ಮೋದಿ ವಿರೋಧಿಸುವುದೇ ಕೆಲಸ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ವಿರೋಧಿಸುವುದೇ ಪ್ರತಿಪಕ್ಷಗಳ ಕೆಲಸ. ಈ ಉದ್ದೇಶದಿಂದ ಪ್ರತಿಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ಆರೋಪಿಸಿದ್ದಾರೆ.
‘ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕು ಎಂದು ಬಯಸಿದ್ದವು. ಆದರೆ ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ಮೋದಿ ನೇತೃತ್ವದ ಸರ್ಕಾರದ ವಿರುದ್ಧವಾಗಿ ನಿಂತಿವೆ’ ಎಂದರು.
ರೈತ ಸಂಘಟನೆಗಳು ಮಂಗಳವಾರ (ಡಿ.8) ಕರೆ ನೀಡಿರುವ ಭಾರತ್ ಬಂದ್‌ಗೆ ಬಿಜೆಪಿಯೇತರ 21 ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಪ್ರತಿಪಕ್ಷಗಳ ದ್ವಂದ್ವ ನಿಲುವನ್ನು ಅವರು ತರಾಟೆಗೆ ತೆಗೆದುಕೊಂಡರು. ‘ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ರದ್ದುಗೊಳಿಸಿ, ರೈತರನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುವುದಾಗಿ ಕಾಂಗ್ರೆಸ್ 2019ರ ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ಕೃಷಿಯಲ್ಲಿ ಖಾಸಗಿ ರಂಗದ ಪಾಲ್ಗೊಳ್ಳುವಿಕೆಯನ್ನು ಶರದ್ ಪವಾರ್ ಅವರು ಪ್ರತಿಪಾದಿಸಿದ್ದರು. ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಏನು ಮಾಡಿತ್ತೋ ಅದನ್ನೇ ನಾವು ಮಾಡಲು ಹೊರಟರೆ ವಿರೋಧ ವ್ಯಕ್ತವಾಗುತ್ತಿದೆ. ಏಕೆ ಈ ದ್ವಂದ್ವ’ ಎಂದು ಅವರು ಪ್ರಶ್ನಿಸಿದ್ದಾರೆ.
ಪವಾರ್ ಅವರು 2010ರಲ್ಲಿ ಬರೆದಿದ್ದರು ಎನ್ನಲಾದ ಪತ್ರವನ್ನಿಟ್ಟುಕೊಂಡು ಬಿಜೆಪಿಯು ಜನರ ದಾರಿ ತಪ್ಪಿಸುತ್ತಿದೆ ಎಂದು ಎನ್‌ಸಿಪಿ ಪ್ರತಿಕ್ರಿಯಿಸಿದೆ.
ಕೇಜ್ರಿವಾಲ್ ಭೇಟಿ: ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ–ಹರಿಯಾಣ ಗಡಿಯ ಸಿಂಘುವಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಭೇಟಿ ನೀಡಿ, ರೈತರಿಗೆ ಸರ್ಕಾರದಿಂದ ಮಾಡಲಾಗಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು. ಶೌಚಾಲಯ ಸೇರಿದಂತೆ ಸರ್ಕಾರ ಒದಗಿಸಿರುವ ಮೂಲ ಸೌಲಭ್ಯಗಳಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ರೈತರ ಸೇವಕನಾಗಿ ಬಂದಿದ್ದೇನೆ. ರೈತರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಈ ಹೋರಾಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗುವ ವಿಶ್ವಾಸವಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
***
ಇದು ಕಾಂಗ್ರೆಸ್ಸಿನ ರಾಜಕೀಯ ಅಸ್ತಿತ್ವದ ಪ್ರಶ್ನೆ. ಪ್ರತೀ ಚುನಾವಣೆಯನ್ನೂ ಸೋಲುವ ಪಕ್ಷ, ರಾಜಕೀಯದಲ್ಲಿ ಉಳಿದುಕೊಳ್ಳಲು ಯಾವುದೇ ಪ್ರತಿಭಟನೆಗಳಲ್ಲಿ ಇರುತ್ತದೆ
- ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
***
ರೈತರ ಬೇಡಿಕೆ ಒಪ್ಪಿಕೊಂಡು, ಹೋರಾಟ ಕೊನೆಗಾಣಿಸಬೇಕು. ವಯಸ್ಸಾದವರು, ಮಹಿಳೆಯರು, ಮಕ್ಕಳು ಈ ಚಳಿಯಲ್ಲಿ ಬೀದಿಯಲ್ಲಿ ಚಳವಳಿ ಮಾಡುತ್ತಿದ್ದಾರೆ
- ಗೋಪಾಲ್ ರಾಯ್, ದೆಹಲಿ ಸರ್ಕಾರದ ಕೃಷಿ ಸಚಿವ
***
ಕಾಯ್ದೆ ಬೆಂಬಲಿಸಿದ ಪ್ರಗತಿಪರ ರೈತರು
ಒಂದೆಡೆ ಕೃಷಿ ಕಾಯ್ದೆ ವಿರೋಧಿಸಿ ಮಂಗಳವಾರ ದೇಶವ್ಯಾಪಿ ಬಂದ್ ಆಯೋಜನೆಗೊಂಡಿದ್ದರೆ, ಮತ್ತೊಂದೆಡೆ ಹರಿಯಾಣದ 20ಕ್ಕೂ ಹೆಚ್ಚು ರೈತರ ಒಕ್ಕೂಟ ಕಾಯ್ದೆಗಳಿಗೆ ಬೆಂಬಲ ಸೂಚಿಸಿದೆ. ಪದ್ಮಶ್ರೀ ಪುರಸ್ಕೃತ ಕಮಲ್‌ಸಿಂಗ್ ಚವಾಣ್ ನೇತೃತ್ವದ ತಂಡವು ಕೇಂದ್ರ ಕೃಷಿ ಸಚಿವರನ್ನು ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿತು.
ತಮ್ಮನ್ನು ‘ಪ್ರಗತಿಪರ ರೈತರು’ ಎಂದು ಕರೆದುಕೊಂಡಿರುವ ಗುಂಪು, ಕೃಷಿ ಕಾಯ್ದೆಗಳನ್ನು ಸಂಪೂರ್ಣ ವಾಪಸ್ ಪಡೆಯುವ ಅಗತ್ಯವಿಲ್ಲ. ಆದರೆ ಕೆಲವು ತಿದ್ದುಪಡಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ.
ಅಖಿಲೇಶ್ ಪೊಲೀಸ್ ವಶಕ್ಕೆ
ಕೃಷಿ ಕಾಯ್ದೆ ವಿರೋಧಿಸಿ ಲಖನೌದ ಹೃದಯಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಿಷೇಧಾಜ್ಞೆ ಉಲ್ಲಂಘಿಸಿದ ಕಾರಣಕ್ಕೆ ಪ್ರತಿಭಟನಾಕಾರರನ್ನು ಬಂಧಿಸಿ ಬಸ್‌ನಲ್ಲಿ ಕರೆದೊಯ್ಯಲಾಯಿತು.
‘ಕಾಯ್ದೆಗಳು ರೈತರಿಗೆ ಒಳ್ಳೆಯದನ್ನೇ ಮಾಡುತ್ತವೆ ಎಂದಾದರೆ, ಅವು ಯಾಕಿಷ್ಟು ವಿವಾದದಿಂದ ಕೂಡಿವೆ? ಸರ್ಕಾರ ಏಕಿಷ್ಟು ಕಠಿಣ ನಡೆ ಅನುಸರಿಸುತ್ತಿದೆ. ಹೊಸ ಕಾಯ್ದೆಗಳನ್ನು ರೈತರು ವಿರೋಧಿಸಿದರೆ, ಸರ್ಕಾರ ಅವನ್ನು ವಾಪಸ್ ಪಡೆಯಬೇಕು’ ಎಂದು ಅಖಿಲೇಶ್ ಆಗ್ರಹಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.