ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸೇವೆಗೆ ಹಾಜರಾಗದ ಬಂಗಾಳದ ಮುಖ್ಯ ಕಾರ್ಯದರ್ಶಿ; ಶೋಕಾಸ್ ನೋಟಿಸ್‌ ಜಾರಿ

Last Updated 31 ಮೇ 2021, 16:03 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ಸೇವೆಗೆ ವರದಿ ಮಾಡಿಕೊಳ್ಳದಿರುವುದಕ್ಕೆ ಕಾರಣ ಕೇಳಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂದೋಪಾಧ್ಯಾಯ ಅವರಿಗೆ ಕೇಂದ್ರ ಸರ್ಕಾರವು ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಈ ನಡುವೆ ಇಂದು ಸೇವಾ ನಿವೃತ್ತಿ ಪಡೆದಿರುವ ಐಎಎಸ್‌ ಅಧಿಕಾರಿ ಅಲಪನ್‌ ಬಂದೋಪಾಧ್ಯಾಯ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಮುಖ್ಯ ಸಲಹೆಗಾರ ಹುದ್ದೆಗೆ ನೇಮಕ ಮಾಡಿದ್ದಾರೆ. ಇದರಿಂದ ಕೇಂದ್ರ ಮತ್ತು ಪಶ್ಚಿಮ ಬಂಗಾಳದ ನಡುವಿನ ತಿಕ್ಕಾಟ ಮತ್ತೆ ಮುಂದುವರಿದಿದೆ.

1987ರ ಬ್ಯಾಚ್‌ನ ಪಶ್ಚಿಮ ಬಂಗಾಳ ಕೇಡರ್‌ನ ಐಎಎಸ್‌ ಅಧಿಕಾರಿ ಅಲಪನ್‌ ಅವರಿಗೆ ಸೋಮವಾರ ಬೆಳಿಗ್ಗೆ 10ಕ್ಕೆ ದೆಹಲಿಯಲ್ಲಿ ವರದಿ ಮಾಡಿಕೊಳ್ಳುವಂತೆ ಮೇ 28ರಂದು ಕೇಂದ್ರದ ಆದೇಶದಲ್ಲಿ ಸೂಚಿಸಲಾಗಿತ್ತು. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವುದಕ್ಕೆ ಕಾರಣ ಕೇಳಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನೋಟಿಸ್‌ ಜಾರಿ ಮಾಡಿರುವುದು ಮೂಲಗಳಿಂದ ತಿಳಿದು ಬಂದಿದೆ.

ಕೋವಿಡ್‌–19 ಪರಿಸ್ಥಿತಿ ನಿರ್ವಹಣೆಗಾಗಿ ಅಲಪನ್‌ ಅವರ ಸೇವಾವಧಿ ವಿಸ್ತರಿಸುವಂತೆ ಪಶ್ಚಿಮ ಬಂಗಾಳ ಸರ್ಕಾರವು ಮೇ 24ರಂದು ಮನವಿ ಮಾಡಿತ್ತು. ಕೇಂದ್ರ ಸರ್ಕಾರವು ಕೇಂದ್ರದ ಸೇವೆಗೆ ವರದಿ ಮಾಡಿಕೊಳ್ಳುವಂತೆ ಆದೇಶಿಸುವ ಜೊತೆಗೆ ಅವರ ಸೇವಾವಧಿಯನ್ನು ಮೂರು ತಿಂಗಳ ವರೆಗೂ ವಿಸ್ತರಿಸಿತ್ತು. ಆದರೆ, 'ರಾಜ್ಯದಲ್ಲಿ ಕೋವಿಡ್‌–19 ನಿರ್ವಹಣೆಗೆ ಸಂಬಂಧಿಸಿ ರಾಜ್ಯಕ್ಕೆ ಅಲಪನ್‌ ಬಂದೋಪಾಧ್ಯಾಯ ಅವರ ಸೇವೆಯ ಅಗತ್ಯವಿದೆ. ಹೀಗಾಗಿ ಅವರನ್ನು ಕೇಂದ್ರದ ಸೇವೆಗೆ ಕಳುಹಿಸಿಕೊಡಲಾಗದು' ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಇಂದು ಬೆಳಿಗ್ಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಕೇಂದ್ರದಿಂದ ಅಲಪನ್‌ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿಯಾಗಿದೆ.

ರಾಜ್ಯ ಸರ್ಕಾರವು ಕರ್ತವ್ಯದಿಂದ ಬಿಡುಗಡೆ ಮಾಡದ ಕಾರಣ, ಅಲಪನ್‌ ಬಂದೋಪಾಧ್ಯಾಯ ದೆಹಲಿಗೆ ತೆರಳದೆ ಕೋಲ್ಕತ್ತದ ಸಚಿವಾಲಯದಲ್ಲೇ ಕರ್ತವ್ಯ ನಿರ್ವಹಿಸಿದರು.

ಅಲಪನ್‌ ಬಂದೋಪಾಧ್ಯಾಯ ಅವರನ್ನು ನಿರ್ದಿಷ್ಟವಾಗಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರಿಸಲು ಸೇವಾವಧಿ ವಿಸ್ತರಿಸುವಂತೆ ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು. ಕೇಂದ್ರದ ನಡೆಗೆ ಪ್ರತ್ಯುತ್ತರ ನೀಡಿರುವ ಮಮತಾ, ಅಲಪನ್‌ ಅವರ ಸೇವಾ ನಿವೃತ್ತಿ ಪರಿಗಣಿಸಿ ರಾಜ್ಯಕ್ಕೆ ನೂತನ ಮುಖ್ಯ ಕಾರ್ಯದರ್ಶಿಯ ನೇಮಕ ಮಾಡಿದರು. ಇದರಿಂದಾಗಿ ಕೇಂದ್ರ ಸರ್ಕಾರದ ಸೇವಾವಧಿ ವಿಸ್ತರಣೆಯ ಆದೇಶವು ರದ್ದಾದಂತಾಗಿದೆ.

ಶೋಕಾಸ್‌ ನೋಟಿಸ್‌ ಜಾರಿಯಾದ ಬೆನ್ನಲ್ಲೇ ಮಮತಾ, ಅಲಪನ್‌ ಬಂದೋಪಾಧ್ಯಾಯ ಅವರ ನಿವೃತ್ತಿಯನ್ನು ಘೋಷಿಸುವ ಜೊತೆಗೆ ಹೊಸ ಹುದ್ದೆಗೆ ನೇಮಕ ಮಾಡಿದರು.

ಕಳೆದ ವರ್ಷ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆದಿತ್ತು. ಆ ಘಟನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ವಿವರ ನೀಡುವಂತೆ ಅಲಪನ್‌ ಬಂದೋಪಾಧ್ಯಾಯ ಮತ್ತು ಡಿಜಿಪಿ ವೀರೇಂದ್ರ ಅವರಿಗೆ ಕೇಂದ್ರ ಗೃಹ ವ್ಯವಹಾರಗಳು ಸಚಿವಾಲಯ ಸೂಚಿಸಿತ್ತು. ಆದರೆ, ಕೇಂದ್ರದ ಮುಂದೆ ಅಧಿಕಾರಿಗಳು ಹಾಜರಾಗಿರಲಿಲ್ಲ.

ಹಾಗೇ ಐಪಿಎಸ್‌ ಅಧಿಕಾರಿಗಳಾದ ಭೋಲನಾಥ್‌ ಪಾಂಡೆ, ಪ್ರವೀಣ್‌ ತ್ರಿಪಾಠಿ ಮತ್ತು ರಾಜೀವ್‌ ಮಿಶ್ರಾ ಅವರನ್ನು ಕೇಂದ್ರದ ಸೇವೆಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರವು ಪದೇ ಪದೇ ನಿರ್ದೇಶಿಸಿತ್ತು. ಜೆ.ಪಿ.ನಡ್ಡಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗ, ಈ ಮೂವರು ಅಧಿಕಾರಿಗಳು ಭದ್ರತೆಯ ಜವಾಬ್ದಾರಿ ವಹಿಸಿದ್ದರು. ಆದರೆ, ರಾಜ್ಯ ಸರ್ಕಾರವು ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಕಳುಹಿಸಲು ನಿರಾಕರಿಸಿತ್ತು.

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಪರಿಹಾರ ಕ್ರಮಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಗೆ ಮುಖ್ಯ ಕಾರ್ಯದರ್ಶಿ ಅಲಪನ್‌ ಬಂದೋಪಾಧ್ಯಾಯ ಅವರು ಹಾಜರಾಗಿರಲಿಲ್ಲ. ಅದರ ಬೆನ್ನಲ್ಲೇ ಕಳೆದ ಶುಕ್ರವಾರ ಅವರನ್ನು ದೆಹಲಿಗೆ ವರ್ಗಾಯಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಆ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಭಾಗಿಯಾಗಿರಲಿಲ್ಲ.

ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳು 1954ರ ಸೆಕ್ಷನ್‌ 6(1)ರ ಅನ್ವಯ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಮತದೊಂದಿಗೆ ಅಧಿಕಾರಿಯನ್ನು ಕೇಂದ್ರದ ಸೇವೆಗೆ ನಿಯೋಜಿಸಬಹುದಾಗಿದೆ. 'ಕೇಂದ್ರಕ್ಕೆ ಅಲಪನ್‌ ಬಂದೋಪಾಧ್ಯಾಯ ಅವರನ್ನು ನಿಯೋಜಿಸುವ ಕುರಿತು ಕೇಂದ್ರ ಸರ್ಕಾರವು ಮುಂಚಿತವಾಗಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿಲ್ಲ, ಕೇಂದ್ರವು ಏಕಪಕ್ಷೀಯ ನಿರ್ಧರ ತೆಗೆದುಕೊಂಡಿದೆ' ಎಂದು ಮಮತಾ ವಾದಿಸಿದ್ದಾರೆ.

ಕೇಂದ್ರಕ್ಕೆ ಅಧಿಕಾರವಿದ್ದರೂ, ಸಾಮಾನ್ಯವಾಗಿ ಅಧಿಕಾರಿಗಳ ಸಹಮತ ಇಲ್ಲದೆಯೇ ಅವರನ್ನು ಕೇಂದ್ರದ ಕರ್ತವ್ಯಕ್ಕೆ ನಿಯೋಜಿಸುವುದಿಲ್ಲ ಎಂದು ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲಪನ್‌ ಬಂದೋಪಾಧ್ಯಾಯ ಅವರ ವಿರುದ್ಧ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಬಗೆಗಿನ ನಿಯಮಗಳು ಅಸ್ಪಷ್ಟವಾಗಿವೆ ಎಂದಿದ್ದಾರೆ.

ಅಖಿಲ ಭಾರತೀಯ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ ) ನಿಯಮಗಳು 1969ರ ಸೆಕ್ಷನ್‌ 7ರ ಅನ್ವಯ, ಅಧಿಕಾರಿಯು ರಾಜ್ಯ ಸರ್ಕಾರದ ಸೇವೆಗಳಲ್ಲಿ ಇದ್ದರೆ, 'ರಾಜ್ಯ ಸರ್ಕಾರಕ್ಕೆ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲು ಮತ್ತು ದಂಡ ವಿಧಿಸಲು' ಅವಕಾಶವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT