ಮಂಗಳವಾರ, ಜೂನ್ 22, 2021
22 °C
ಉದಯ್‌ ಬಿಜೆಪಿ ಬೆಂಬಲಿಗ, ಸಿಐಸಿ ಸಿನ್ಹಾಗೆ ಅನುಭವವೇ ಇಲ್ಲ: ಚೌಧರಿ

ಮಾಹಿತಿ ಆಯುಕ್ತರ ಆಯ್ಕೆಗೆ ಆಕ್ಷೇಪಗಳೇನು?

ಶೆಮಿನ್‌ ಜಾಯ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಮಾಹಿತಿ ಆಯೋಗದಲ್ಲಿ (ಸಿಐಸಿ) ಮಾಹಿತಿ ಆಯುಕ್ತರಾಗಿ ಪತ್ರಕರ್ತ ಉದಯ್‌ ಮಹುರ್ಕರ್‌ ಅವರ ನೇಮಕವನ್ನು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ವಿರೋಧಿಸಿದ್ದಾರೆ. ಉದಯ್‌ ಅವರು ಬಹಿರಂಗವಾಗಿಯೇ ‘ಬಿಜೆಪಿ ಬೆಂಬಲಿಗ’ ಎನ್ನುವುದು ಈ ವಿರೋಧಕ್ಕೆ ಕಾರಣ. ಆಯ್ಕೆ ಪಟ್ಟಿಯಲ್ಲಿ ಉದಯ್‌ ಹೆಸರು ಸೇರಿಸುವಂತೆ ಸಂಪುಟ ಕಾರ್ಯದರ್ಶಿಯ ಮೇಲೆ ಒತ್ತಡ ಇತ್ತೇ ಎಂಬುದನ್ನು ವಿವರಿಸಬೇಕು ಎಂದೂ ಚೌಧರಿ ಅವರು ಆಗ್ರಹಿಸಿದ್ದಾರೆ. 

ಪ್ರಧಾನಿ ನೇತೃತ್ವದ ಮೂವರು ಸದಸ್ಯರ ಆಯ್ಕೆ ಸಮಿತಿಯಲ್ಲಿ ಚೌಧರಿ ಅವರೂ ಸದಸ್ಯ. ಶೋಧನಾ ಸಮಿತಿಯು ಸಿದ್ಧಪಡಿಸಿದ ಪಟ್ಟಿಯಲ್ಲಿ ವೈ.ಕೆ. ಸಿನ್ಹಾ ಅವರ ಹೆಸರು ಸೇರ್ಪಡೆ ಆಗಿರುವುದಕ್ಕೂ ಚೌಧರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿನ್ಹಾ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಈ ಹುದ್ದೆಗೆ ಬೇಕಾದ ‘ದೇಶದೊಳಗೆ ಕೆಲಸ ಮಾಡಿದ’ ಅನುಭವ ಅವರಿಗೆ ಇಲ್ಲ ಎಂಬುದು ಅವರ ಆಕ್ಷೇಪವಾಗಿದೆ. 

ಆಕ್ಟೋಬರ್‌ 24ರಂದು ನಡೆದ ಸಭೆಯಲ್ಲಿ ಚೌಧರಿ ಅವರು ತಮ್ಮ ಆಕ್ಷೇಪಗಳನ್ನು ದಾಖಲಿಸಿದ್ದರು. ಈ ಸಭೆ ಯಲ್ಲಿಯೇ ಸಿನ್ಹಾ, ಉದಯ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಜತೆಗೆ, ಸರೋಜ್‌ ಪುನ್ಹಾನಿ ಮತ್ತು ಹೀರಾಲಾಲ್‌ ಸಮರಿಯಾ ಅವರನ್ನೂ ಮಾಹಿತಿ ಆಯಕ್ತರನ್ನಾಗಿ ನೇಮಿಸಲಾಗಿತ್ತು. 

ಚೌಧರಿ ಅವರು ಸಲ್ಲಿಸಿದ ಆಕ್ಷೇಪಣಾ ಪತ್ರದ ಪ್ರತಿಯನ್ನು ನೀಡುವಂತೆ ‘ಪ್ರಜಾವಾಣಿ’ಯು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮನವಿ ಸಲ್ಲಿಸಿತ್ತು. ಅಗತ್ಯ ಅನುಮತಿಗಳನ್ನು ಪಡೆದ ಬಳಿಕ ಈ ಪತ್ರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಇಲಾಖೆಯು ಹೇಳಿತ್ತು. ಅದರಂತೆ, ಈ ಪತ್ರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಗುರುವಾರ ಮಾಹಿತಿ ನೀಡಿದೆ. 

ಆಯ್ಕೆ ಪಟ್ಟಿಯಲ್ಲಿ ಉದಯ್‌ ಅವರು ಸ್ಥಾನ ಪಡೆದದ್ದೇ ಆಘಾತಕರ. ಏಕೆಂದರೆ, ಈ ಹುದ್ದೆಗೆ ಅರ್ಜಿ ಸಲ್ಲಿಸಿದ 355 ಮಂದಿಯಲ್ಲಿ ಅವರ ಹೆಸರು ಇರಲೇ ಇಲ್ಲ. ಶೋಧನಾ ಸಮಿತಿಯೇ ಉದಯ್‌ ಅವರ ಹೆಸರನ್ನು ಸೇರ್ಪಡೆ ಮಾಡಿದೆ. ಇದು, ಶೋಧನಾ ಸಮಿತಿಯ ಬದ್ಧತೆಯ ಬಗ್ಗೆಯೇ ಗಂಭೀರ ಅನುಮಾನಗಳಿಗೆ ಕಾರಣವಾಗುತ್ತದೆ ಎಂದು ಚೌಧರಿ ಹೇಳಿದ್ದಾರೆ. 

ಉದಯ್‌ ಅವರ ಹೆಸರು ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಯಾಗಲು ಇದ್ದ ವಿಶೇಷ ಕಾರಣಗಳು ಏನು ಮತ್ತು ತಮ್ಮ ಮೇಲೆ ಇದ್ದ ಒತ್ತಡವೇನು ಎಂಬುದನ್ನು ಶೋಧನಾ ಸಮಿತಿಯ ಅಧ್ಯಕ್ಷರೂ ಆಗಿರುವ ಸಂಪುಟ ಕಾರ್ಯದರ್ಶಿ ವಿವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಉದಯ್‌ ಅವರು ಆಡಳಿತ ಪಕ್ಷದ ಬೆಂಬಲಿಗ ಎಂಬುದನ್ನು ತಿಳಿದುಕೊಳ್ಳಲು ಅವರ ಲೇಖನಗಳು, ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಗಮನಿಸಿ ಎಂದೂ ಹೇಳಿದ್ದಾರೆ. 

‘ದೇಶವೇ ಮೊದಲು ಎಂಬ ವೀರ ಸಾವರ್ಕರ್‌ ಅವರ ಸ್ಫೂರ್ತಿಯಂತೆ ಸೇವೆ ಸಲ್ಲಿಸಲು ಸಿಕ್ಕ ಅವಕಾಶ ಇದು’ ಎಂದು ನೇಮಕದ ಬಳಿಕ ಉದಯ್‌ ಅವರು ಟ್ವೀಟ್‌ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯ ಬಗ್ಗೆ ‘ಮಾರ್ಚಿಂಗ್‌ ವಿದ್‌ ಎ ಬಿಲಿಯನ್‌’ ಎಂಬ ಪುಸ್ತಕವನ್ನೂ ಅವರು ಬರೆದಿದ್ದಾರೆ. 

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗಿಂತ ಆಯ್ಕೆ ಪಟ್ಟಿಗೆ ಸೇರ್ಪಡೆಯಾದವರು ಹೇಗೆ ಹೆಚ್ಚು ಅರ್ಹರು ಎಂಬ ಪ್ರಶ್ನೆಗೆ ಶೋಧನಾ ಸಮಿತಿಯು ಲಿಖಿತವಾದ ಉತ್ತರವನ್ನೇ ನೀಡಿಲ್ಲ ಎಂಬುದು ಇನ್ನಷ್ಟು ಆಘಾತಕಾರಿ ವಿಷಯ ಎಂದು ಚೌಧರಿ ಹೇಳಿದ್ದಾರೆ.

ಸಿಐಸಿ ಆಯ್ಕೆಯ ಭಿನ್ನಮತ
ಮುಖ್ಯ ಮಾಹಿತಿ ಆಯುಕ್ತರಾಗಿ (ಸಿಐಸಿ) ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದ (ಐಎಫ್‌ಎಸ್‌) ಸಿನ್ಹಾ ಅವರ ಆಯ್ಕೆಗೂ ಚೌಧರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸೌಲಭ್ಯ ಹಂಚಿಕೆ, ಕಾನೂನು, ವಿಜ್ಞಾನ, ಮಾನವ ಹಕ್ಕುಗಳು ಮತ್ತು ಸಾಮಾನ್ಯ ಜನರ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಿಐಸಿ ಆಗುವವರಿಗೆ ಅನುಭವ ಇರಬೇಕು. ಆದರೆ, ಐಎಫ್‌ಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯದ ಬಹುಭಾಗವನ್ನು ವಿದೇಶಗಳಲ್ಲಿಯೇ ಕಳೆಯುತ್ತಾರೆ. ದೇಶದಲ್ಲಿ ಇದ್ದರೂ ಇಂತಹ ವಿಚಾರಗಳ ಬಗ್ಗೆ ಅವರಿಗೆ ನೇರ ಅನುಭವ ಇರುವುದಿಲ್ಲ ಎಂಬುದು ಸಿನ್ಹಾ ಅವರ ಆಯ್ಕೆಗೆ ಚೌಧರಿ ಅವರ ಆಕ್ಷೇಪವಾಗಿದೆ. 

ಸಿನ್ಹಾ ಅವರಿಗಿಂತ ಸೇವಾ ಜ್ಯೇಷ್ಠತೆ ಇರುವ, ಮಾಹಿತಿ ಆಯುಕ್ತೆಯೂ ಆಗಿದ್ದ ವನಜಾ ಎನ್.‌ ಸರ್ನಾ ಅವರನ್ನು ಆಯ್ಕೆಪಟ್ಟಿಗೆ ಕೂಡ ಸೇರಿಸದೆ ಇರುವುದು ಏಕೆ ಎಂದೂ ಚೌಧರಿ ಪ್ರಶ್ನಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು