ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚ್‌ಬಿಹಾರ್ ಹತ್ಯೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ: ಮಮತಾ ಬ್ಯಾನರ್ಜಿ

ಸಂತ್ರಸ್ತ ಕುಟುಂಬದವರನ್ನು ಭೇಟಿಯಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Last Updated 14 ಏಪ್ರಿಲ್ 2021, 19:34 IST
ಅಕ್ಷರ ಗಾತ್ರ

ಮಾಥಾಭಂಗ (ಪಶ್ಚಿಮ ಬಂಗಾಳ): ‘ಕೂಚ್‌ಬಿಹಾರ್‌ನಲ್ಲಿ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ತಪ್ಪಿತಸ್ಥ ಎಲ್ಲರಿಗೂ ಕಾನೂನಿನಡಿ ಶಿಕ್ಷೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಏ.10ರಂದು ಕೂಚ್‌ಬಿಹಾರ್‌ನ ಮತಗಟ್ಟೆಯೊಂದರಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ, ಸಿಐಎಸ್‌ಎಫ್‌ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ನಾಲ್ವರು ಮೃತಪಟ್ಟಿದ್ದರು. ಮೃತರ ಕುಟುಂಬದವರನ್ನು ಮಮತಾ ಅವರು ಬುಧವಾರ ಭೇಟಿಮಾಡಿ ಸಾಂತ್ವನ ಹೇಳಿದರು. ಘಟನೆಯ ಸ್ವಲ್ಪವೇ ಸಮಯದ ನಂತರ ಪ್ರತಿಕ್ರಿಯೆ ನೀಡಿದ್ದ ಮಮತಾ, ‘ಈ ಬಗ್ಗೆ ಸಿಐಡಿ ತನಿಖೆ ನಡೆಸಲಾಗುವುದು’ ಎಂದಿದ್ದರು.

ಇನ್ನೊಂದು ಮತಗಟ್ಟೆಯಲ್ಲಿ ಹತ್ಯೆಯಾಗಿದ್ದ, ಮೊದಲಬಾರಿ ಮತದಾನಕ್ಕೆ ಬಂದಿದ್ದ 18 ವರ್ಷ ವಯಸ್ಸಿನ ಆನಂದ ಬರ್ಮನ್‌ ಅವರ ಕುಟುಂಬದವರಿಗೂ ನ್ಯಾಯ ಒದಗಿಸಲಾಗುವುದು ಎಂದರು.

70ಕ್ಕೂ ಹೆಚ್ಚು ಸ್ಥಾನ ಗೆಲ್ಲದು: ಜಲಪೈಗುರಿ ಜಿಲ್ಲೆಯ ದಬಗ್ರಾಮ–ಫೂಲ್‌ಬರಿಯಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಮಮತಾ, ‘ಮತದಾನಕ್ಕೆ ಒಳಗಾಗಿರುವ 135 ಕ್ಷೇತ್ರಗಳಲ್ಲಿ 100ರಲ್ಲಿ ಬಿಜೆಪಿಯು ಈಗಾಗಲೇ ಗೆದ್ದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಒಟ್ಟಾರೆ 70ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಾರದು ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ’ ಎಂದರು.

ಈ ಘಟನೆ ನಡೆದ ನಂತರ ಕೂಚ್‌ಬಿಹಾರ್‌ ಪ್ರವೇಶಿಸದಂತೆ ರಾಜಕೀಯ ಮುಖಂಡರಿಗೆ72 ಗಂಟೆಗಳ ನಿಷೇಧ ವಿಧಿಸಿದ್ದರಿಂದ ಮೃತರ ಕುಟುಂಬವನ್ನು ಭೇಟಿಯಾಗಲು ತಡವಾಯಿತು ಎಂದು ಮಮತಾ ಬ್ಯಾನರ್ಜಿ ವಿಷಾದಿಸಿದರು.

ಏಪ್ರಿಲ್ 10ರಂದು ನಾಲ್ಕನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯುವಾಗ ನಡೆದ ಘರ್ಷಣೆ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸಿಐಎಸ್‌ಎಫ್‌ನವರು ಗುಂಡು ಹಾರಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT