ಮಂಗಳವಾರ, ಏಪ್ರಿಲ್ 20, 2021
25 °C
ಮಾಜಿ ರಾಯಭಾರಿ ಬರ್ನ್ಸ್‌ ಅವರೊಂದಿಗೆ ಸಂವಾದದ ವೇಳೆ ರಾಹುಲ್‌ ಗಾಂಧಿ ಕಳವಳ

ಭಾರತದಲ್ಲಿನ ವಿದ್ಯಮಾನಗಳತ್ತ ಅಮೆರಿಕ ಮೌನ: ರಾಹುಲ್‌ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ಧಕ್ಕೆ ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ಆದರೆ, ಭಾರತದಲ್ಲಿನ ಇಂಥ ಹಲವಾರು ವಿದ್ಯಮಾನಗಳ ಬಗ್ಗೆ ಅಮೆರಿಕ ಮೌನವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದರು

ಹಾರ್ವರ್ಡ್‌ ಕೆನಡಿ ಸ್ಕೂಲ್‌ನ ಪ್ರಾಧ್ಯಾಪಕ ಹಾಗೂ ಅಮೆರಿಕದ ಮಾಜಿ ರಾಯಭಾರಿ ನಿಕೋಲಾಸ್‌ ಬರ್ನ್ಸ್‌ ಅವರೊಂದಿಗೆ ಆನ್‌ಲೈನ್‌ ಮೂಲಕ ನಡೆದ ಸಂವಾದದಲ್ಲಿ ‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಮುನ್ನೋಟ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.‘

‘ನನ್ನ ಪ್ರಕಾರ ಅಮೆರಿಕ ಎಂಬುದು ಪ್ರಬುದ್ಧವಾದ ಚಿಂತನಾ ಕ್ರಮದ ಪ್ರತಿರೂಪ. ಸ್ವಾತಂತ್ರ್ಯ ಎಂಬುದು ನಿಮ್ಮ ಸಂವಿಧಾನದ ಮುಖ್ಯ ಆಶಯ. ಅದೇ ತಳಹದಿ. ಹೀಗಾಗಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಅದನ್ನು ರಕ್ಷಿಸುವ ಕೆಲಸ ನಿಮ್ಮಿಂದಾಗಬೇಕು’ ಎಂದು ಅವರು ಅಮೆರಿಕವನ್ನು ಉದ್ದೇಶಿಸಿ ಹೇಳಿದರು.

‘ರಷ್ಯಾ ಮತ್ತು ಚೀನಾದಲ್ಲಿನ ಚಟುವಟಿಕೆಗಳು ಪ್ರಜಾತಾಂತ್ರಿಕ ವ್ಯವಸ್ಥೆ ವಿರುದ್ಧವಾಗಿವೆ’ ಎಂಬುದಾಗಿ ಬರ್ನ್ಸ್‌ ಹೇಳಿದಾಗ, ಅದಕ್ಕೆ ರಾಹುಲ್‌ ಗಾಂಧಿ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಇತರ ದೇಶಗಳ ವಿದ್ಯಮಾನಗಳ ಬಗ್ಗೆ ನೀವು ಮಾತನಾಡುತ್ತೀರಿ. ಆದರೆ, ಭಾರತದಲ್ಲಿನ ಆಗುಹೋಗುಗಳ ಬಗ್ಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’ ಎಂದು ಪುನರುಚ್ಚರಿಸಿದರು.

‘ಭಾರತದಲ್ಲಿ ಪ್ರಸ್ತುತ ಆಡಳಿತಾರೂಢ ಪಕ್ಷ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. 2014ರ ನಂತರ ಈ ವಿದ್ಯಮಾನ ಹೆಚ್ಚಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಹೇಗೆ ಕಾರ್ಯ ನಿರ್ವಹಿಸಬೇಕಿತ್ತೋ ಆ ರೀತಿ ಅವುಗಳಿಗೆ ಕಾರ್ಯನಿರ್ವಹಿಸಲು ಆಗುತ್ತಿಲ್ಲ’ ಎಂದರು.

‘ರಾಜಕೀಯವಾಗಿ ಬಿಜೆಪಿಯ ಮಾರ್ಗದರ್ಶಿಯಾಗಿರುವ ಆರ್‌ಎಸ್‌ಎಸ್‌, ದೇಶದ ಪ್ರಮುಖ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ’ ಎಂದೂ ಆರೋಪಿಸಿದರು.

‘ದೇಶದಲ್ಲಿ ಈಗ ಚುನಾವಣೆಯನ್ನು ಎದುರಿಸಬೇಕು ಎಂದರೆ, ನ್ಯಾಯಾಂಗದಿಂದ ರಕ್ಷಣೆ ಸಿಗಬೇಕು, ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಬೇಕು, ಖರ್ಚು–ವೆಚ್ಚಗಳಿಗೆ ಸಂಬಂಧಿಸಿ ಸಮಾನ ನಿಯಮಗಳು ಅಗತ್ಯ. ಆದರೆ, ಇಂಥ ಯಾವ ಸಾಂಸ್ಥಿಕ–ಮೌಲಿಕ ವ್ಯವಸ್ಥೆಯೂ ಈಗ ದೇಶದಲ್ಲಿ ಇಲ್ಲ’ ಎಂದು ಪ್ರತಿಪಾದಿಸಿದರು.

‘ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳು ಬಿಜೆಪಿ ಹಿಡಿತದಲ್ಲಿವೆ. ಹಣಕಾಸು ಹಾಗೂ ಮಾಧ್ಯಮಗಳ ಮೇಲೆ ಆ ಪಕ್ಷ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ ಕಾಂಗ್ರೆಸ್‌ ಮಾತ್ರವಲ್ಲ, ಇತರ ಪಕ್ಷಗಳಾದ ಬಿಎಸ್‌ಪಿ, ಎಸ್‌ಪಿ, ಎನ್‌ಸಿಪಿ ಸಹ ಈಗ ಚುನಾವಣೆಗಳಲ್ಲಿ ಗೆಲ್ಲಲಾರದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದೂ ಆರೋಪಿಸಿದರು.

‘ಮಾತುಕತೆ, ಚರ್ಚೆಯೇ ಭಾರತದ ಆಧಾರಸ್ತಂಭ. ಅದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆಯೇ ಎಂಬ ಆತಂಕ ನಮ್ಮಲ್ಲಿ ಮನೆ ಮಾಡಿದೆ. ಒಂದು ವೇಳೆ ಅಂಥ ಪರಿಸ್ಥಿತಿ ನಿರ್ಮಾಣವಾದರೆ ಖಂಡಿತ ನಾವು ಭಾರಿ ಸಂಕಷ್ಟಕ್ಕೆ ಸಿಲುಕುತ್ತೇವೆ’ ಎಂದೂ ರಾಹುಲ್‌ ಗಾಂಧಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು