ಶುಕ್ರವಾರ, ಮೇ 20, 2022
23 °C

ಉತ್ತರ ಪ್ರದೇಶ ಚುನಾವಣೆ | ಶಾಂತಿಭಂಗ ಮಾಡುವವರಿಗೆ ಎಸ್‌ಪಿ ಟಿಕೆಟ್:‌ ಯೋಗಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ:‌ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ವ್ಯಕ್ತಿಗಳು ಸಮಾಜವಾದಿ (ಎಸ್‌ಪಿ) ಪಕ್ಷದ ಅಭ್ಯರ್ಥಿಗಳಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

'ನೀವು ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿ ಪಡಿಸುತ್ತಿರುವವರು ಇರುವುದು ತಿಳಿಯುತ್ತದೆ' ಎಂದು ಯೋಗಿ ಹೇಳಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ಶಾಂತಿ ಭಂಗಕ್ಕೆ ಯತ್ನಿಸಿದರೆ, ಅವರ (ಗಲಭೆ ಕೋರರ) ಪೋಸ್ಟರ್‌ಗಳು ರಸ್ತೆ ಬದಿಯ ಗೋಡೆಗಳಲ್ಲಿ ಅಂಟಿಸಲಾಗುತ್ತದೆ ಎಂಬುದನ್ನು ಗಲಭೆ ಕೋರರು ಅರಿತಿದ್ದರು ಎಂದೂ ಹೇಳಿಕೊಂಡಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ' ಎಂದೂ ಶ್ಲಾಘಿಸಿದ್ದಾರೆ.

'ದೇಶದಲ್ಲಿ ಇದುವರೆಗೆ 160 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ. ಆಕ್ಸಿಜನ್‌ ಸಮಸ್ಯೆ ಇಲ್ಲ. ಕೇವಲ ಶೇ 1ರಷ್ಟು ಸೋಂಕಿತರಷ್ಟೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುತ್ತಿರುವುದು ಕೋವಿಡ್‌ ಸೋಲಿಸಲು ನಮಗೆ ನೆರವಾಗುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ. ಏಳು ಹಂತಗಳ ಮತದಾನವು ಕ್ರಮವಾಗಿ ಫೆಬ್ರವರಿ 10, 14, 20, 23, 27, ಮಾರ್ಚ್‌ 3 ಮತ್ತು 7 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ (2017ರ) ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 312 ಸ್ಥಾನಗಳಲ್ಲಿ ಗೆದ್ದು ಭಾರಿ ಬಹುಮತ ಸಾಧಿಸಿತ್ತು. ಉಳಿದಂತೆ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷವು 47 ಕಡೆ ಹಾಗೂ ಮಾಯಾವತಿ ನೇತೃತ್ವದ ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡಿದ್ದವು. ಕಾಂಗ್ರೆಸ್‌ ಏಳು ಸ್ಥಾನಗಳಲ್ಲಿ ಮಾತ್ರವೇ ಜಯದ ನಗೆ ಬೀರಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು