ಶುಕ್ರವಾರ, ಆಗಸ್ಟ್ 12, 2022
21 °C
ಕೇರಳ: ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಕೇರಳ ಸಚಿವ ಜಲೀಲ್‌ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ರಾಜ್ಯದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಶನಿವಾರ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ತಿರುವನಂತಪುರದಲ್ಲಿರುವ ಸಚಿವಾಲಯದ ಮುಂದೆ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದ್ದರಿಂದ ಪಕ್ಷದ ವಕ್ತಾರ ಬಿ. ಗೋಪಾಲಕೃಷ್ಣನ್‌ ಹಾಗೂ ಹಲವರು ಗಾಯಗೊಂಡಿದ್ದರು. ಕಾಂಗ್ರೆಸ್‌, ಬಿಜೆಪಿ ಹಾಗೂ ಯುವ ಮೋರ್ಚಾಗಳ ನೇತೃತ್ವದಲ್ಲಿ ಶನಿವಾರ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಪ್ರತಿಭಟನೆ ನಡೆಸಲಾಗಿದೆ.

ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ಪ್ರವಾಹ ಸಂತ್ರಸ್ತರಿಗೆ ವಿತರಿಸಲು ಜಲೀಲ್‌ ಅವರು ಅರಬ್‌ ಸಂಯುಕ್ತ ರಾಷ್ಟ್ರಗಳಿಂದ ಸುಮಾರು 300 ಪರಿಹಾರ ಕಿಟ್‌ ಹಾಗೂ ಕುರಾನ್ ಪ್ರತಿ‌ಗಳನ್ನು ತರಿಸಿದ್ದರು. ರಾಜತಾಂತ್ರಿಕ ಬ್ಯಾಗೇಜ್‌ ಮೂಲಕ ಅಕ್ರಮವಾಗಿ ಇವುಗಳನ್ನು ತರಿಸಲಾತ್ತು ಎಂಬ ಆರೋಪವಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯವು ಶುಕ್ರವಾರ ಜಲೀಲ್‌ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದ್ದರು.

‘ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ಅಕ್ರಮದ ಪಾಲು ಪಡೆದಿರುವುದರಿಂದ ಜಲೀಲ್‌ ಅವರ ರಕ್ಷಣೆಗೆ ನಿಂತಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕತೆಯನ್ನು ಅವರು ಕಳೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ, ವಿರೋಧಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಆರೋಪಿಸಿದ್ದಾರೆ.

‘ಕೇರಳದಲ್ಲಿ ಪ್ರವಾಹ ಸಂಭವಿಸಿದ ನಂತರ ಅನೇಕ ಧಾರ್ಮಿಕ ಸಂಘಟನೆ
ಗಳು ಅಕ್ರಮವಾಗಿ ವಿದೇಶಿ ದೇಣಿಗೆ ಸಂಗ್ರಹಿಸಿವೆ. ಇವುಗಳಿಂದಲೂ ಜಲೀಲ್‌ ಅವರಿಗೆ ಪಾಲು ಸಂದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಆರೋಪಿಸಿದ್ದಾರೆ. ವಿರೋಧಪಕ್ಷಗಳ ಆರೋಪಗಳಿಗೆ ಜಲೀಲ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರವಾಹಕ್ಕೂ ಹಿಂದೆಯೂ ಜಲೀಲ್‌ ಇಂಥ ಕಿಟ್‌ಗಳನ್ನು ಪಡೆದಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಬಂದಿರುವ ದೂರಿನ ಆಧಾರದಲ್ಲಿ ಕೇರಳ ಲೋಕಾಯುಕ್ತವು ಸಹ ಸಚಿವರಿಗೆ ನೋಟಿಸ್‌ ಜಾರಿ ಮಾಡಿದೆ. ಜಲೀಲ್‌ ಅವರನ್ನು ಪುನಃ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಲೀಲ್‌ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೂ ದೂರು ಬಂದಿದೆ ಎನ್ನಲಾಗಿದೆ. ಜಲೀಲ್‌ ಅವರು ವಿದೇಶ ವಿನಿಮಯ ನಿಯಂತ್ರಣ ಹಾಗೂ ಮಾನದಂಡಗಳ ನಿಯಮಗಳನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು