ಮಮತಾ ಮೇಲಿನ ದಾಳಿಗೆ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದ ರಾಜಕೀಯ ನಾಯಕರು

ನವದೆಹಲಿ/ಚೆನ್ನೈ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲೆ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಬುಧವಾರ ನಡೆದ ದಾಳಿಯನ್ನು ಹಲವು ರಾಜಕೀಯ ಮುಖಂಡರು ಖಂಡಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ಮಮತಾ ದೀದಿ ಮೇಲಿನ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಶಿಕ್ಷಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ಮಮತಾ ಬ್ಯಾನರ್ಜಿ ಮೇಲಿನ ದಾಳಿಯು ಭಾರತದ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇಂತಹ ಅಪರಾಧ ಎಸಗಿದವರಿಗೆ ಈ ಕೂಡಲೇ ಶಿಕ್ಷೆ ಆಗಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಪ್ಪಿಸಲು ಭಾರತದ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಡಿಎಂಕೆ ನಾಯಕ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ- ತಳ್ಳಿದ ಅಪರಿಚಿತರು: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲಗಾಲಿಗೆ ಗಾಯ
ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ, ' ಪ್ರಜಾಪ್ರಭುತ್ವದಲ್ಲಿ ದ್ವೇಷ ಮತ್ತು ಹಿಂಸೆ ಸ್ವೀಕಾರಾರ್ಹವಲ್ಲ. ಅದನ್ನು ನಾವು ಖಂಡಿಸಲೇಬೇಕಿದೆ. ಟಿಎಂಸಿ ನಾಯಕಿಯ ತ್ವರಿತ ಚೇತರಿಕೆಗೆ ನಾನು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ- ಬಿಜೆಪಿಯನ್ನು ಮಣಿಸಲು ಬಂಗಾಳಕ್ಕೆ ಭೇಟಿ ನೀಡಲಿರುವ ರಾಕೇಶ್ ಟಿಕಾಯತ್
ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಮಮತಾ ಅವರ ಮೇಲೆ ದಾಳಿ ನಡೆದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ವರದಿ ಕೇಳಿದೆ.
ಇದನ್ನೂ ಓದಿ- ಮಮತಾಗೆ ಮಾಡು ಇಲ್ಲವೇ ಮಡಿ ಹೋರಾಟ: ಬಿಜೆಪಿಯ ತಂತ್ರಗಳಿಗೆ ಟಿಎಂಸಿ ಪ್ರತಿತಂತ್ರ
'ಕೆಲವು ಅಪರಿಚಿತರು ತಮ್ಮನ್ನು ತಳ್ಳಿದ್ದೂ ಅಲ್ಲದೇ ಎಡಗಾಲಿಗೆ ಗಾಯ ಆಗುವಂತೆ ಕಾರಿನ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಟಿಎಂಸಿ ನಿರ್ಧರಿಸಿದೆ.
ಇದನ್ನೂ ಓದಿ- ಆಸ್ಪತ್ರೆಯಲ್ಲಿರುವ ಮಮತಾ ಚಿತ್ರ ಹಂಚಿಕೊಂಡ ಅಳಿಯ ಅಭಿಷೇಕ್: ಬಿಜೆಪಿಗೆ ನೇರ ಸವಾಲು
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, 8 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.
VIDEO: ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ಕೋಲ್ಕತ್ತಾ ಆಸ್ಪತ್ರೆಗೆ ದಾಖಲು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.