ಬುಧವಾರ, ಮೇ 18, 2022
23 °C

ಹಿಮನದಿ ದುರಂತ: ಸುರಂಗದಿಂದ ಪಾರಾಗಿದ್ದು ಹೇಗೆ? ಭಯಾನಕ ಅನುಭವ ವಿವರಿಸಿದ ಸಂತ್ರಸ್ತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Rescue team members work near a tunnel after a part of a glacier broke away and caused flood in Tapovan, northern state of Uttarakhand. Credit: Reuters Photo

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿಯಲ್ಲಿ ಭಾನುವಾರ ಸಂಭವಿಸಿದ ನೀರ್ಗಲ್ಲು ಕುಸಿತದ ಬಳಿಕ ಸಂಭವಿಸಿದ ಪ್ರವಾಹದಲ್ಲಿ 26ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ಈವರೆಗೆ ದೃಢಪಟ್ಟಿದೆ. 171 ಜನ ಕಣ್ಮರೆಯಾಗಿದ್ದಾರೆ. ಈ ಪೈಕಿ ಅನೇಕರನ್ನು ರಕ್ಷಿಸಲಾಗಿದೆ.

ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿದವರನ್ನೂ ರಕ್ಷಿಸಲಾಗಿದೆ. ಹೀಗೆ ಪಾರಾಗಿ ಬಂದು ಬದುಕುಳಿದ 28 ವರ್ಷ ವಯಸ್ಸಿನ ರಾಜೇಶ್ ಕುಮಾರ್ ಅವರು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಓದಿ: 

ಪ್ರವಾಹ ಪರಿಸ್ಥಿತಿ ಉಂಟಾದಾಗ ರಾಜೇಶ್ ಕುಮಾರ್ ಹಾಗೂ ಸಹೋದ್ಯೋಗಿಗಳು ಸುರಂಗವೊಂದರ ಸುಮಾರು 300 ಮೀಟರ್ (984 ಅಡಿ) ಒಳಗಡೆ ಇದ್ದರು.

‘ನಾವಲ್ಲಿಂದ ಪಾರಾಗುತ್ತೇವೆ ಎಂದು ಭಾವಿಸಿಯೇ ಇರಲಿಲ್ಲ. ಒಳಗಡೆ ಕೆಲಸ ಮಾಡುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಶಿಳ್ಳೆಯ ಸದ್ದು ಕೇಳಿಸಿತು. ಜನರ ಕೂಗು ಕೇಳಿಸುತ್ತಿತ್ತು. ಹೊರಗಡೆ ಇದ್ದ ಜನರು ನಮ್ಮನ್ನು ಹೊರಗೆ ಬರುವಂತೆ ಕೂಗಿ ಕರೆಯುತ್ತಿದ್ದರು. ನಾವು ಓಡಲು ಆರಂಭಿಸಿದೆವು. ಆದರೆ ನೀರು ಹರಿದುಬರುತ್ತಲೇ ಇತ್ತು. ಆ ಸಂದರ್ಭ ಹೇಗಿತ್ತೆಂದರೆ, ಹಾಲಿವುಡ್ ಸಿನಿಮಾಗಳ ರೀತಿ ಇತ್ತೆನ್ನಬಹುದು’ ಎಂದು ರಾಜೇಶ್ ಕುಮಾರ್ ಹೇಳಿದ್ದಾರೆ.

ರಾಜೇಶ್ ಹಾಗೂ ಅವರ ಸಹೋದ್ಯೋಗಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಸುರಂಗದೊಳಗಿನ ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡು ತಲೆ ನೀರಿನಿಂದ ಮೇಲಿರುವಂತೆ ಹಾಗೂ ಪ್ರವಾಹ ಪಾಲಾಗದಂತೆ ತಮ್ಮನ್ನು ರಕ್ಷಿಸಿಕೊಂಡಿದ್ದರು. ಪ್ರವಾಹದ ಜತೆ ಬರುತ್ತಿದ್ದ ಭಗ್ನಾವಶೇಷಗಳಿಂದ ತಪ್ಪಿಸಿಕೊಂಡು ಪರಸ್ಪರ ಧೈರ್ಯ ತುಂಬಿಕೊಳ್ಳುತ್ತಿದ್ದರು.

‘ಆದದ್ದಾಗಲಿ, ನಾವು ರಾಡ್‌ಗಳನ್ನು ಬಿಡಬಾರದು ಎಂದು ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು. ನಮ್ಮ ಕೈಗಳು ಹಿಡಿತ ಕಳೆದುಕೊಳ್ಳದಂತೆ ಮಾಡಿದ ದೇವರಿಗೆ ಧನ್ಯವಾದಗಳು’ ಎಂದು ಅವರು ತಿಳಿಸಿದ್ದಾರೆ.

ಓದಿ: 

ಪ್ರವಾಹವು ಕಣಿವೆಯಲ್ಲಿ ಹರಿಯಲು ಆರಂಭವಾಗುತ್ತಿದ್ದಂತೆಯೇ ಸುರಂಗದೊಳಕ್ಕೂ ನೀರು ನುಗ್ಗಿತ್ತು. 1.5 ಮೀಟರ್‌ಗೂ ಹೆಚ್ಚು ನೀರು ಅವಶೇಷಗಳು ಹಾಗೂ ಕೆಸರಿನ ಜತೆ ಸುರಂಗದೊಳಕ್ಕೆ ಪ್ರವಹಿಸಿತ್ತು.

‘ಬಂಡೆಗಳ ಅವಶೇಷಗಳ ಮೇಲೆ ಹತ್ತಿ ಪರದಾಡುತ್ತಾ ಹೇಗೋ ಸುರಂಗದ ತುದಿ ತಲುಪಲು ಪ್ರಯತ್ನಿಸಿದೆವು. ಒಂದೆಡೆಯಿಂದ ಸಣ್ಣದಾಗಿ ದಾರಿ ಕಾಣಿಸುತ್ತಿತ್ತು. ಆದರೆ ಅದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಖಚಿತ ಇರಲಿಲ್ಲ. ಸ್ವಲ್ಪ ಗಾಳಿಯಾದರೂ ದೊರೆಯಬಹುದು ಎಂದು ಭಾವಿಸಿದ್ದೆವು. ಸ್ವಲ್ಪದರಲ್ಲಿ ಒಂದೆಡೆಯಿಂದ ಬೆಳಕು ಕಾಣಿಸಿತು. ಮೊಬೈಲ್ ಸಿಗ್ನಲ್ ಕೂಡ ಸಿಕ್ಕಿತು. ರಕ್ಷಣೆಗಾಗಿ ಕರೆ ಮಾಡಿದೆವು’ ಎಂದು ಅವರು ವಿವರಿಸಿದ್ದಾರೆ.

ರಾಜೇಶ್ ಕುಮಾರ್ ಹಾಗೂ ಅವರ ಸಹೋದ್ಯೋಗಿಗಳನ್ನು ಸುರಂಗದಿಂದ ರಕ್ಷಿಸಿದಾಗ ಭಾವುಕ ಸನ್ನಿವೇಶವೇ ನಿರ್ಮಾಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು