ಗುರುವಾರ , ಜೂನ್ 24, 2021
25 °C

ಬಂಗಾಳ ಹಿಂಸಾಚಾರ; 14 ಕಾರ್ಯಕರ್ತರ ಹತ್ಯೆ, ಒಂದು ಲಕ್ಷ ಮಂದಿ ಪಲಾಯನ: ನಡ್ಡಾ

ಪಿಟಿಐ‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆದ ಹಿಂಸಾಚಾರದಲ್ಲಿ ಪಕ್ಷದ 14 ಮಂದಿ ಕಾರ್ಯಕರ್ತರನ್ನು ಹತ್ಯೆಗೈಯಲಾಗಿದ್ದು, ಸುಮಾರು ಒಂದು ಲಕ್ಷ ಜನರು ತಮ್ಮ ಮನೆಯನ್ನು ಬಿಟ್ಟು ಪಲಾಯನ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.

ಆದರೆ ಬಿಜೆಪಿ ಹೊರಿಸಿರುವ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿರಾಕರಿಸಿದ್ದು, ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಹಿಂಸಾಚಾರ ವ್ಯಾಪಿಸಿತ್ತು. ಇದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಹೊಣೆಯಾಗಿದ್ದು, ಅವರು ಮೌನ ಪಾಲಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 

ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ 14 ಬಿಜೆಪಿ ಕಾರ್ಯಕರ್ತರನ್ನು ಕ್ರೂರವಾಗಿ ಹತ್ಯೆಗೈಯಲಾಗಿದೆ. ಮಹಿಳೆಯರ ವಿರುದ್ಧ ಕಿರುಕುಳ ಹಾಗೂ ಅತ್ಯಾಚಾರ ಎಸಗಲಾಗಿದೆ. ಬಂಗಾಳದ ಉತ್ತರ ಜಿಲ್ಲೆಯಲ್ಲಿನ ಜನರು ತಮ್ಮ ಪ್ರಾಣವನ್ನು ಉಳಿಸುವುದಕ್ಕಾಗಿ ನೆರೆಯ ಅಸ್ಸಾಂ ರಾಜ್ಯಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ನಡ್ಡಾ ಗಂಭೀರ ಆರೋಪ ಮಾಡಿದ್ದಾರೆ.

292 ಸಂಖ್ಯಾ ಬಲದ ಪಶ್ಚಿಮ ಬಂಗಾಳಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 213 ಹಾಗೂ ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.

ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್ ಪುರ್ಬಾ ಕ್ಷೇತ್ರದಲ್ಲಿ ಕಾರ್ಯಕರ್ತರ ಮೇಲಿನ ದಾಳಿಯನ್ನು ಉಲ್ಲೇಖಿಸಿರುವ ನಡ್ಡಾ, ಕಳೆದ ವರ್ಷ 'ಅಂಫಾನ್' ಚಂಡಮಾರುತ ಅಪ್ಪಳಿಸಿತ್ತು. ಈ ಬಾರಿ 'ಮಮತಾಫನ್' ಎಂದು ಟೀಕಿಸಿದ್ದಾರೆ.

ಬಿಜೆಪಿ ಆರೋಪಗಳನ್ನು ಅಲ್ಲಗಳೆದಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, ಭಾರತೀಯ ಜನತಾ ಪಕ್ಷದ ಒಳಜಗಳದಿಂದ ಬಹುತೇಕ ಹಿಂಸಾಚಾರಗಳು ಘಟಿಸಿವೆ. ಅಲ್ಲದೆ ಘರ್ಷಣೆಯಲ್ಲಿ ಆರು ಟಿಎಂಸಿ ಬೆಂಬಲಿಗರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: 

ಬಂಗಾಳದಲ್ಲಿ ಸಂವಿಧಾನದ 356ನೇ ವಿಧಿ ಹೇರಲಾಗುವುದೇ ಎಂಬುದಕ್ಕೆ ರಾಜ್ಯಪಾಲರು ವರದಿಯನ್ನು ಕಳುಹಿಸುತ್ತಾರೆ. ಕೇಂದ್ರ ಹಾಗೂ ಗೃಹ ಸಚಿವಾವಲಯಗಳು ವಿಶ್ಲೇಷಿಸಿದ ನಂತರ ಕ್ರಮ ಕೈಗೊಳ್ಳುತ್ತಾರೆ. ಹಾಗಾಗಿ ನಿರ್ಣಯವನ್ನು ಅವರೇ ತೆಗೆದುಕೊಳ್ಳಬೇಕು ಎಂದು ಕಾರ್ಯವಿಧಾನವನ್ನು ನಡ್ಡಾ ವಿವರಿಸಿದರು.

ಸಂವಿಧಾನದ 356ನೇ ವಿಧಿ ಬಳಸಿ ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು