ಪಟ್ನಾ: ಮಧ್ಯಾಹ್ನ 12.15ರ ಅವಧಿಯ ಮತ ಎಣಿಕೆ ಮಾಹಿತಿಯು ಎನ್‌ಡಿಎ ಮುನ್ನಡೆ ಸಾಧ್ಯತೆಯನ್ನು ಸಾರಿ ಹೇಳುತ್ತಿವೆ. ಹಲವು ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ಅಭ್ಯರ್ಥಿಗಳ ಮತಗಳಿಕೆ ಪ್ರಮಾಣದ ಅಂತರವೂ ಹೆಚ್ಚಾಗುತ್ತಿದೆ. ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಪ್ರತಿಪಕ್ಷಗಳು 'ಕಾದು ನೋಡಿ' ಎನ್ನುತ್ತಿವೆ.
ಈ ಬಾರಿ ಬಿಹಾರದಲ್ಲಿ ಮತ ಎಣಿಕೆ ತಡವಾಗುತ್ತಿದೆ. ಇದಕ್ಕೆ ಕೋವಿಡ್ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಅದು ನಿಜವೂ ಹೌದು.
ಪ್ರತಿ ಮತಗಟ್ಟೆಗೆ ಒಟ್ಟು ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗವು 1000ದಿಂದ 1500ಕ್ಕೆ ಮಿತಿಗೊಳಿಸಿತ್ತು. ಹೀಗಾಗಿ ರಾಜ್ಯದಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳ ಸಂಖ್ಯೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಕಳೆದ ಬಾರಿ 62,780 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ ಮತಗಟ್ಟೆಗಳ ಸಂಖ್ಯೆ 1.6 ಲಕ್ಷಕ್ಕೂ ಹೆಚ್ಚಾಗಿತ್ತು.
ಕೆಲ ಕ್ಷೇತ್ರಗಳಲ್ಲಿ 30ರಿಂದ 35 ಸುತ್ತಿನವರೆಗೆ ಮತ ಎಣಿಕೆ ನಡೆಯಬಹುದು ಎನ್ನಲಾಗುತ್ತಿದೆ. ಮಧ್ಯಾಹ್ನ 12.15ರವರೆಗೆ ಕೇವಲ ಶೇ 11ರಷ್ಟು ಮತ ಎಣಿಕೆ ಪೂರ್ಣಗೊಂಡಿದೆ.
ಈವರೆಗಿನ ಮಾಹಿತಿ ಪ್ರಕಾರ ಎನ್‌ಡಿಎ ಮುನ್ನಡೆ ಸಾಧಿಸಿದೆ.
ಶೆಲ್ಖಾಪುರ, ಸುಗೌಳಿ, ನೊಕಾ, ಇಸ್ಲಾಂಪುರ ಕ್ಷೇತ್ರಗಳಲ್ಲಿ ಮುನ್ನಡೆಯ ಅಂತರ ಕೇವಲ 100 ಮತಗಳು. ಏಕ್ಮಾ, ಬಾಜ್‌ಪತ್ತಿ, ಬೆಳಗಂಜ್, ಆರ್ರಾ, ಮಧುಬನಿ, ಬರೌಲಿ ಕ್ಷೇತ್ರಗಳಲ್ಲಿ ಮುನ್ನಡೆಯ ಅಂತರ 200 ಮತಗಳು.
ಇಂಥ ಕ್ಷೇತ್ರಗಳಲ್ಲಿ ಮತ ಎಣಿಕೆ ಮುಂದುವರಿದಂತೆ ಗೆಲುವಿನ ದಿಕ್ಕು ಬದಲಾಗಬಹುದು ಎಂಬ ವಿಶ್ವಾಸವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.