ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೇಂದ್ರ ಹೆಗ್ಗಡೆ, ಇಳಯರಾಜ, ವಿಜಯೇಂದ್ರ ಪ್ರಸಾದ್, ಪಿ.ಟಿ ಉಷಾ ರಾಜ್ಯಸಭೆಗೆ

ನಾಮನಿರ್ದೇಶನ
ಅಕ್ಷರ ಗಾತ್ರ

ನವದೆಹಲಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಖ್ಯಾತ ಚಿತ್ರಸಾಹಿತಿ ವಿಜಯೇಂದ್ರ ಪ್ರಸಾದ್‌, ‘ಓಟದ ರಾಣಿ’ ಮಾಜಿ ಅಥ್ಲೀಟ್‌ಪಿ.ಟಿ. ಉಷಾ ಹಾಗೂ ಸಂಗೀತ ಮಾಂತ್ರಿಕ ಇಳಯರಾಜ ಅವರನ್ನು ರಾಜ್ಯಸಭೆಗೆ ಬುಧವಾರ ನಾಮನಿರ್ದೇಶನ ಮಾಡಲಾಗಿದೆ.

ನಾಮನಿರ್ದೇಶಿತ ಸದಸ್ಯರ ವಿಭಾಗದಲ್ಲಿ ಖಾಲಿ ಉಳಿದಿದ್ದ ಸ್ಥಾನಗಳಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಲ್ವರು ಸಾಧಕರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇವರೊಂದಿಗೆ ತಾವು ಕಾಣಿಸಿಕೊಂಡ ಅಪರೂಪದ ಸಂದರ್ಭದ ಚಿತ್ರಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಸಮುದಾಯಕ್ಕೆ ಮಹೋನ್ನತ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆಯವರು ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಹಾಗೂ ಅವರು ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ತರ ಕಾರ್ಯಗಳಿಗೆ ಸಾಕ್ಷಿಯಾಗುವ ಅವಕಾಶ ನನಗೆ ಒದಗಿತ್ತು. ಖಂಡಿತವಾಗಿ ಅವರು ಸಂಸದೀಯ ನಡಾವಳಿಗಳನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಟ್ವೀಟ್‌ ಮಾಡಿದ್ದಾರೆ.

‘ಪಿ.ಟಿ. ಉಷಾ ಅವರು ದೇಶದಪ್ರತಿಯೊಬ್ಬರಿಗೆ ಸ್ಫೂರ್ತಿ. ಕ್ರೀಡಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅವರು ದೇಶಕ್ಕೆ ಸಾಕಷ್ಟು ಉದಯೋನ್ಮುಖಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಅವರ ಕೊಡುಗೆ ಶ್ಲಾಘನೀಯ. ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಉಷಾ ಅವರಿಗೂ ಅಭಿನಂದನೆಗಳು’ ಎಂದು ಮೋದಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಇಳಯರಾಜ ಅವರು ಸೃಜನಶೀಲ ಪ್ರತಿಭೆ. ಸಾಕಷ್ಟು ಸಾಧನೆ ಮಾಡಿದ್ದಾರೆ. ಹಲವು ತಲೆಮಾರುಗಳ ಸುಂದರ ಭಾವನೆಗಳಿಗೆ ಜೀವ ತುಂಬಿದ್ದಾರೆ. ಅವರ ಜೀವನವೂ ಸ್ಫೂರ್ತಿದಾಯಕವಾಗಿದೆ. ಇವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ’ ಎಂದು ಮೋದಿ ಹೇಳಿದ್ದಾರೆ.

ಇನ್ನು ನಾಲ್ವರೂ ಗಣ್ಯರಿಗೂ ಅವರ ಅಭಿಮಾನಿಗಳು, ಬೆಂಬಲಿಗರು ಶುಭಾಶಯ ತಿಳಿಸಿದ್ದಾರೆ. ನಾಮನಿರ್ದೇಶನ ವಿಭಾಗದಲ್ಲಿ 4 ರಾಜ್ಯಸಭಾ ಸ್ಥಾನಗಳು ಖಾಲಿ ಇದ್ದವು. ಇದೀಗ ಅವು ಭರ್ತಿ ಆದಂತಾಗಿದೆ.

ಭಾರತೀಯ ಚಿತ್ರರಂಗದ ಸಂಗೀತ ಲೋಕದ ಖ್ಯಾತನಾಮರಲ್ಲಿ ಇಳಯರಾಜ ಕೂಡ ಒಬ್ಬರು. ಮೂಲತಃ ತಮಿಳುನಾಡಿನವರಾದ ಇಳಯರಾಜ ಅವರು ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಸಂಗೀತ ಸಂಯೋಜನೆ, ಗಾಯನ ಮತ್ತು ಗೀತರಚನೆ ಮೂಲಕ ಭಾರತೀಯ ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ.

ತೆಲುಗಿನ ವಿ. ವಿಜಯೇಂದ್ರ ಪ್ರಸಾದ್‌ ಅವರು ಚಿತ್ರ ನಿರ್ಮಾಣದ ಜತೆಗೆ ಚಿತ್ರ ಸಾಹಿತಿಯಾಗಿಯೂ ಪ್ರಸಿದ್ಧರು. ಇವರು ‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್‌’ ಚಿತ್ರಗಳಿಗೆ ಬರೆದ ಕಥೆಗಳು ಸಿನಿಪ್ರಿಯರ ಮನ ಗೆಲ್ಲುವ ಜತೆಗೆ, ಗಳಿಕೆಯಲ್ಲೂ ಅಖಿಲ ಭಾರತ ಮಟ್ಟದಲ್ಲಿ ಯಶಸ್ವಿ ಚಿತ್ರಗಳೆನಿಸಿ ಹಲವು ದಾಖಲೆಗಳನ್ನು ಬರೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT