ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌: ಕೇಂದ್ರದ ನಿಲುವು ಬದಲು

ಯಾರೊಂದಿಗೂ ಪ್ರತಿ ಹಂಚಿಕೊಳ್ಳಬೇಡಿ ಎಂಬ ಸೂಚನೆ ಹಿಂದಕ್ಕೆ
Last Updated 29 ಮೇ 2022, 20:27 IST
ಅಕ್ಷರ ಗಾತ್ರ

ನವದೆಹಲಿ: ಆಧಾರ್‌ ಕಾರ್ಡ್‌ನ ಪ್ರತಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಎಂದು ನೀಡಿದ್ದ ಎಚ್ಚರಿಕೆಯನ್ನು ಕೇಂದ್ರ ಸರ್ಕಾರವು ಭಾನುವಾರ ಹಿಂದಕ್ಕೆ ಪಡೆದಿದೆ. ಹೀಗೆ ಹಂಚಿಕೊಂಡರೆ ಆ ಸಂಸ್ಥೆಯು ಆಧಾರ್‌ ಅನ್ನು ದುರುಪಯೋಗ ಮಾಡಿಕೊಳ್ಳ
ಬಹುದು ಎಂದು ಕೇಂದ್ರ ಸರ್ಕಾರವು
ಈ ಹಿಂದೆ ನೀಡಿದ್ದ ಸೂಚನೆಯಲ್ಲಿ ಹೇಳಿತ್ತು.

ಬಳಕೆದಾರರ ಗುರುತು ಮತ್ತು ಖಾಸಗಿತನವನ್ನು ರಕ್ಷಿಸಿಕೊಳ್ಳಲು ಅಗತ್ಯ
ವಾದ ಎಲ್ಲ ಪರಿಕರಗಳು ಆಧಾರ್‌
ವ್ಯವಸ್ಥೆಯಲ್ಲಿ ಇವೆ. ಆಧಾರ್‌ ಬಳಕೆ ಮತ್ತು ಹಂಚಿಕೆಯ ಸಂದರ್ಭದಲ್ಲಿ ‘ಸಾಮಾನ್ಯ ವಿವೇಕ’ ಬಳಸಿ ಎಂದಷ್ಟೇ ಹೇಳಲಾಗಿದೆ ಎಂದು ಸರ್ಕಾರದ ಹೊಸ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಧಾರ್‌ ಪ್ರತಿಯನ್ನು ಹಂಚಿಕೊಳ್ಳ
ಬೇಡಿ ಎಂದು ಸರ್ಕಾರ ನೀಡಿದ್ದ ಸೂಚನೆಯು ಜನರಲ್ಲಿ ಗೊಂದಲ ಮತ್ತು ದಿಗಿಲು ಮೂಡಲು ಕಾರಣವಾಗಿತ್ತು. ಹಾಗಾಗಿ ಹೊಸ ಹೇಳಿಕೆಯ ಮೂಲಕ ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಈ ಸ್ಪಷ್ಟೀಕರಣ ನೀಡಿದೆ.

ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು ಮಾತ್ರ ಕಾಣುವಂತಹ ಆಧಾರ್‌ ಕಾರ್ಡ್‌ನ ಪ್ರತಿಯನ್ನು ಹಂಚಿಕೊಳ್ಳಿ, ಅಲ್ಲ ಅಂಕೆಗಳೂ ಕಾಣುವ ಆಧಾರ್‌ ಕಾರ್ಡ್‌ನ ಪ್ರತಿಯನ್ನು ಎಲ್ಲ ಸಂಸ್ಥೆಗಳ ಜತೆಗೆ ಹಂಚಿಕೊಳ್ಳಬೇಡಿ ಎಂದು ಯುಐಡಿಎಐ ಶುಕ್ರವಾರ ಹೊರಡಿಸಿದ್ದ ಹೇಳಿಕೆಯಲ್ಲಿ ತಿಳಿಸಿತ್ತು. ಹೋಟೆಲ್‌ ಅಥವಾ ಸಿನಿಮಾ ಮಂದಿರದಂತಹ ಖಾಸಗಿ ಸಂಸ್ಥೆಗಳಿಗೆ ಆಧಾರ್‌ನ ಪ್ರತಿ ಪಡೆದುಕೊಳ್ಳಲು ಪರವಾನಗಿ ಇಲ್ಲ. ಹಾಗಾಗಿ ಇಂತಹ ಸಂಸ್ಥೆಗಳಿಗೆ ಆಧಾರ್‌ ಪ್ರತಿ ನೀಡಬಾರದು ಎಂದೂ ಶುಕ್ರವಾರದ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಆಧಾರ್‌ ಕಾರ್ಡ್‌ನ ಪ್ರತಿಯನ್ನು ಹಂಚಿಕೊಳ್ಳುವುದು ದುರ್ಬಳಕೆಗೆ ಕಾರಣ
ವಾಗಬಹುದು ಎಂಬ ಹೇಳಿಕೆಯು ತಪ್ಪು ಗ್ರಹಿಕೆಗೆ ಅವಕಾಶ ಮಾಡಿಕೊಡಬಹುದು ಎಂಬ ಕಾರಣಕ್ಕೆ ಆ ಸೂಚನೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಯುಐಡಿಎಐ ಹೇಳಿದೆ.

ಯುಐಡಿಎಐನ ಸೂಚನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಮಾಧ್ಯಮ ಹೇಳಿಕೆಯ ಪ್ರತಿ, ವರದಿಯ ಫೋಟೊಗಳು ವೈರಲ್‌ ಆಗಿದ್ದವು. ಟ್ವಿಟರ್‌ನಲ್ಲಿ ಭಾನುವಾರ ಇದು ಭಾರತದಲ್ಲಿ ಸಂಚಲನ ಮೂಡಿಸಿದ ಮೊದಲ ಹತ್ತು ವಿಚಾರಗಳಲ್ಲಿ ಒಂದಾಗಿತ್ತು.

ಹೋರಾಟಗಾರರಿಂದ ಆಕ್ಷೇಪ

ಯುಐಡಿಎಐ ನೀಡಿದ ಹೇಳಿಕೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಬಳಕೆದಾರರ ಖಾಸಗಿತನ ರಕ್ಷಣೆಯ ಬಗ್ಗೆ ಯುಐಡಿಎಐ ಬಹಳ ಹಿಂದೆಯೇ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಮತ್ತು ಬಳಕೆದಾರರಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡಬೇಕಿತ್ತು ಎಂದು ಖಾಸಗಿತನದ ಹಕ್ಕುಗಳ ಪರ ಹೋರಾಟಗಾರರು ಹೇಳಿದ್ದಾರೆ.

‘ನಾನು ಸುಮಾರು ನೂರು ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದೇನೆ ಮತ್ತು ಎಲ್ಲರೂ ನನ್ನ ಆಧಾರ್‌ನ ಪ್ರತಿಯನ್ನು ಇರಿಸಿಕೊಂಡಿದ್ದಾರೆ. ಈಗ ಇದೇನು’ ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

‘ಗುರುತು ದೃಢೀಕರಣಕ್ಕೆ ನೀವು ಆಧಾರ್‌ ಅನ್ನು ಬಳಸಿದ್ದರೆ, ಅದನ್ನು ಬೇರೊಬ್ಬರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಯುಐಡಿಎಐ ವೆಬ್‌ಸೈಟ್‌ನಲ್ಲಿ ಇದೆ.

ಖಾಸಗಿತನದ ಹಕ್ಕಿನ ವಿಚಾರವು 2018ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲು
ಏರಿತ್ತು. ಆಧಾರ್‌ನ ಸಿಂಧುತ್ವವನ್ನು ಕೋರ್ಟ್‌ ಎತ್ತಿ ಹಿಡಿದಿತ್ತು. ಆದರೆ, ಖಾಸಗಿ
ತನದ ರಕ್ಷಣೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದಿತ್ತು. ಎಲ್ಲ ಸೇವೆಗಳಿಗೂ ಆಧಾರ್‌ ಕಡ್ಡಾಯ ಮಾಡಬಾರದು ಎಂದಿತ್ತು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್‌ ಕಡ್ಡಾಯಗೊಳಿಸಲು ಅವಕಾಶ ಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT