ಶುಕ್ರವಾರ, ಮಾರ್ಚ್ 31, 2023
33 °C

ರಾಷ್ಟ್ರ ಧ್ವಜಕ್ಕೆ ಕಾಂಗ್ರೆಸ್‌ನಿಂದ ಅಪಮಾನವಾದ ಆರೋಪ: ‘National Flag’ ಟ್ರೆಂಡ್

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ‘National Flag’ ಎಂಬ ವಿಚಾರ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಸೋಮವಾರ ಟ್ರೆಂಡ್ ಆಗಿದೆ. ರಾಷ್ಟ್ರ ಧ್ವಜವನ್ನು ಕಾಂಗ್ರೆಸ್‌ ಅಪಮಾನಿಸಿದೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್‌ 7ರಂದು ಆರಂಭವಾದ ಕಾಂಗ್ರೆಸ್‌ನ ಭಾರತ ಜೋಡೊ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಲಾಲ್‌ ಚೌಕ್‌ನಲ್ಲಿ ಜನವರಿ 29ರಂದು (ಭಾನುವಾರ) ತ್ರಿವರ್ಣ ಧ್ವಜಾರೋಹಣ ನಡೆಸುವುದರೊಂದಿಗೆ ಮುಕ್ತಾಯಗೊಂಡಿತು.

ಬಳಿಕ ಸುದ್ದಿಗಾರರಗೊಂದಿಗೆ ಮಾತನಾಡಿದ ರಾಹುಲ್‌, '4,000 ಕಿ.ಮೀ ಪ್ರಯಾಣದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ. ಇದು ನನ್ನ ಬದುಕಿನ ಅತ್ಯಂತ ಸುಂದರವಾದ ಹಾಗೂ ಗಾಢವಾದ ಅನುಭವ' ಎಂದು ಹೇಳಿಕೊಂಡರು.

ಆದರೆ, ಧ್ವಜಾರೋಹಣ ಸಮಾರಂಭದಲ್ಲಿ ಆಗಿರುವ ಅಚಾತುರ್ಯವೊಂದನ್ನು ಬಿಜೆಪಿ ನಾಯಕರು ಮತ್ತು ಕೆಲ ಸಾಮಾಜಿಕ ಜಾಲತಾಣದ ಮಂದಿ ಪತ್ತೆ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ತಿರಂಗ ಧ್ವಜ ಬಳಸುವ ಕ್ರಮ

ಲಾಲ್‌ ಚೌಕ್‌ನಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಸ್ತಂಭದ ಪಕ್ಕದಲ್ಲಿ ರಾಹುಲ್‌ ಗಾಂಧಿ ಅವರ ಕಟೌಟ್‌ ಅನ್ನು ನಿಲ್ಲಿಸಲಾಗಿತ್ತು. ಕಟೌಟ್‌ ಧ್ವಜಸ್ತಂಭಕ್ಕಿಂತಲೂ ಎತ್ತರವಿದ್ದದ್ದು ಟೀಕೆ ಗುರಿಯಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್‌ ಬಗ್ಗಾ, ‘ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಕ್ಕೆ ರಾಹುಲ್‌ ಗಾಂಧಿಗೆ ನಾಚಿಕೆಯಾಗಬೇಕು. ಗಾಂಧಿ ಕುಟುಂಬಕ್ಕೆ ದೇಶದ ಬಗ್ಗೆ ಎಷ್ಟು ಗೊತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಧ್ವಜಸಂಹಿತೆಯನ್ನೂ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ 1992ರಲ್ಲಿ ಬಿಜೆಪಿ ಜಮ್ಮು ಕಾಶ್ಮೀರದ ಲಾಲ್‌ ಚೌಕ್‌ನಲ್ಲಿ ರಾಷ್ಟ್ರ ಧ್ವಜ ಹಾರಿಸಿದ ಸಂದರ್ಭವನ್ನು ಚರ್ಚೆಯ ಮುನ್ನೆಲೆಗೆ ತರಲಾಗಿದೆ. ಮೋದಿ ಸೇರಿದಂತೆ ಬಿಜೆಪಿ ನಾಯಕರು ಜೀವ ಪಣಕ್ಕಿಟ್ಟು ಲಾಲ್‌ ಚೌಕ್‌ನಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದರು ಎಂದು ಹಲವರು ಫೋಟೊ ಹಂಚಿಕೊಂಡಿದ್ದಾರೆ.

ನಾಯಕರೆಂದು ಕರೆಸಿಕೊಳ್ಳುವವರು ತಮ್ಮ ಕಟೌಟ್ ಹಾಕಿಕೊಂಡು, ಧ್ವಜ ಸಂಹಿತೆ ಉಲ್ಲಂಘಿಸಿ, ಧ್ವಜಾರೋಹಣ ಮಾಡಿದ್ದು ಕ್ರೌರ್ಯ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು