ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಶೇ 40 ಕ್ಷೇತ್ರ ಮಹಿಳೆಯರಿಗೆ ಮೀಸಲು

ಕಾಂಗ್ರೆಸ್‌ನ ಕಾರ್ಯತಂತ್ರ
Last Updated 19 ಅಕ್ಟೋಬರ್ 2021, 19:23 IST
ಅಕ್ಷರ ಗಾತ್ರ

ಲಖನೌ: ಜಾತಿ ಸಮೀಕರಣವನ್ನು ತಮಗೆ ಅನುಕೂಲಕರವಾಗಿ ಪರಿವರ್ತಿಸುವುದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಜಾತಿ ಆಧಾರಿತ ಸಭೆಗಳನ್ನು ನಡೆಸುತ್ತಿರುವುದರ ನಡುವೆಯೇ ಕಾಂಗ್ರೆಸ್‌ ಪಕ್ಷವು ಬೇರೊಂದು ದಾಳ ಉರುಳಿಸಿದೆ. ಉತ್ತರ ಪ್ರದೇಶ ವಿಧಾನಸಭೆಗೆ ನಾಲ್ಕೈದು ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಶೇ 40ರಷ್ಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದೆ. ತಾನು ಮಹಿಳಾ ಪರ ಧ್ವನಿ ಎಂದು ಬಿಂಬಿಸಿಕೊಳ್ಳುವುದು ಇದರ ಗುರಿಯಾಗಿದೆ.

ಉತ್ತರ ಪ್ರದೇಶದ ರಾಜಕಾರಣದಲ್ಲಿ ಇತರ ಪಕ್ಷಗಳು ನಡೆಸುತ್ತಿರುವ ‘ಜಾತಿ ಆಧಾರಿತ ರಾಜಕಾರಣ’ವನ್ನು ಸೋಲಿಸುವುದಕ್ಕಾಗಿ ಮಹಿಳಾ ಶಕ್ತಿಯನ್ನು ಬಳಸಿಕೊಳ್ಳುವ ಕಾರ್ಯತಂತ್ರದ ಬಗ್ಗೆ ಹಲವು ಸುಳಿವುಗಳನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ‍್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿದ್ಧಾರೆ. ಪುರಾತನ ಪಕ್ಷವಾಗಿದ್ದರೂ ಉತ್ತರ ಪ್ರದೇಶದ ರಾಜಕಾರಣದಲ್ಲಿ ಮೂಲೆಗುಂಪಾಗಿರುವ ಪಕ್ಷವನ್ನು ಪುನಶ್ಚೇತನಗೊಳಿಸುವ ಗುರಿಯೂ ಇದರ ಹಿಂದೆ ಇದೆ.

‘ರಾಜ್ಯದ ಮಹಿಳೆಯರು ಒಗ್ಗಟ್ಟಾಗಿಲ್ಲ. ಹಾಗಾಗಿ, ಇಲ್ಲಿನ ರಾಜಕಾರಣದಲ್ಲಿ ಅವರು ದೊಡ್ಡ ಶಕ್ತಿಯಾಗಿ ಹೊರಹೊಮ್ಮುವುದು ಸಾಧ್ಯವಾಗಿಲ್ಲ. ಅವರು ಒಗ್ಗಟ್ಟಾಗುವ ಅಗತ್ಯ ಇದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದು, ಹಣಕಾಸಿನ ನೆರವು ನೀಡುವುದರಿಂದ ಮಹಿಳೆಯರ ಸ್ಥಿತಿ ಉತ್ತಮಗೊಳ್ಳುವುದು ಸಾಧ್ಯವಿಲ್ಲ’ ಎಂದು ಪ್ರಿಯಾಂಕಾ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳನ್ನು ಪ್ರಿಯಾಂಕಾ ಉಲ್ಲೇಖಿಸಿದರು. ಮಹಿಳೆಯರು ತಾರತಮ್ಯಕ್ಕೆ ಒಳಗಾಗಬಾರದು ಮತ್ತು ಅವರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರಕಬೇಕು ಎಂಬುದು ಶೇ 40ರಷ್ಟು ಕ್ಷೇತ್ರಗಳ ಟಿಕೆಟ್‌ ಮಹಿಳೆಯರಿಗೆ ಮೀಸಲು ಇರಿಸಲು ಕಾರಣ ಎಂದು ಪ್ರಿಯಾಂಕಾ ಹೇಳಿದರು.

ಹತ್ರಾಸ್‌ ಅತ್ಯಾಚಾರ ಮತ್ತು ಹತ್ಯೆ, ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣಗಳನ್ನು ಅವರು ಉಲ್ಲೇಖಿಸಿದರು. ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇರುವುದೇ ದ್ವೇಷದ ವಾತಾವರಣ ಸೃಷ್ಟಿ ಆಗಲು ಕಾರಣ ಎಂದರು.

‘ರಾಜ್ಯದಲ್ಲಿ ಪ್ರವಾಸ ಮಾಡಿ ಸಮಾಜದ ವಿವಿಧ ವರ್ಗಗಳ ಮಹಿಳೆಯರನ್ನು ಭೇಟಿ ಆಗಿದ್ದೇನೆ. ಈ ಎಲ್ಲರೂ ತಾರತಮ್ಯದ ಸಂತ್ರಸ್ತರೇ ಆಗಿದ್ಧಾರೆ. ಇವರು ಸಮಾಜ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಇಚ್ಛೆ ಉಳ್ಳವರು’ ಎಂದು ಪ್ರಿಯಾಂಕಾ ಹೇಳಿದರು.

ಈಗಾಗಲೇ ರಾಜಕೀಯದಲ್ಲಿ ಇರುವ ವ್ಯಕ್ತಿಗಳ ಹೆಂಡತಿ–ಹೆಣ್ಣು ಮಕ್ಕಳನ್ನು ಕಣಕ್ಕೆ ಇಳಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶದ ಜತೆಗೆ ಚುನಾವಣೆ ನಡೆಯಲಿರುವ ಪಂಜಾಬ್‌ಗೂ ಇದು ಅನ್ವಯವೇ ಎಂಬ ಪ್ರಶ್ನೆಗೆ, ತಾವು ಉತ್ತರ ಪ್ರದೇಶದ ಉಸ್ತುವಾರಿ ಮಾತ್ರ ಎಂದು ಅವರು ಉತ್ತರಿಸಿದರು. ಮಹಿಳೆಯರಿಗೆ ಶೇ 40ರಷ್ಟು ಸೀಟುಗಳನ್ನು ಮೀಸಲಿಡುವ ನಿಲುವನ್ನು ಅಲ್ಲಿಯೂ ಅಳವಡಿಸಿಕೊಂಡರೆ ಉತ್ತಮ ಎಂದರು.

ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಸ ತಂತ್ರವಲ್ಲ

ಉತ್ತರ ಪ್ರದೇಶದ ಮತದಾರರಲ್ಲಿ ಮಹಿಳೆಯರ ಪ್ರಮಾಣ ಶೇ 45.89ರಷ್ಟಿದೆ. ಮಹಿಳಾ ಮತದಾರರ ಸಂಖ್ಯೆ 6.70 ಕೋಟಿ. 2019ರ ಲೋಕಸಭಾ ಚುನಾವಣೆಯಲ್ಲಿ 3.99 ಕೋಟಿ ಮಹಿಳೆಯರು ಮತ ಚಲಾಯಿಸಿದ್ದರು.

ಮಹಿಳೆಯರನ್ನು ಕೇಂದ್ರ ಸ್ಥಾನಕ್ಕೆ ತರುವುದು ಹೊಸ ಕಾರ್ಯತಂತ್ರವೇನೂ ಅಲ್ಲ. ಚಂದ್ರಬಾಬು ನಾಯ್ಡು (ಟಿಡಿಪಿ), ನಿತೀಶ್ ಕುಮಾರ್‌ (ಜೆಡಿಯು), ನವೀನ್ ಪಟ್ನಾಯಕ್‌ (ಬಿಜೆಡಿ), ಮಮತಾ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್‌) ಮತ್ತು ಅರವಿಂದ ಕೇಜ್ರಿವಾಲ್‌ (ಎಎಪಿ) ಮಹಿಳಾ ಕೇಂದ್ರೀತ ಯೋಜನೆಗಳನ್ನು ಜಾರಿಗೆ ತಂದು ಅಧಿಕಾರಕ್ಕೆ ಏರಿದ ನಿದರ್ಶನಗಳು ಇವೆ.

ಹೆಣ್ಣು ಮಕ್ಕಳಿಗೆ ಸೈಕಲ್ ನೀಡುವ ಯೋಜನೆಯನ್ನು ಆಂಧ್ರ ಪ್ರದೇಶದಲ್ಲಿ ನಾಯ್ಡು ಮತ್ತು ಬಿಹಾರದಲ್ಲಿ ನಿತೀಶ್‌ ಅವರು ಜಾರಿಗೆ ತಂದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಶೇ 33ರಷ್ಟು ಸೀಟುಗಳನ್ನು ಪಟ್ನಾಯಕ್‌ ಅವರು ಮಹಿಳೆಯರಿಗೆ ನೀಡಿದ್ದರು. ತಮ್ಮ ಪಕ್ಷದಿಂದ ಗೆದ್ದ ಜನಪ್ರತಿನಿಧಿಗಳಲ್ಲಿ ಕನಿಷ್ಠ ಶೇ 30ರಷ್ಟು ಮಹಿಳೆಯರೇ ಇದ್ಧಾರೆ ಎಂದು ತೃಣಮೂಲ ಕಾಂಗ್ರೆಸ್‌ ಸದಾ ಹೇಳಿಕೊಳ್ಳುತ್ತದೆ.

ಕಷ್ಟಕಾಲದಲ್ಲಿ ಮಹಿಳೆಯರ ನೆನಪು: ಮಾಯಾವತಿ ಟೀಕೆ

‘ಅಧಿಕಾರದಲ್ಲಿದ್ಧಾಗ, ಒಳ್ಳೆಯ ದಿನಗಳನ್ನು ಅನುಭವಿಸುತ್ತಿರುವಾಗ ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಹಿಂದುಳಿದವರು, ಮಹಿಳೆಯರ ನೆನಪೇ ಇರುವುದಿಲ್ಲ. ಆದರೆ, ಕೆಟ್ಟ ದಿನಗಳು ದೂರ ಸರಿಯುವುದೇ ಇಲ್ಲ ಎಂದಾದಾಗ, ಆ ಪಕ್ಷಕ್ಕೆ ಉತ್ತರ ಪ್ರದೇಶದ ಮಹಿಳೆಯರು ನೆನಪಾಗುತ್ತದೆ. ಪಂಜಾಬ್‌ನಲ್ಲಿ ದಲಿತರ ನೆನಪಾದ ಹಾಗೆ’ ಎಂದು ಮಾಯಾವತಿ ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40ರಷ್ಟು ಸೀಟು ಮೀಸಲು ನಿರ್ಧಾರಕ್ಕೆ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ಧಾರೆ.

ಮಹಿಳೆಯರ ಅಭಿವೃದ್ಧಿಗೆ ಬದ್ಧತೆಯ ಪ್ರಯತ್ನ ಮಾಡಲು ಕಾಂಗ್ರೆಸ್‌ಗೆ ಇಚ್ಛಾಶಕ್ತಿಯ ಕೊರತೆ ಇದೆ. ಈಗಿನ ಘೋಷಣೆಯು ಚುನಾವಣಾ ತಂತ್ರ ಮಾತ್ರ ಎಂದು ಮಾಯಾವತಿ ಟೀಕಿಸಿದ್ಧಾರೆ.

ಮಹಿಳೆಯರ ಬಗ್ಗೆ ಕಾಂಗ್ರೆಸ್‌ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮಸೂದೆ ಅಂಗೀಕಾರ ಆಗುವ ಹಾಗೆ ಅಧಿಕಾರದಲ್ಲಿ ಇದ್ಧಾಗ ಏಕೆ ನೋಡಿಕೊಳ್ಳಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಏನನ್ನೋ ಹೇಳುವುದು ಮತ್ತೇನನ್ನೋ ಮಾಡುವುದು ಕಾಂಗ್ರೆಸ್‌ನ ಸ್ವಭಾವ ಎಂದೂ ಅವರು ಟೀಕಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT