ಲಖನೌ: ಉತ್ತರ ಪ್ರದೇಶದಲ್ಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷರ ಚುನಾವಣೆ ವೇಳೆ ಭಾರಿ ಹಿಂಸಾಚಾರ ನಡೆದಿದೆ. ಈ ಮಧ್ಯೆ ಬಿಜೆಪಿ ಬೆಂಬಲಿಗರು ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದು, ಅವರ ಕೈಯಲ್ಲಿ ಬಾಂಬ್ ಇತ್ತು ಎಂದು ಆಪಾದಿಸುವ ವಿಡಿಯೊ ವೈರಲ್ ಆಗಿದೆ.
ಇಟಾವಾ ಹೆಚ್ಚುವರಿ ಪೊಲೀಸ್ ಪರಿಷ್ಠಾಧಿಕಾರಿ (ನಗರ) ಪ್ರಶಾಂತ್ ಕುಮಾರ್ ಪ್ರಸಾದ್ ಅವರು, ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಹಿರಿಯ ಅಧಿಕಾರಿಗೆ ಘಟನಾ ಸ್ಥಳದಿಂದ ಫೋನ್ ಮೂಲಕಮಾಹಿತಿ ನೀಡುವ ದೃಶ್ಯವು ವೈರಲ್ ಆಗಿದೆ. ಬಿಜೆಪಿ ಬೆಂಬಲಿಗರ ಕೈಯಲ್ಲಿ ಬಾಂಬ್ ಇತ್ತು ಎಂದೂ ಆಪಾದಿಸುತ್ತಾರೆ.
ಈ ಘಟನೆಯನ್ನು ಇಟಾವಾ ಪೊಲೀಸ್ ವಕ್ತಾರ ಭಾನುವಾರ ದೃಢೀಕರಿಸಿದ್ದು, ಜಿಲ್ಲೆಯ ಬಾರ್‌ಪುರ ಬ್ಲಾಕ್‌ನಲ್ಲಿ ಘಟನೆ ನಡೆದಿದೆ. ಈ ಸಂಬಂಧ ಗುರುತಿಸಲಾಗಿರುವ ಒಬ್ಬ ವ್ಯಕ್ತಿಯ ವಿರುದ್ಧ ಹಾಗೂ ಗುರುತು ಪತ್ತೆಯಾಗದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಶನಿವಾರದಂದು ಬ್ಲಾಕ್ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ನೆರವೇರಿದ್ದು, 17 ಜಿಲ್ಲೆಗಳಿಂದ ಹಿಂಸಾಚಾರದ ಬಗ್ಗೆ ವರದಿಯಾಗಿವೆ.
ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಹಲೆವೆಡೆ ಘರ್ಷಣೆ ನಡೆದಿದೆ. ಈ ಸಂಬಂಧ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಂಚಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಗುಂಪನ್ನು ಚದುರಿಸಲು ಲಾಠಿ ಪ್ರಯೋಗಿಸಲಾಗಿದೆ.
ವಿವಿಧ ಭಾಗಗಳಲ್ಲಿ ನಡೆದ ಹಿಂಸಾಚಾರದಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೆ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
825 ಸ್ಥಾನಗಳ ಪೈಕಿ 635 ಸ್ಥಾನಗಳಲ್ಲಿ ಜಯ ಗಳಿಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.