ಶನಿವಾರ, ಸೆಪ್ಟೆಂಬರ್ 18, 2021
22 °C

ಬಿಜೆಪಿ ವಿರುದ್ಧ ಒಗ್ಗಟ್ಟು ಯತ್ನಕ್ಕೆ ಮಮತಾ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳ ಒಕ್ಕೂಟದ ಮುಂದಾಳು ಯಾರಾಗುತ್ತಾರೆ ಎಂಬುದು ಪರಿಸ್ಥಿತಿಯನ್ನು ಆಧರಿಸಿದೆ. ಈ ಒಕ್ಕೂಟವನ್ನು ನಾನೇ ಮುನ್ನಡೆಸಬೇಕು ಎಂದೇನಿಲ್ಲ. ಯಾರು ಮುನ್ನಡೆಸಿದರೂ ನನಗೆ ಅಭ್ಯಂತರವಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಜತೆ ದೆಹಲಿಯಲ್ಲಿ ಮಾತುಕತೆ ನಡೆಸಿದ ಬಳಿಕ ಆಯ್ದ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಮಾತುಕತೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಹ ಹಾಜರಿದ್ದರು. ಮಾತುಕತೆಯು 45 ನಿಮಿಷಗಳವರೆಗೆ ನಡೆಯಿತು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ, ಮಮತಾ ಅವರು ದೆಹಲಿಗೆ ಭೇಟಿ ನೀಡಿದ್ದು ಇದೇ ಮೊದಲು.

‘ಬೆಕ್ಕಿಗೆ ಗಂಟೆ ಕಟ್ಟುವಲ್ಲಿ ವಿರೋಧ ಪಕ್ಷಗಳಿಗೆ ನೆರವಾಗಲು ಬಯಸುತ್ತೇನೆ. ನಾನೇ ಮುಂದಾಳು ಆಗಬೇಕೆಂದು ನಾನು ಬಯಸಿಲ್ಲ. ಬದಲಿಗೆ ಒಕ್ಕೂಟದ ಸಾಮಾನ್ಯ ಕಾರ್ಯಕರ್ತೆಯಾಗಿ ಹೋರಾಡಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. 

‘ನಾನು ರಾಜಕೀಯ ಜ್ಯೋತಿಷಿ ಅಲ್ಲ. ಯಾರು ಮುಂದಾಳು ಆಗುತ್ತಾರೆ ಎಂಬುದು ಪರಿಸ್ಥಿತಿಯನ್ನು ಆಧರಿಸಿದೆ. ಆ ಬಗ್ಗೆ ಚರ್ಚೆ ನಡೆದಾಗ, ಮುಂದಾಳು ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದಿದ್ದರೆ, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಮಮತಾ ಅವರು ಪ್ರತಿಪಾದಿಸಿದ್ದಾರೆ.

‘ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನೇ ಎದುರಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ವಿರೋಧ ಪಕ್ಷಗಳ ನಾಯಕರು ಬಯಸುವುದಾದರೆ, ಅವರೆಲ್ಲರೂ ಒಗ್ಗಟ್ಟಾಗಬೇಕು. ಒಂಟಿಯಾಗಿಯೇ ಬಿಜೆಪಿಯನ್ನು ಎದುರಿಸುತ್ತೇವೆ ಎಂದು ಮಾಯಾವತಿಯಂಥವರು ಬಯಸುವುದಾದರೆ, ಅವರು ಒಂಟಿಯಾಗಿಯೇ ಸ್ಫರ್ಧಿಸಲಿ. ಆ ಬಗ್ಗೆ ನಾವು ಏನು ಹೇಳಲು ಸಾಧ್ಯ? ಅವರಿಗೆ ಎಷ್ಟು ಗೌರವ ಸಿಗಬೇಕೋ, ಅಷ್ಟು ಗೌರವವನ್ನು ನಾನು ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಭೇಟಿ ಧನಾತ್ಮಕ’

‘ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಜತೆ ನಡೆದ ಭೇಟಿ ಮತ್ತು ಮಾತುಕತೆ ಧನಾತ್ಮಕವಾಗಿತ್ತು’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ನನ್ನ ಮತ್ತು ಸೋನಿಯಾಜಿ ಅವರ ಸ್ನೇಹ ದಶಕಗಳಷ್ಟು ಹಳೆಯದು. ಅವರು ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಹೀಗಾಗಿ ಭೇಟಿ ನೀಡಿದ್ದೆ. ದೇಶದ ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದೆವು. ಪೆಗಾಸಸ್ ಗೂಢಚರ್ಯೆ, ಆರ್ಥಿಕತೆ ಮತ್ತು ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳ ಒಕ್ಕೂಟದ ಬಗ್ಗೆ ಮಾತುಕತೆ ನಡೆಸಿದೆವು’ ಎಂದು ಮಮತಾ ಮಾಹಿತಿ ನೀಡಿದ್ದಾರೆ.

‘ಕಾಂಗ್ರೆಸ್‌ನ ಈಗಿನ ಸ್ಥಿತಿಯ ಬಗ್ಗೆ ನಾನೇನೂ ಹೇಳುವುದಿಲ್ಲ. ಅದು ಆ ಪಕ್ಷದ ಆಂತರಿಕ ವಿಚಾರ. ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.

***

ಪೆಗಾಸಸ್ ಕುರಿತು ಸಂಸತ್ತಿನಲ್ಲಿ ಸರ್ಕಾರ ಚರ್ಚೆ ಏಕೆ ನಡೆಸುತ್ತಿಲ್ಲ? ಚರ್ಚೆ ಸಂಸತ್ತಿನಲ್ಲಿ ನಡೆಯಬೇಕು, ಯಾವುದೋ ಚಹಾ ಅಂಗಡಿಯಲ್ಲಿ ಅಲ್ಲ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು