ಶನಿವಾರ, ಏಪ್ರಿಲ್ 17, 2021
23 °C

ಭಾರತವೀಗ ಚುನಾಯಿತ ನಿರಂಕುಶಾಧಿಪತ್ಯ: ವಿ–ಡೆಮ್ ಸಂಶೋಧನಾ ಸಂಸ್ಥೆಯ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಪ್ರಜಾಪ್ರಭುತ್ವವು ಈಗ ‘ಚುನಾಯಿತ ನಿರಂಕುಶಾಧಿಪ‍ತ್ಯ’ದ ಸ್ಥಿತಿಗೆ ಇಳಿದಿದೆ ಎಂದು ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾಲಯದ ವಿ–ಡೆಮ್ ಸ್ವತಂತ್ರ ಸಂಶೋಧನಾ ಸಂಸ್ಥೆಯ ‘ಪ್ರಜಾಪ್ರಭುತ್ವ ವರದಿ 2021’ರಲ್ಲಿ ಹೇಳಲಾಗಿದೆ.

ಅಮೆರಿಕದ ‘ಫ್ರೀಡಮ್ ಹೌಸ್’ ಭಾರತವನ್ನು ‘ಮುಕ್ತ ದೇಶ’ದಿಂದ ‘ಭಾಗಶಃ ಮುಕ್ತ ದೇಶ’ ದರ್ಜೆಗೆ ಇಳಿಸಿದ ಕೆಲವೇ ದಿನಗಳಲ್ಲಿ ಈ ವರದಿ ಬಿಡುಗಡೆಯಾಗಿದೆ.

‘137 ಕೋಟಿ ಜನಸಂಖ್ಯೆಯೊಂದಿಗೆ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದ್ದ ಭಾರತವು ಈಗ ಚುನಾಯಿತ ನಿರಂಕುಶಾಧಿಪತ್ಯವಾಗಿ ಬದಲಾಗಿದೆ. ಇದರೊಂದಿಗೆ ಜಗತ್ತಿನ ಜನಸಂಖ್ಯೆಯ ಶೇ 68ರಷ್ಟು ಮಂದಿ ಚುನಾಯಿತ ನಿರಂಕುಶಾಧಿಪತ್ಯ ಅಥವಾ ನಿರಂಕುಶಾಧಿಪತ್ಯದ ಅಡಿಯಲ್ಲಿ ನೆಲೆಸುವಂತಾಗಿದೆ’ ಎಂದು ವರದಿಯು ಹೇಳಿದೆ. 

ಪ್ರೊ. ಸ್ಟಾಫನ್ ಐ ಲಿಂಡ್‌ಬರ್ಗ್ ಅವರು 2014ರಲ್ಲಿ ಈ ಸಂಸ್ಥೆ ಸ್ಥಾಪಿಸಿದ್ದರು. 2010ರಲ್ಲಿ ಜಗತ್ತಿನ 41 ದೇಶಗಳಲ್ಲಿ ಉದಾರವಾದಿ ಪ್ರಜಾಪ್ರಭುತ್ವವಿತ್ತು. ಆದರೆ, ಈಗ ಅದು 32 ದೇಶಗಳಿಗೆ ಕುಸಿದಿದೆ. ಹಾಗಾಗಿ, ಜಗತ್ತಿನ ಜನಸಂಖ್ಯೆಯ ಪೈಕಿ ಉದಾರವಾದಿ ಪ್ರಜಾಪ್ರಭುತ್ವ ದೇಶಗಳಲ್ಲಿ ಇರುವ ಜನರ ಪ್ರಮಾಣವು ಶೇ 14 ಮಾತ್ರ. ಚುನಾಯಿತ ಪ್ರಜಾಪ್ರಭುತ್ವವು 60 ದೇಶಗಳಲ್ಲಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಈ ದೇಶಗಳ ಜನರ ಪ್ರಮಾಣವು ಶೇ 19 ಮಾತ್ರ ಎಂದು ವರದಿಯು ಹೇಳಿದೆ. 

ಉದಾರವಾದಿ ಪ್ರಜಾಪ್ರಭುತ್ವಕ್ಕೆ 0ಯಿಂದ 1ರೊಳಗೆ ಅಂಕ ನೀಡಲಾಗುತ್ತದೆ. ಹಾಗಾಗಿ, ಭಾರತದ ಕುಸಿತವು ಶೇ 23ರಷ್ಟಾಗುತ್ತದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಜಗತ್ತಿನ ಯಾವುದೇ ದೇಶಕ್ಕೆ ಹೋಲಿಸಿದರೆ ಅತ್ಯಂತ ತೀವ್ರವಾದ ಕುಸಿತವಾಗಿದೆ.  ಬ್ರೆಜಿಲ್, ಹಂಗರಿ ಮತ್ತು ಟರ್ಕಿಯಂತಹ ದೇಶಗಳು ಈ ಪಟ್ಟಿಗೆ ಸೇರಿವೆ ಎಂದು ವಿ-ಡೆಮ್ ಸಂಸ್ಥೆಯ ವರದಿ ತಿಳಿಸಿದೆ. 

ಫ್ರೀಡಂ ಹೌಸ್ ವರದಿಯಲ್ಲೂ ಕಳಪೆ ಸಾಧನೆ: ಅಮೆರಿಕ ಮೂಲದ ಫ್ರೀಡಂ ಹೌಸ್ ತನ್ನ ಇತ್ತೀಚಿನ ‘ಫ್ರೀಡಂ ಇನ್ ದಿ ವರ್ಲ್ಡ್ 2021’ ವರದಿಯಲ್ಲಿ ಭಾರತಕ್ಕೆ 100ಕ್ಕೆ 67 ಅಂಕಗಳನ್ನು ನೀಡಿದೆ. ಕಳೆದ ವರ್ಷಕ್ಕಿಂತ ನಾಲ್ಕು ಅಂಕಗಳು ಕಡಿಮೆ ಸಿಕ್ಕಿವೆ.

‘ರಾಜಕೀಯ ಹಕ್ಕುಗಳು’ ವಿಷಯದಲ್ಲಿ 40ಕ್ಕೆ 34 ಅಂಕ, ‘ನಾಗರಿಕ ಸ್ವಾತಂತ್ರ್ಯ’ ವಿಷಯದಲ್ಲಿ 60ಕ್ಕೆ 33 ಅಂಕ, ‘ಇಂಟರ್ನೆಟ್ ಸ್ವಾತಂತ್ರ್ಯ’ ವಿಷಯದಲ್ಲಿ ದೇಶವು 100ಕ್ಕೆ 51 ಅಂಕಗಳನ್ನು ಗಳಿಸಿದೆ.

ಮೋದಿ ಬಂದ ಮೇಲೆ ಕುಸಿತ
2014ರ ಸಂಸತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ನರೇಂದ್ರ ಮೋದಿ ಅವರು ಗೆಲುವಿನತ್ತ ಮುನ್ನಡೆಸಿದ ನಂತರ ಉದಾರವಾದಿ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತ ಪ್ರಾರಂಭವಾಯಿತು ಎಂದು ವರದಿ ಹೇಳಿದೆ.

‘ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಭಾರತದಲ್ಲಿ ಸೆನ್ಸಾರ್‌ಶಿಪ್‌ ಬಳಕೆಯು ವಿರಳವಾಗಿತ್ತು. ಹಾಗಾಗಿ, ಈ ವಿಚಾರದಲ್ಲಿ ದೇಶಕ್ಕೆ 4ರಲ್ಲಿ 3.5 ಅಂಕಗಳು ದೊರೆಯುತ್ತಿದ್ದವು. 2020ರ ಹೊತ್ತಿಗೆ ಈ ಅಂಕವು 1.5ಕ್ಕೆ ಕುಸಿಯಿತು. ಅಂದರೆ ಸೆನ್ಸಾರ್‌ಶಿಪ್ ಪ್ರಯತ್ನಗಳು ಸರ್ವೇಸಾಮಾನ್ಯವಾಗಿವೆ. ಈ ಕಾರಣದಿಂದ ಭಾರತವು ಈಗ ಪಾಕಿಸ್ತಾನದಂತೆಯೇ ನಿರಂಕುಶಾಧಿಕಾರವಾಗಿದೆ ಮತ್ತು ನೆರೆಯ ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಟ್ಟ ಸ್ಥಿತಿಯಲ್ಲಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ವರದಿಯ ಪ್ರಕಾರ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಟೀಕಾಕಾರನ್ನು ಸುಮ್ಮನಿರಿಸಲು ದೇಶದ್ರೋಹ, ಮಾನಹಾನಿ ಮತ್ತು ಭಯೋತ್ಪಾದನಾ ನಿಗ್ರಹದಂತಹ ಕಾನೂನುಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ 7,000ಕ್ಕೂ ಹೆಚ್ಚು ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಆರೋಪಿಗಳಲ್ಲಿ ಹೆಚ್ಚಿನವರು ಆಡಳಿತ ಪಕ್ಷದ ಟೀಕಾಕಾರರು ಎಂದು ವರದಿ ವಿಶ್ಲೇಷಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು