ಸೋಮವಾರ, ಮಾರ್ಚ್ 20, 2023
30 °C

ಉತ್ತರ ಪ್ರದೇಶದಲ್ಲಿ ಆರ್‌ಎಸ್‌ಎಸ್‌ ಮಂಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದ ಮಂದಾಕಿನಿ ನದಿ ತೀರದಲ್ಲಿರುವ ದೇಗುಲಗಳ ಪಟ್ಟಣ ಚಿತ್ರಕೂಟದಲ್ಲಿ ಐದು ದಿನಗಳ ಆರ್‌ಎಸ್ಎಸ್ ಚಿಂತನ ಮಂಥನ ಶಿಬಿರದಲ್ಲಿ ಪಾಲ್ಗೊಳ್ಳಲು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಲ್ಲಿಗೆ ಬಂದಿದ್ದಾರೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು ಸಮ್ಮೇಳನದ ಮುಖ್ಯ ಕಾರ್ಯಸೂಚಿ ಎನ್ನಲಾಗಿದೆ.

‘ದೇಶದ ನಾಗರಿಕರು ಒಂದೇ ಡಿಎನ್‌ಎ ಹಂಚಿಕೊಂಡಿದ್ದಾರೆ ಮತ್ತು ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂದು ಮುಸ್ಲಿಮರು ಭಯಪಡಬಾರದು’ ಎಂಬುದಾಗಿ ಅವರು ನೀಡಿದ್ದ ಹೇಳಿಕೆಗಳು ವಿವಾದ ಸೃಷ್ಟಿಸಿರುವ ಮಧ್ಯೆಯೇ ಈ ಶಿಬಿರ ಆಯೋಜನೆಗೊಂಡಿದೆ. ಈ ಹೇಳಿಕೆಗಳು ಕಾಂಗ್ರೆಸ್, ಬಿಎಸ್‌ಪಿ ಸೇರಿದಂತೆ ಇತರ ಪಕ್ಷಗಳನ್ನು ಕೆರಳಿಸಿವೆ. ಮುಸ್ಲಿಮರ ಮೇಲೆ  ದೌರ್ಜನ್ಯದಲ್ಲಿ ಭಾಗಿಯಾಗಿರುವ ಬಿಜೆಪಿಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷಗಳು ಆಗ್ರಹಿಸಿವೆ.

ಬಿಜೆಪಿ ಮೂಲಗಳ ಪ್ರಕಾರ, ಸಂಘದ ಅಖಿಲ ಭಾರತ ಕಾರ್ಯಕಾರಿ ಸಮಿತಿಯ 20ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ನೂರಾರು ಪ್ರಚಾರಕರು ಸೇರಲಿದ್ದಾರೆ.

ಭಾಗವತ್ ಅವರು ಶಿಬಿರ ಪ್ರಾರಂಭವಾಗುವ ಎರಡು ದಿನಗಳ ಮೊದಲೇ ಸಮ್ಮೇಳನ ಸ್ಥಳವನ್ನು ತಲುಪಿರುವುದು ಸಭೆಯ ಮಹತ್ವವನ್ನು ತಿಳಿಸುತ್ತದೆ. ‘ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವಿಷಯವು ಸಭೆಯ ಕಾರ್ಯಸೂಚಿಯಲ್ಲಿ ಇರಲಿದೆ’ ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂಬ ವರದಿಗಳಿದ್ದು, ಅದರ ಪರಿಣಾಮವು ವಿಧಾನಸಭಾ ಚುನಾವಣೆಯ ಮೇಲೆ ಎಷ್ಟರ ಮಟ್ಟಿಗೆ ಆಗಲಿದೆ ಎಂಬುದರ ಕುರಿತೂ ಸಮಾಲೋಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಭಾಗವತ್ ಅವರು ರಾಜ್ಯದ ಹಿರಿಯ ಬಿಜೆಪಿ ಪದಾಧಿಕಾರಿಗಳನ್ನು ಭೇಟಿಯಾಗುವ ಸಾಧ್ಯತೆಯಿದೆ. ರಾಜ್ಯದ ಕೆಲವು ಹಿರಿಯ ಸಚಿವರು ಭಾಗವತ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎರಡು ತಿಂಗಳ ಹಿಂದೆಯಷ್ಟೇ ಲಖನೌದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕಾರ್ಯತಂತ್ರ ಸಭೆಗಳನ್ನು ನಡೆಸಿದ ಬೆನ್ನಿಗೇ ಈ ಶಿಬಿರ ನಡೆಯುತ್ತಿರುವುದು ಮಹತ್ವ ಪಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು