ಉಕ್ರೇನ್-ರಷ್ಯಾ ವಿಚಾರವಾಗಿ ಭಾರತದ ನಿಲುವನ್ನು ಟೀಕಿಸಿಲ್ಲ: ಜರ್ಮನ್ ರಾಯಭಾರಿ

ಜೈಪುರ: ರಷ್ಯಾ-ಉಕ್ರೇನ್ ವಿಚಾರವಾಗಿ ಭಾರತದ ನಿಲುವನ್ನು ಜರ್ಮನಿ ಟೀಕಿಸಿಲ್ಲ ಎಂದು ಭಾರತದಲ್ಲಿನ ಜರ್ಮನ್ ರಾಯಭಾರಿ ವಾಲ್ಟರ್ ಜೆ. ಲಿಂಡ್ನರ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
'ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷದ ವಿಚಾರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಜರ್ಮನ್ ಸರ್ಕಾರವು ಭಾರತ ಅಥವಾ ಇತರ ಯಾವುದೇ ದೇಶದ ಮೇಲೆ ಯಾವುದೇ ಒತ್ತಡ ಹೇರಿಲ್ಲ. 'ಪ್ರತಿಯೊಂದು ದೇಶಕ್ಕೂ ತನ್ನ ನಡೆಯನ್ನು ನಿರ್ಧರಿಸುವ ಹಕ್ಕಿದೆ'' ಎಂದು ಅವರು ಹೇಳಿದರು.
ಆದಾಗ್ಯೂ, 'ಯಾವುದೇ ದೇಶಕ್ಕೆ ಬೃಹತ್ ಸೈನ್ಯದೊಂದಿಗೆ ನೆರೆಯ ದೇಶವನ್ನು ಆಕ್ರಮಿಸಲು, ತನ್ನ ಇಚ್ಛೆಯನ್ನು ಹೇರಲು, ಗಡಿಗಳನ್ನು ಬದಲಾಯಿಸಲು ಹಾಗೂ ಸಾವು ಮತ್ತು ವಿನಾಶಕ್ಕೆ ಕಾರಣವಾಗುವ ಹಕ್ಕು ಇರುವುದಿಲ್ಲ ಎಂದು ಅವರು ಒತ್ತಿ ಹೇಳಿದ ಅವರು, 'ಇದನ್ನು ನೋಡುತ್ತಾ ಜಗತ್ತು ಸುಮ್ನನಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ' ಎಂದು ಅವರು ಹೇಳಿದರು.
'ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಮತ್ತು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಅದನ್ನು ಬಳಸಿಕೊಳ್ಳುತ್ತಿದ್ದಾರೆ. 'ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವದ ಪ್ರಶ್ನೆಯೇ ಉದ್ಬವಿಸಿರಲಿಲ್ಲ. ಆದರೆ, ಸೋವಿಯತ್ ಒಕ್ಕೂಟದ ಪತನದ ನಂತರ, ಹೆಚ್ಚಿನ ಪೂರ್ವ ಯುರೋಪಿಯನ್ ರಾಷ್ಟ್ರಗಳು ತಮ್ಮ ಸ್ವಇಚ್ಛೆಯಿಂದಲೇ ಯುರೋಪಿಯನ್ ಒಕ್ಕೂಟ ಮತ್ತು ನ್ಯಾಟೊಗೆ ಸೇರಲು ಬಯಸಿದ್ದವು. ನ್ಯಾಟೊ ಅವರಿಗೆ ಒತ್ತಾಯ ಮಾಡಿರಲಿಲ್ಲ' ಎಂದಿದ್ದಾರೆ.
ಮುಂದುವರಿದು, 'ಪುಟಿನ್ ಅವರು ತಮ್ಮಗೆ ಬೇಕಾದಂತೆ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಸಾರ್ವಭೌಮ ರಾಷ್ಟ್ರವೊಂದರ ಮೇಲೆ ಆಕ್ರಮಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಮತ್ತೊಂದು ದೇಶದ ಮೇಲೆ ದಾಳಿ ಮಾಡುವುದೇ ಗಡಿ ವಿವಾದವನ್ನು ಬಗೆಹರಿಸುವ ಮಾರ್ಗವಾಗುವುದಿಲ್ಲ' ಎಂದಿದ್ದಾರೆ.
'ಜರ್ಮನ್ ಯುರೋಪ್‌ನ ಶಕ್ತಿ ಕೇಂದ್ರ ಮತ್ತು ರಷ್ಯಾದ ಪ್ರಮುಖ ಇಂಧನ ಗ್ರಾಹಕ ಎಂಬುದನ್ನು ಪರಿಗಣಿಸಿ, ಜರ್ಮನಿಯ ಭಾಗವಹಿಸುವಿಕೆಯು ನಿರ್ಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. 'ಪುಟಿನ್ ಕ್ರಿಮಿಯಾವನ್ನು ವಶಪಡಿಸಿಕೊಂಡಾಗ ಹಲವಾರು ವರ್ಷಗಳ ಹಿಂದೆಯೇ ನಾವು ರಷ್ಯಾದ ತೈಲ ಮತ್ತು ಅನಿಲದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಈಗ, ನಾರ್ಡ್ ಸ್ಟ್ರೀಮ್ 2 ಅನ್ನು ನಿಲ್ಲಿಸಲಾಗಿದೆ. ವರ್ಷದ ಅಂತ್ಯದ ವೇಳೆಗೆ ಅಲ್ಲಿಂದ ಇಂಧನ ಆಮದುಗಳು ಮತ್ತಷ್ಟು ಕಡಿಮೆಯಾಗುತ್ತವೆ. ಇದರರ್ಥ, ಪರ್ಯಾಯ ಮೂಲಗಳು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ನಾವು ಹೆಚ್ಚು ಹೂಡಿಕೆ ಮಾಡುತ್ತೇವೆ' ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.