ಶುಕ್ರವಾರ, ಫೆಬ್ರವರಿ 26, 2021
20 °C
2025ರ ವೇಳೆಗೆ ₹ 1.75 ಲಕ್ಷ ಕೋಟಿ ವ್ಯವಹಾರ ಗುರಿ

ರಕ್ಷಣಾ ಕ್ಷೇತ್ರ: ಆಕಾಶ್‌ ಕ್ಷಿಪಣಿ ವ್ಯವಸ್ಥೆ ರಫ್ತಿಗೆ ಕೇಂದ್ರ ಸಂಪುಟ ಅಸ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ರಪ್ತು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಈ ಕ್ಷಿಪಣಿ ವ್ಯವಸ್ಥೆ ಖರೀದಿಸಲು ವಿವಿಧ ದೇಶಗಳು ಸಲ್ಲಿಸುವ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಲು ಸಮಿತಿಯೊಂದನ್ನು ರಚಿಸಲು ಸಹ ಅನುಮೋದನೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆತ್ಮನಿರ್ಭರ ಭಾರತ ಯೋಜನೆಯಡಿ ರಕ್ಷಣಾ ಕ್ಚೇತ್ರದಲ್ಲಿ ಉತ್ಪಾದನೆ ಹಾಗೂ ರಫ್ತು ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, 20205ರ ವೇಳೆಗೆ ಈ ಕ್ಷೇತ್ರದಲ್ಲಿ ₹ 1.75 ಲಕ್ಷ ಕೋಟಿ ವ್ಯವಹಾರದ ಗುರಿ ಹೊಂದಲಾಗಿದೆ.

ಆಕಾಶ್‌ ಕ್ಷಿಪಣಿ ವ್ಯವಸ್ಥೆಯಲ್ಲಿ ಬಳಸುವ ಶೇ 96ರಷ್ಟು ಬಿಡಿಭಾಗಗಳನ್ನು ದೇಶೀಯವಾಗಿಯೇ ತಯಾರಿಸಲಾಗುತ್ತಿದೆ. ನೆಲದಿಂದ ಆಕಾಶಕ್ಕೆ ಚಿಮ್ಮುಬಲ್ಲ ಈ ಕ್ಷಿಪಣಿಗಳು 25 ಕಿ.ಮೀ. ದೂರದಲ್ಲಿನ ಗುರಿಯನ್ನು ನಿಖರವಾಗಿ ಹೊಡೆದುರಳಿಸಬಲ್ಲದು.

‘ಆತ್ಮನಿರ್ಭರ ಭಾರತ ಯೋಜನೆಯಡಿ ಕ್ಷಿಪಣಿಗಳು ಹಾಗೂ ಯುದ್ಧಸಾಮಗ್ರಿಗಳು ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪಾದನೆಗೆ ಒತ್ತು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಗುಣಮಟ್ಟ ಹಾಗೂ ದರಕ್ಕೆ ಸಂಬಂಧಿಸಿದಂತೆ ದೇಶವು ಹೆಚ್ಚು ಸ್ಪರ್ಧಾತ್ಮಕವಾಗಿರಲು ಸಂಪುಟದ ಈ ನಿರ್ಧಾರ ನೆರವಾಗಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಭೆ ಬಳಿಕ ಟ್ವೀಟ್‌ ಮಾಡಿದ್ದಾರೆ.

ಒಪ್ಪಂದಕ್ಕೆ ಅಸ್ತು: ಉಭಯ ದೇಶಗಳ ಬಾಹ್ಯಾಕಾಶವನ್ನು ಹೆಚ್ಚು ರಚನಾತ್ಮಕವಾಗಿ ಬಳಕೆ ಮಾಡುವ ಸಂಬಂಧ ಭಾರತ ಮತ್ತು ಭೂತಾನ್‌ ನಡುವೆ ಒಪ್ಪಂದಕ್ಕೆ ಸಹ ಸಚಿವ ಸಂಪುಟ ಅನುಮೋದನೆ ನೀಡಿತು.

ಕಳೆದ ನವೆಂಬರ್‌ 19ರಂದು ಉಭಯ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ದೂರಸಂವೇದಿ ವ್ಯವಸ್ಥೆ, ಉಪಗ್ರಹ ಸಂವಹನ, ನೆವಿಗೇಷನ್‌, ಬಾಹ್ಯಾಕಾಶ ವಿಜ್ಞಾನ ಮತ್ತು ಅನ್ವೇಷಣೆಯಲ್ಲಿ ಸಹಕಾರಕ್ಕೆ ಈ ಒಪ್ಪಂದ ಸಹಕಾರಿಯಾಗಲಿದೆ.

ರಾಯಭಾರಿ ಕಚೇರಿ ಆರಂಭಕ್ಕೆ ಅನುಮೋದನೆ: ಎಸ್ಟೋನಿಯಾ,  ಪರಾಗ್ವೆ ಹಾಗೂ ಡೊಮಿನಿಕನ್‌ ರಿಪಬ್ಲಿಕ್‌ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿಗಳನ್ನು ಆರಂಭಿಸಲು ಸಹ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.

‘ಈ ದೇಶಗಳೊಂದಿಗೆ ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧ ವೃದ್ಧಿಗೆ ಈ ನಡೆದ ಸಹಕಾರಿಯಾಗಲಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು