಅಭಿವೃದ್ಧಿಶೀಲ ಸಮಾಜ ಸೃಷ್ಟಿಗೆ ನೆರವಾಗಲಿದೆ’ ಎಂದು ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT