ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ ಜಾಗದಲ್ಲಿ ವಿವಿಧ ಸೌಲಭ್ಯಗಳ ಕಟ್ಟಡಗಳಿಗೆ ಶಿಲಾನ್ಯಾಸ: ಸಿಎಂ ಯೋಗಿಗೆ ಆಹ್ವಾನ

ಅಯೋಧ್ಯೆಯಲ್ಲಿ ಸಾರ್ವಜನಿಕರಿಗಾಗಿ ಆಸ್ಪತ್ರೆ, ಗ್ರಂಥಾಲಯ ನಿರ್ಮಾಣ: ಸುನ್ನಿ ಕೇಂದ್ರೀಯ ವಕ್ಫ್‌ ಮಂಡಳಿ ನಿರ್ಧಾರ
Last Updated 8 ಆಗಸ್ಟ್ 2020, 11:30 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯ ಧನ್ನಿಪುರ್ ಗ್ರಾಮದಲ್ಲಿ ಮಸೀದಿಗಾಗಿ ನೀಡಿದ ಭೂಮಿಯಲ್ಲಿ ಸಾರ್ವಜನಿಕರಿಗಾಗಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ನಿರ್ಮಿಸುವ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

‘ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಧನ್ನಿಪುರ್ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಿರುವ ಐದು ಎಕರೆ ಭೂಮಿಯಲ್ಲಿ ಆಸ್ಪತ್ರೆ, ಗ್ರಂಥಾಲಯ,ಸಮುದಾಯ ಅಡುಗೆಮನೆ, ಸಂಶೋಧನಾ ಕೇಂದ್ರವನ್ನು ಸಹ ನಿರ್ಮಿಸಲಾಗುವುದು. ಈ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಆಹ್ವಾನ ನೀಡಲಿದ್ದೇವೆ’ ಎಂದು ಸುನ್ನಿ ಕೇಂದ್ರೀಯ ವಕ್ಫ್‌ ಮಂಡಳಿಯು ಮಸೀದಿ ನಿರ್ಮಾಣಕ್ಕಾಗಿ ರಚಿಸಿರುವ ಟ್ರಸ್ಟ್‌ ವಕ್ತಾರ ಅಥಾರ್‌ ಹುಸೈನ್‌ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಜತೆಗೆ ಈ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೂ ನೆರವು ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

ಆದಿತ್ಯನಾಥ್‌ ಅವರು ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ ಇಸ್ಲಾಂನ ನಾಲ್ಕು ಸಿದ್ಧಾಂತಗಳಾದ ಹನಾಫಿ, ಹಂಬಾಲಿ, ಶಫಿ ಮತ್ತು ಮಾಲಿಕಿ ಅನ್ವಯ ಮಸೀದಿಗೆ ಶಿಲಾನ್ಯಾಸ ನೆರವೇರಿಸಲು ಅವಕಾಶ ಇಲ್ಲ’ ಎಂದು ವಿವರಿಸಿದ್ದಾರೆ.

‘ಮಸೀದಿಗೆ ಬಾಬರಿ ಎಂದು ಹೆಸರಿಡುವ ಬಗ್ಗೆ ಯೋಚಿಸಿಲ್ಲ. ನಾಮಕರಣ ಮಾಡುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT