ಭಾನುವಾರ, ಜೂನ್ 13, 2021
25 °C

ಕೋವಿಡ್ ಎರಡನೇ ಅಲೆ ನಿಯಂತ್ರಣ: ‘ಮುಂಬೈ ಮಾದರಿ’ಗೆ ‘ಸುಪ್ರೀಂ’ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ತೀವ್ರವಾಗಿ ಉಲ್ಬಣಗೊಂಡಿದ್ದ ಕೋವಿಡ್–19 ಅನ್ನು ನಿಯಂತ್ರಿಸಲು ಅಲ್ಲಿನ ಪಾಲಿಕೆಯ ವಾರ್ಡ್ ಮಟ್ಟದ ‘ವಾರ್ ರೂಂ’ಗಳು, ರೋಗಿಗಳಿಗೆ ಹಾಸಿಗೆ ಮತ್ತು ಇತರ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡಲು ನೆರವಾದ ಪಾಲಿಕೆ ಅಧಿಕಾರಿಗಳ ಮುನ್ನೆಚ್ಚರಿಕೆಯೇ ಕಾರಣ ಎನ್ನಲಾಗಿದೆ.

ದೇಶದ ಇತರ ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮುಂಬೈನಲ್ಲಿ ಉಂಟಾಗಿದ್ದ ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಲು ‘ಮುಂಬೈ ಮಾದರಿ’ ಸುಪ್ರೀಂ ಕೋರ್ಟ್‌ನ ಮೆಚ್ಚುಗೆಗೂ ಪಾತ್ರವಾಗಿದೆ.

ಮೇ 1ರಿಂದ ಮುಂಬೈನಲ್ಲಿ ಪ್ರತಿದಿನ 4 ಸಾವಿರಕ್ಕೂ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೂ ಮುನ್ನ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಮುಂಬೈನಲ್ಲಿ ನಿತ್ಯವೂ 8,500 ಪ್ರಕರಣಗಳು ವರದಿಯಾಗುತ್ತಿದ್ದವು. ಏ. 4ರಂದು ಈ ಸಂಖ್ಯೆ 11,163ಕ್ಕೆ ಏರಿತ್ತು. ಆದರೆ ಒಂದೇ ತಿಂಗಳ ಅವಧಿಯಲ್ಲಿ  ಅಂದರೆ ಮೇ 6ರ ಹೊತ್ತಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ 3,056ಕ್ಕೆ ಇಳಿದಿದೆ!.

ದೇಶದ ಆರ್ಥಿಕ ಮೂಲಕ್ಕೆ ಬೆನ್ನೆಲುಬಾಗಿರುವ ಮುಂಬೈನಲ್ಲಿ ಆಕ್ಟೋಬರ್‌ ನಂತರ ಪ್ರತಿನಿತ್ಯವೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯೇ ಕಂಡು ಬಂದಿದೆ. ಅದರಲ್ಲೂ ಅ. 7ರಂದು ಒಂದೇ ದಿನ 2,848 ಪ್ರಕರಣಗಳು ವರದಿಯಾಗಿದ್ದವು.

ಆದರೆ, ಪ್ರಕರಣಗಳ ಸಂಖ್ಯೆಯಲ್ಲಿ ಎಷ್ಟೇ ಏರುಪೇರಾಗಿದ್ದರೂ ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ಕೊರತೆಯಾಗಲೀ, ಆಮ್ಲಜನಕ ಕೊರತೆಯಾಗಲೀ ಕಂಡು ಬಂದಿಲ್ಲ ಎನ್ನುತ್ತಾರೆ ಬೃಹನ್ಮುಂಬಯಿಯ ಪಾಲಿಕೆ ಅಧಿಕಾರಿಗಳು.

ಸುಪ್ರೀಂ ಕೋರ್ಟ್ ಮೆಚ್ಚುಗೆ

ಮುಂಬೈ ಕಂಡುಕೊಂಡ ಈ ‘ಮಾದರಿ’ಯ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿ, ಅಲ್ಲಿನ ಅಧಿಕಾರಿಗಳು ಹಾಸಿಗೆ ಮತ್ತು ಆಮ್ಲಜನಕದ ಸಿಲಿಂಡರ್‌ಗಳ ಕೊರತೆಯಾಗದಂತೆ ನಿರ್ವಹಿಸಿದ ಕಾರ್ಯವೈಖರಿಯನ್ನು ಕೊಂಡಾಡಿದೆ.

‘ದೆಹಲಿಯಲ್ಲಿ ಆಮ್ಲಜನಕ ಉತ್ಪಾದನೆ ಸಾಧ್ಯವಿಲ್ಲ. ಆದರೆ, ಮಹಾರಾಷ್ಟ್ರವು ಆಮ್ಲಜನಕವನ್ನು ಉತ್ಪಾದಿಸುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ’ ಎಂದು ದೆಹಲಿಯ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿದರು.

‘ಬೃಹನ್ಮುಂಬಯಿ ಮಹಾನಗರ ಪಾಲಿಕೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ದೆಹಲಿಯ ಬಗ್ಗೆ ನಮಗೆ ಅಗೌರವಿವಿಲ್ಲ. ಆದರೆ, ಮುಂಬೈನಲ್ಲಿ ಹೇಗೆ ಮಾಡುತ್ತಿದ್ದಾರೆ? ಅವರು ಕೋವಿಡ್ ಅನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನಾವು ನೋಡಿ ಕಲಿಯಬೇಕು’ ಎಂದೂ ನ್ಯಾಯಾಲಯ ಹೇಳಿದೆ.

ಏನಿದು ‘ಮುಂಬೈ ಮಾದರಿ’?

ಮುಂಬೈನಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸುತ್ತಿದ್ದಂತೆಯೇ ಬೃಹನ್ಮುಂಬಯಿ ಮಹಾನಗರ ಪಾಲಿಕೆಯು (ಬಿಎಂಸಿ) ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಿತು. ಸೋಂಕಿತರ ಸಂಪರ್ಕ ಪತ್ತೆ ಮತ್ತು ಚಿಕಿತ್ಸೆಯ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಅಷ್ಟೇ ಅಲ್ಲ, ಅಲ್ಲಿನ ಜನರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನೂ ಖಚಿತಪಡಿಸಿಕೊಂಡಿತು.‌

ಇವುಗಳನ್ನು ಖಚಿತಪಡಿಸಿಕೊಂಡ ನಂತರ ಮೊದಲ ಅಲೆಯಲ್ಲಿ ಕಠಿಣ ಪರಿಸ್ಥಿತಿಗಾಗಿ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಲಾಗಿದ್ದ ಸೌಲಭ್ಯಗಳನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಯಿತು.

‘ನಾವು ಎರಡನೇ ಅಲೆ ಪ್ರಾರಂಭವಾಗುವ ಮೊದಲೇ ಜಂಬೋ ಕೋವಿಡ್ ಕೇಂದ್ರಗಳು (ಆಸ್ಪತ್ರೆಗಳು), ಆಮ್ಲಜನಕ ಸೌಲಭ್ಯ, ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳನ್ನು ಸಿದ್ಧವಾಗಿರಿಸಿಕೊಳ್ಳದಿದ್ದರೆ ಅವ್ಯವಸ್ಥೆ ಉಂಟಾಗುತ್ತಿತ್ತು’ ಎನ್ನುತ್ತಾರೆ ಪಾಲಿಕೆ ಮೇಯರ್ ಕಿಶೋರಿ ಪೆಡ್ನೆಕರ್.

ಈಗಾಗಲೇ ರೂಪಿಸಿರುವ ಜಂಬೋ ಕೋವಿಡ್ ಕೇಂದ್ರಗಳನ್ನು ಮಾರ್ಚ್ 31ರ ತನಕ ತೆಗೆಯಬಾರದು ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ತಾಕೀತು ಮಾಡಿದ್ದರು. ಹಾಗಾಗಿ, ಎರಡನೇ ಅಲೆಯ ಬಿಕ್ಕಟ್ಟನ್ನು ಎದುರಿಸಲು ಬಿಎಂಸಿ ಸಿದ್ಧವಾಯಿತು ಎನ್ನುತ್ತಾರೆ ಅವರು.

‘ಜಂಬೋ ಕೋವಿಡ್ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆ ಇತ್ತು. ಆಮ್ಲಜನಕ, ಅಡುಗೆ ಮನೆ, ವೈದ್ಯರು, ದಾದಿಯರು ಹೀಗೆ ಎಲ್ಲ ಸೌಲಭ್ಯ ರೂಪಿಸಲಾಗಿತ್ತು. ಅಷ್ಟೇ ಅಲ್ಲ ನಾಗರಿಕರಿಗೆ ಬೇಕಾದ ಆಮ್ಲಜನಕ, ಐಸಿಯು ಹಾಸಿಗೆಗಳು, ಔಷಧಿಗಳ ದಾಸ್ತಾನುಗಳನ್ನೂ ಹೆಚ್ಚಿಸಲಾಯಿತು. ಎಲ್ಲೆಡೆ ರೆಮ್‌ಡಿಸಿವಿರ್‌ನ ಕೊರತೆ ಇದ್ದರೆ, ಬಿಎಂಸಿಯಲ್ಲಿ ಮಾತ್ರ ಸಾಕಷ್ಟು ಸಂಗ್ರಹವಿತ್ತು’ ಎಂದು ಕಾಕಾನಿ ವಿವರಿಸಿದರು.

‘ಫೆಬ್ರುವರಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹಾಸಿಗೆಗಳ ಸಾಮರ್ಥ್ಯವನ್ನು 12 ಸಾವಿರದಿಂದ 24 ಸಾವಿರಕ್ಕೆ ದ್ವಿಗುಣಗೊಳಿಸಲಾಯಿತು. ಪ್ರಸ್ತುತ ನಮ್ಮಲ್ಲಿ 31,695 ಕೋವಿಡ್‌–19 ಹಾಸಿಗೆಗಳಿವೆ. ಅದರಲ್ಲಿ 12,754 ಆಮ್ಲಜನಕ ಹಾಸಿಗೆಗಳು ಮತ್ತು 2,929 ಐಸಿಯು ಹಾಸಿಗೆಗಳೂ ಇವೆ’ ಎಂದರು.

‘ಆದರೆ, ಏ. 16 ಮತ್ತು 17ರಂದು ಮಾತ್ರ ಆಮ್ಲಜನಕದ ಕೊರತೆಯಿಂದಾಗಿ 168 ಕೋವಿಡ್ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಇದರಿಂದ ಪಾಠ ಕಲಿತ ನಾವು ಆಮ್ಲಜನಕ ಘಟಕಗಳಿಂದ ಆಸ್ಪತ್ರೆಗಳಿಗೆ ಸರಿಯಾದ ಸಮಯಕ್ಕೆ ಆಮ್ಲಜನಕ ಸಿಲಿಂಡರ್ ತಲುಪುತ್ತದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳತೊಡಗಿದೆವು. ಮುಂಬೈ ನಗರದಲ್ಲೀಗ ವೈದ್ಯಕೀಯ ಆಮ್ಲಜನಕದ ಕೊರತೆ ಇಲ್ಲ. ಆಮ್ಲಜನಕ ಪೂರೈಕೆಯ ಮೇಲ್ವಿಚಾರಣೆಗಾಗಿಯೇ ಆರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವೆಲ್ಲದರ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ನೇತೃತ್ವದ ಮೇಲ್ವಿಚಾರಣಾ ಸಮಿತಿಯೂ ಇದೆ’ ಎಂದೂ ಕಾಕಾನಿ ಹೇಳಿದರು.

‘ವಾರ್ ರೂಂ’ಗೆ ಧನ್ಯವಾದ!

ಕೋವಿಡ್ ಮೊದಲ ಅಲೆಯಲ್ಲಿ ಮುಂಬೈ ಪಾಲಿಕೆಯು ಅಲ್ಲಿನ 24 ವಾರ್ಡ್‌ಗಳಲ್ಲಿ ರೋಗಿಗಳಿಗೆ ಮಾರ್ಗದರ್ಶನ ಮಾಡಲು ‘ವಾರ್ ರೂಂ’ಗಳನ್ನು ಸಜ್ಜುಗೊಳಿಸಿತ್ತು. ಇದೇ ವಾರ್ ರೂಂ ಈಗ ಜನರ ಜೀವ ಉಳಿಸಲು, ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿದೆ. ಥ್ಯಾಂಕ್ಸ್ ವಾರ್ ರೂಂ ವ್ಯವಸ್ಥೆಗೆ

–ಹೀಗಂದವರು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಲ್‌ಚಲ್.

ಹಾಸಿಗೆಗಳ ಹುಡುಕಾಟದಲ್ಲಿರುವ ಜನರು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಓಡುವ ಅಗತ್ಯವಿಲ್ಲ. ಏಕೆಂದರೆ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ ಎಂಬುದನ್ನು ಜನರಿಗೆ ವಾರ್ ರೂಂ ಅಧಿಕಾರಿಗಳೇ ತಿಳಿಸುತ್ತಾರೆ. ಇಂಥದೊಂದ್ದು ವ್ಯವಸ್ಥೆಯಿಂದಾಗಿ ರೋಗಿಗಳು ಜಂಬೋ ಕೋವಿಡ್ ಆಸ್ಪತ್ರೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಯಿತು ಎಂದು ಇಕ್ಬಾಲ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಏಪ್ರಿಲ್ 17ರ ಬಳಿಕ ನಾವು ಆಮ್ಲಜನಕದ ಕೊರತೆಯಾಗದಂತೆ ನೋಡಿಕೊಂಡೆವು. ಮುಖ್ಯವಾಗಿ ಆಮ್ಲಜನಕದ ಪ್ರಮಾಣವು ಶೇ 94ಕ್ಕಿಂತ ಕಮ್ಮಿ ಇರಬಾರದು ಎಂಬುದನ್ನು ಮನಗಂಡೆವು. ನಿಗದಿತ ಪ್ರಮಾಣ ಮತ್ತು ಒತ್ತಡದಲ್ಲಿ ಆಮ್ಲಜನಕ  ನೀಡುವ ಕುರಿತು ನಗರದ 176 ಆಸ್ಪತ್ರೆಗಳಿಗೂ ಮಾರ್ಗದರ್ಶಿ ಸೂತ್ರಗಳನ್ನು ಕಳಿಸಿ, ಅವುಗಳನ್ನು ನಿರ್ವಹಿಸುವಂತೆ ಕ್ರಮ ವಹಿಸಲಾಯಿತು.  ಹಾಗಾಗಿ, ಮುಂಬೈನಲ್ಲಿ ಆಮ್ಲಜನಕದ ಕೊರತೆಯಿಂದ ಒಬ್ಬರೂ ಸಾವಿಗೀಡಾಗಿಲ್ಲ ಎಂದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೈಗೊಂಡ ಲಾಕ್‌ಡೌನ್ ನಿರ್ಧಾರವೂ ಕೋವಿಡ್‌ ನಿಯಂತ್ರಣದಲ್ಲಿ ಸಹಕಾರಿಯಾಯಿತು ಎಂಬುದನ್ನು ಮಹಾನಗರ ಪಾಲಿಕೆ ಮೇಯರ್ ಕಿಶೋರಿ ತಿಳಿಸಿದರು.

ಮೂರನೇ ಅಲೆ ಎದುರಿಸಲು ಸಿದ್ಧತೆ

ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಬಿಎಂಸಿ ಸಿದ್ಧವಾಗಿದೆ ಎನ್ನುತ್ತಾರೆ ಮೇಯರ್ ಕಿಶೋರ್ ಪೆಡ್ನೇಕರ್.

ಮೂರನೇ ಅಲೆಯ ಭೀತಿ ಎದುರಾಗಿದ್ದು, ಮಕ್ಕಳು ಮತ್ತು ಅಂಗವಿಕಲರಿಗೆ ಸೌಲಭ್ಯಗಳನ್ನೊಳಗೊಂಡ ಜಂಬೊ ಕೋವಿಡ್‌ ಕೇಂದ್ರಗಳನ್ನು ರೂಪಿಸಲಾಗುತ್ತಿದೆ. ಈ ಹಿಂದೆ 9 ಕೇಂದ್ರಗಳಿದ್ದವು. ಈಗ ಅವುಗಳನ್ನು ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಮಕ್ಕಳು ಮತ್ತು ಅಂಗವಿಕಲರಿಗೆ ಮೀಸಲಾದ ಸೌಲಭ್ಯಗಳನ್ನು ಒಳಗೊಂಡಂತೆ ಜಂಬೋ ಸಿಒವಿಐಡಿ ಸೌಲಭ್ಯಗಳ ಸಂಖ್ಯೆಯನ್ನು ಒಂಬತ್ತರಿಂದ 15 ಕ್ಕೆ ಹೆಚ್ಚಿಸಲಾಗುವುದು ಎಂದು ಪೆಡ್ನೇಕರ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು