ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Elections: ಬಿಜೆಪಿಯನ್ನು ಸೋಲಿಸುವೆ– ಅಖಿಲೇಶ್ ‘ಅನ್ನ ಸಂಕಲ್ಪ’

ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ, 15 ದಿನದಲ್ಲಿ ಕಬ್ಬು ಬಾಕಿ ಪಾವತಿ ಭರವಸೆ
Last Updated 17 ಜನವರಿ 2022, 19:55 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರುಲಖಿಂಪುರ ಖೇರಿ ಜಿಲ್ಲೆಯ ರೈತ ತೇಜಿಂದರ್ ಸಿಂಗ್ ವಿರ್ಕ್ ಸಮ್ಮುಖದಲ್ಲಿ ‘ಅನ್ನ ಸಂಕಲ್ಪ’ ಸ್ವೀಕರಿಸಿದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು.

ಕಬ್ಬು ಬೆಳೆಗಾರರಿಗೆ 15 ದಿನದೊಳಗೆ ಬಾಕಿ ಪಾವತಿ ಮಾಡುವುದು ಸೇರಿದಂತೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಪರವಾದ ಹಲವು ನಿರ್ಧಾರಗಳನ್ನು ಕೈಗೊಳ್ಳುವುದಾಗಿ ಅಖಿಲೇಶ್ ಭರವಸೆ ನೀಡಿದರು.

ರೈತರು ಬೆಳೆದ ಪ್ರತಿಯೊಂದು ಬೆಲೆಗೆ ಬೆಂಬಲ ಬೆಲೆ, ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್, ರೈತರಿಗೆ ಬಡ್ಡಿರಹಿತ ಸಾಲ, ಪಿಂಚಣಿ ಹಾಗೂ ವಿಮೆ ನೀಡುವುದಾಗಿ ಅವರು ಘೋಷಿಸಿದರು. ಈ ಎಲ್ಲ ಘೋಷಣೆಗಳು ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾಗಿರಲಿವೆ ಎಂದು ಅವರು ಭರವಸೆ ನೀಡಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ರೈತರ ಮೇಲೆ ಹಾಕಿರುವ ಪ್ರಕರಣ ವಾಪಸ್ ಪಡೆಯಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು.ಕಬ್ಬು ಬೆಳಗಾರರ ಬಾಕಿ ಪಾವತಿಗಾಗಿ ರೈತ ಆವರ್ತ ನಿಧಿ ಸ್ಥಾಪನೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದರು.‌

ಚುನಾವಣೆಯಲ್ಲಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಅವರು, ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟವನ್ನು ಬೆಂಬಲಿಸುವಂತೆ ಹಲವು ರೈತರ ನಾಯಕರ ಮನವೊಲಿಸುತ್ತಿದ್ದಾರೆ. ರೈತ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯು ಮೈತ್ರಿಕೂಟಕ್ಕೆ ತನ್ನ ಬೆಂಬಲವನ್ನು ಈಗಾಗಲೇ ಸೂಚಿಸಿದೆ.

ತೇಜಿಂದರ್ ಅವರನ್ನು ಪಕ್ಷದಿಂದ ಕಣಕ್ಕಿಳಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅಖಿಲೇಶ್ ಸ್ಪಷ್ಟ ಉತ್ತರ ನೀಡಲಿಲ್ಲ. ‘ಪಕ್ಷಕ್ಕೆ ಅವರು ಒಬ್ಬ ಗೌರವಾನ್ವಿತ ವ್ಯಕ್ತಿ’ ಎಂದಷ್ಟೇ ಹೇಳಿದರು.

ರೈತ ನಾಯಕ ರಾಕೇಶ್ ಟಿಕಾಯತ್ ಅವರಿಗೆ ಸಮಾಜವಾದಿ ಪಕ್ಷದ ಟಿಕೆಟ್ ನೀಡುತ್ತೀರಾ ಎಂಬ ಪ್ರಶ್ನೆಗೂ ಅಖಿಲೇಶ್ ನೇರವಾಗಿ ಉತ್ತರಿಸಲಿಲ್ಲ. ‘ಅವರನ್ನು ನನ್ನ ಬಳಿ ಕರೆತಂದರೆ, ನಾನು ಈ ವಿಚಾರ ಪರಿಗಣಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT