ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್‌: ಶಾಲಾ, ಕಾಲೇಜು ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಿದ ಸರ್ಕಾರ

ಸರ್ಕಾರದ ಹೊಸ ನೀತಿಯಲ್ಲೇ ಸೇರ್ಪಡೆ
Last Updated 19 ಆಗಸ್ಟ್ 2021, 6:48 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ರಾಜ್ಯದ ಎಲ್ಲ ಶಾಲೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಕ್ರೀಡಾ ತರಬೇತುದಾರರು ಮತ್ತು ಬಸ್‌ ಚಾಲಕರು, ಸ್ವಯಂ ಸೇವಕರು ಕಡ್ಡಾಯವಾಗಿ ‌ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಪಡೆದಿರಬೇಕು ಎಂಬ ನಿಯಮವನ್ನು ಸರ್ಕಾರ ತನ್ನ ಹೊಸ ನೀತಿಯಲ್ಲಿ ಸೇರಿಸಿದೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌‘ ವರದಿ ಮಾಡಿದೆ.

ರಾಜ್ಯಪಾಲ ಜಾಯ್‌ ಇನ್ಸ್‌ಲೀ ಅವರು ಬುಧವಾರ ಪ್ರಕಟಿಸಿದ ಹೊಸ ನೀತಿಯ ಪ್ರಕಾರ, ಶಾಲೆಗಳಲ್ಲಿ ಉದ್ಯೋಗ ಮಾಡುವವರೆಲ್ಲರೂ ಕಡ್ಡಾಯ ಹಾಗೂ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಖಾಸಗಿ, ಸರ್ಕಾರಿ ಅಥವಾ ಯಾವುದೇ ದತ್ತಿ ಶಿಕ್ಷಣ ಸಂಸ್ಥೆಯಾಗಿರಬಹುದು, ಅಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸೂಚಿಸಲಾಗಿದೆ.

ಹೊಸ ನೀತಿಯ ಪ್ರಕಾರ ಅಕ್ಟೋಬರ್ 18ರೊಳಗೆ ಶಾಲಾ ಸಿಬ್ಬಂದಿ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರಬೇಕು. ಇಲ್ಲದಿದ್ದರೆ, ಅಂಥವರು ಸೇವೆಯಿಂದಲೇ ವಜಾಗೊಳ್ಳುವಂತಹ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಈ ಮೂಲಕ ದೇಶದ ಯಾವ ರಾಜ್ಯಗಳಲ್ಲೂ ವಿಧಿಸಿದಂತಹ ಕಠಿಣ ನಿಬಂಧನೆಗಳನ್ನು ಇಲ್ಲಿ ಜಾರಿಗೆ ತರಲಾಗಿದೆ.

ಸರ್ಕಾರದ ಹೊಸ ನೀತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಪಾಲ ಜಾಯ್‌ ಇನ್ಸ್‌ಲೀ, ‘ಜನರ ಸುರಕ್ಷತೆಗಾಗಿ ಕೋವಿಡ್‌ ಪರೀಕ್ಷೆ ಮಾಡಿಸಿದರೆ ಸಾಕು ಎಂಬ ಹಂತವನ್ನು ನಾವು ಮೀರಿದ್ದೇವೆ. ಆ ಪ್ರಯತ್ನಗಳನ್ನು ಮಾಡಿ ನೋಡಿದ್ದೇವೆ. ಅದು ಪರಿಣಾಮಕಾರಿಯಲ್ಲ ಎನ್ನುವುದು ಗೊತ್ತಾಗಿದೆ‘ ಎಂದು ಹೇಳಿದರು.

ಇದೇ ವೇಳೆ, ‘ವಾಷಿಂಗ್ಟನ್‌ನಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಶೇಕಡ 95 ಮಂದಿ ಲಸಿಕೆ ಹಾಕಿಸಿಕೊಂಡಿರಲಿಲ್ಲ‘ ಎಂಬುದನ್ನು ಅವರು ಹೇಳಿದರು.

‘12 ವರ್ಷದೊಳಗಿನ ಮಕ್ಕಳು ಇನ್ನೂ ಲಸಿಕೆ ಪಡೆಯಲು ಅರ್ಹರಾಗಿಲ್ಲ‘ ಎಂದು ನೆನಪಿಸಿದ ಜಾಯ್‌, ‘ನೀವು ಲಸಿಕೆ ಪಡೆಯುತ್ತೀರೆಂದರೆ, ಲಸಿಕೆ ಪಡೆಯದ ನಿಮ್ಮ ಮಗುವನ್ನು ನೀವು ರಕ್ಷಿಸುತ್ತೀರಿ‘ ಎಂದು ಹೇಳಿದರು.

ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸುವ ವಿಚಾರ ದೇಶದಾದ್ಯಂತ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಸೆಂಟರ್ ಆನ್ ರೀಇನ್ವೆಂಟಿಂಗ್ ಪಬ್ಲಿಕ್ ಎಜುಕೇಷನ್ ಪ್ರಕಾರ, ದೇಶದ ಕಾಲು ಭಾಗದಷ್ಟು ರಾಜ್ಯಗಳು, ಅದರಲ್ಲೂ ರಿಪಬ್ಲಿಕನ್ಸ್‌ ಪಕ್ಷದ ಆಳ್ವಿಕೆಯಿರುವ ರಾಜ್ಯಗಳಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಲಸಿಕೆಯನ್ನು ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಕೆಲವು ಡೆಮಾಕ್ರಟಿಕ್ ಪಕ್ಷದ ಜನಪ್ರತಿನಿಧಿಗಳು, ಅಧಿಕಾರಿಗಳು, ಕೋವಿಡ್ ಲಸಿಕೆ ಪಡೆಯಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT