ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ರಾಹುಲ್, ಅಜಯ್‌ ವಿರುದ್ಧ ಹೇಳಿಕೆ; ಸದನದಲ್ಲಿ ಗದ್ದಲ

Last Updated 24 ಫೆಬ್ರುವರಿ 2021, 10:05 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ವಿರುದ್ಧ ಸಚಿವರೊಬ್ಬರು ನೀಡಿದ ಹೇಳಿಕೆಗಳು ಬುಧವಾರ ಉತ್ತರ ಪ್ರದೇಶದ ವಿಧಾನಸಭೆಯ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.

ಬುಂದೇಲ್‌ಖಂಡ್‌ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ನೀರಾವರಿ ಸಚಿವ ಮಹೇಂದ್ರ ಸಿಂಗ್‌, ಅಜಯ್‌ಕುಮಾರ್‌ ಲಲ್ಲು ಅವರನ್ನು ‘ಅಧ್ಯಕ್ಷರೆಂದು ಕರೆಯುತ್ತಾರಲ್ಲಾ‘ ಎಂದರು. ಜತೆಗೆ ರಾಹುಲ್‌ ಗಾಂಧಿ ಹೆಸರನ್ನು ಹೇಳಿ, ‘ಇವರೆಲ್ಲ ಗರಿಷ್ಠ ಸುಳ್ಳುಗಳನ್ನು ಹೇಳುತ್ತಾರೆ‘ ಎಂದು ಅಣಕಿಸುವಂತೆ ಮಾತನಾಡಿದರು.

ಇದಕ್ಕೂ ಮೊದಲು, ಅಜಯ್‌ಕುಮಾರ್ ಲಲ್ಲು, ಬುಂದೇಲ್‌ಖಂಡ್‌ನಲ್ಲಿ ನೀರಿನ ಕೊರತೆಯಿಂದಾಗಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಮಂಗಳವಾರ ಕೂಡ ಇಬ್ಬರು ರೈತರು ಆತ್ಮಹತ್ಯೆ ಮಾಡಿದ್ದಾರೆ. ಹಾಗಾಗಿ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು‘ ಎಂದು ಸದನವನ್ನು ಕೇಳಿದರು.

‘ಕಾಂಗ್ರೆಸ್‌ ಆಡಳಿತದಲ್ಲಿ ಗರಿಷ್ಠ ಸಂಖ್ಯೆಯ ಆತ್ಮಹತ್ಯೆಗಳು ನಡೆದಿವೆ. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ‘ ಎಂದು ಸಚಿವರು ಪ್ರತಿಪಾದಿಸಿದರು.

ವಿಧಾನಸಭೆಯ ವಿರೋಧಪಕ್ಷದ ನಾಯಕ ರಾಮ್‌ ಗೋವಿಂದ್ ಚೌಧರಿ, ‘ಸದನದಲ್ಲಿ ಭಾಷೆ ಬಳಸುವಾಗ ಎಚ್ಚರವಿರಬೇಕು. ನಾವು ಆಡುವ ಮಾತು ಯಾರಿಗೂ ನೋವುಂಟು ಮಾಡಬಾರದು‘ ಎಂದು ಹೇಳಿದರು.

‘ಹಿಂದಿನ ಆಡಳಿತದಲ್ಲಿ ಬುಂದೇಲ್‌ಖಂಡ್‌ನಲ್ಲಿ ಏನೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆದರೆ, ಅಖಿಲೇಶ್ ಯಾದವ್ ಆಡಳಿತದಲ್ಲಿ ಸಾಕಷ್ಟು ಕೆಲಸಗಳಾಗಿವೆ‘ ಎಂದು ರಾಮ್‌ಗೋವಿಂದ್ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT