ಭಾನುವಾರ, ಮೇ 29, 2022
30 °C
ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌, ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್ ಅಕ್ಕಪಕ್ಕ ಕುಳಿತ ಚಿತ್ರ ಗುರಿಯಾಗಿಸಿ ಕಾಂಗ್ರೆಸ್‌ ಟೀಕೆ

ಉತ್ತರ ಪ್ರದೇಶ: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ‘ಚಿತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ದೆಹಲಿಯಲ್ಲಿ ನಡೆದ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ವಿವಾಹದ ಆರತಕ್ಷತೆ ಕಾರ್ಯಕ್ರಮದಲ್ಲಿ ಕ್ಲಿಕ್ಕಿಸಿದ ಚಿತ್ರವೊಂದು, ಚುನಾವಣೆ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾವಗತ್‌ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್ ಅವರು ಅಕ್ಕಪಕ್ಕ ಆಸೀನರಾಗಿದ್ದಾಗ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಈ ಚಿತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌, ಸಮಾಜವಾದಿ ಪಕ್ಷದ ವಿರುದ್ಧ ತೀಕ್ಷ್ಣ ಟೀಕೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡರು ಸಹ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.

‘ಈ ಚಿತ್ರ ಹೊಸದಾದ ‘ಎಸ್‌ಪಿ’ಯನ್ನು ತೋರಿಸುತ್ತದೆ. ‘ಎಸ್‌’ ಎಂಬುದು ‘ಸಂಘವಾದ’ವನ್ನು ಹೇಳುತ್ತದೆ’ ಎಂದು ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕ ಟ್ವೀಟ್ ಮಾಡಿದೆ.

‘ಧನ್ಯವಾದ ಸಮಾಜವಾದಿ ಪಕ್ಷ. ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್ ಅವರು ಮೋಹನ್‌ ಭಾಗವತ್‌ ಅವರನ್ನು ಆಶೀರ್ವದಿಸಿದ್ದಾರೆ. ಈ ಬಗ್ಗೆಯೇ ನಾವು ತಿಳಿದುಕೊಳ್ಳಲು ಕಾಯುತ್ತಿದ್ದೆವು. ಈ ವಿಷಯವನ್ನು ರಾಜ್ಯದ ಜನರಿಗೆ ಸ್ಪಷ್ಟಪಡಿಸಿದ್ದೀರಿ. ಇದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು’ ಎಂದು ಟ್ವೀಟ್‌ನಲ್ಲಿ ಛೇಡಿಸಿದೆ.

ತಕ್ಷಣವೇ, ಸಮಾಜವಾದಿ ಪಕ್ಷದ ಮುಖಂಡರು ಪ್ರತಿಕ್ರಿಯಿಸಿದ್ದು, ‘ಕಾಂಗ್ರೆಸ್‌ನವರು ರಾಜಕಾರಣದಲ್ಲಿ ಸೌಜನ್ಯವನ್ನು ಮರೆತಂತೆ ಕಾಣುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಎನ್‌ಸಿಪಿ ಮೈತ್ರಿ ಮಾಡಿಕೊಂಡು, ಸರ್ಕಾರ ರಚಿಸಿದೆ. ಎನ್‌ಸಿಪಿಯ ಹಲವು ಮುಖಂಡರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮುಲಾಯಂ ಸಿಂಗ್‌ ಯಾದವ್ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಏನು ಹೇಳುತ್ತದೆ’ ಎಂದು ಟ್ವೀಟ್‌ ಮೂಲಕ ಎಸ್‌ಪಿ ‍ಪ್ರಶ್ನಿಸಿದೆ.

ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿಯೇ ಸ್ಪರ್ಧಿಸಲು ತೀರ್ಮಾನಿಸಿದೆ. ಹೀಗಾಗಿ, ಸಮಾಜವಾದಿ ಪಕ್ಷದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಎಸ್‌ಪಿ ಹಾಗೂ ಬಿಜೆಪಿ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿವೆ ಎಂಬ ಸಂದೇಶವನ್ನು ಮುಸ್ಲಿಮರಿಗೆ ರವಾನಿಸುವ ಪ್ರಯತ್ನದ ಭಾಗವಾಗಿ ಕಾಂಗ್ರೆಸ್‌ ಈಗ ಈ ಚಿತ್ರವನ್ನು ಮುಂದಿಟ್ಟುಕೊಂಡು ಟೀಕೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು