ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್‌ಲಾಕ್ 5: ಶಾಲೆಗಳನ್ನು ಮತ್ತೆ ತೆರೆಯಲು ಮಾರ್ಗಸೂಚಿ ಹೊರಡಿಸಿದ ಶಿಕ್ಷಣ ಸಚಿವಾಲಯ

Last Updated 5 ಅಕ್ಟೋಬರ್ 2020, 14:16 IST
ಅಕ್ಷರ ಗಾತ್ರ

ನವದೆಹಲಿ: ಅನ್‌ಲಾಕ್ 5ನೇ ಹಂತದಲ್ಲಿ ಅಕ್ಟೋಬರ್ 15ರ ನಂತರ ಶಾಲೆಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಒಎಸ್‌ಇಎಲ್) ಅನುಸಾರ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಮಾರ್ಗಸೂಚಿಗಳ ಪ್ರಕಾರ, ಅಕ್ಟೋಬರ್ 15ರ ನಂತರ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳು ಶ್ರೇಣೀಕೃತ ರೀತಿಯಲ್ಲಿ ತೆರೆಯಬಹುದು. ಹೀಗಿದ್ದರೂ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಬೇಕೆ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಬಹುದಾಗಿದೆ. ಸ್ಥಳೀಯ ಸಂದರ್ಭ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಅಳವಡಿಸಿಕೊಳ್ಳಬಹುದು ಅಥವಾ ಹೊಂದಿಸಿಕೊಳ್ಳಬಹುದೆಂದು ಸಚಿವಾಲಯ ಹೇಳಿದೆ.

ತೆರೆಯಲು ಅನುಮತಿಸಲಾದ ಶಾಲೆಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ ಎಸ್‌ಒಪಿ ಆಧರಿಸಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳು ಸಿದ್ಧಪಡಿಸಿದ ಮಾರ್ಗಸೂಚಿಯನ್ನು ಅನುಸರಿಸಬೇಕು. ಶಾಲೆಗಳನ್ನು ಪುನಃ ತೆರೆಯುವ ಮಾರ್ಗಸೂಚಿಗಳಲ್ಲಿಆರೋಗ್ಯ, ನೈರ್ಮಲ್ಯ ಮತ್ತು ಸುರಕ್ಷತೆ ಮತ್ತು ದೈಹಿಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಲಿಯುವುದಾಗಿದೆ.

ಶಾಲೆಗಳನ್ನು ತೆರೆಯುವ ಮೊದಲು ಶಾಲೆಯ ಎಲ್ಲಾ ಭಾಗಗಳನ್ನು ಸರಿಯಾಗಿ ಶುಚಿಗೊಳಿಸುವಿಕೆ, ಕೈ ತೊಳೆಯುವುದು ಮತ್ತು ಸೋಂಕು ರಹಿತ ಆಸನ ವ್ಯವಸ್ಥೆ, ಸುರಕ್ಷಿತ ಸಾರಿಗೆ ವ್ಯವಸ್ಥೆ, ಸೂಕ್ತ ವೇಳಾಪಟ್ಟಿ, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಮತ್ತು ಹಾಸ್ಟೆಲ್‌ಗಳಲ್ಲಿ ಸುರಕ್ಷಿತ ವಾಸ್ತವ್ಯದ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಅಧಿಕಾರಿಗಳು, ಶಾಲಾ ನಿರ್ವಹಣಾ ಸಮಿತಿಗಳು ಮತ್ತು ಪೋಷಕರು ಸೂಕ್ಷ್ಮವಾಗಿ ವರ್ತಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಶಾಲೆಗಳು ಪ್ರಾರಂಭವಾದ ನಂತರ ದೈಹಿಕ / ಸಾಮಾಜಿಕ ಅಂತರದ ಮಾನದಂಡಗಳನ್ನು ಕಾಪಾಡಿಕೊಳ್ಳುವುದು, ಪರಸ್ಪರರ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು, ತರಗತಿ, ಪ್ರಯೋಗಾಲಯ ಮತ್ತು ಆಟದ ಪ್ರದೇಶಗಳಲ್ಲಿ ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸುವುದು, ಕೈ ಸ್ವಚ್ಛಗೊಳಿಸುವುದು ಮತ್ತು ಉಸಿರಾಟದ ಶಿಷ್ಟಾಚಾರವನ್ನು ಕಾಪಾಡಿಕೊಳ್ಳುವುದು ಮತ್ತು ಶಾಲೆಗೆ ಪ್ರವೇಶಿಸುವ ಮೊದಲು ಸ್ಕ್ರೀನಿಂಗ್ ಮತ್ತು ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ ಮಾತ್ರ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಬಹುದು ಎಂದು ಹೇಳಲಾಗಿದೆ.

ಹಾಜರಾತಿ ಮಾನದಂಡಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇರಬೇಕು ಮತ್ತು ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬದಲು ಆನ್‌ಲೈನ್ ತರಗತಿಗಳನ್ನು ಕೂಡ ಆರಿಸಿಕೊಳ್ಳಬಹುದು ಎಂದು ಮಾರ್ಗಸೂಚಿಗಳು ತಿಳಿಸಿವೆ. ಇದಲ್ಲದೆ, ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ತಯಾರಿಸಲು ಮತ್ತು ಬಡಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಲಾಗಿದೆ.

ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳು, ಶಾಲಾ ಮುಖ್ಯಸ್ಥರು, ಶಿಕ್ಷಕರು, ಪೋಷಕರ ಪಾತ್ರ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದು ಹೇಗೆ ಎಂದು ಪಟ್ಟಿ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT