ಸಂಸತ್ ಅಧಿವೇಶನ ವೇಳೆನಿತ್ಯವೂ ಪ್ರತಿಭಟನೆ: ರೈತ ಮುಖಂಡರ ಘೋಷಣೆ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಸತ್ತಿನ ಮುಂಗಾರು ಅಧಿವೇಶನದ ಅವಧಿಯಲ್ಲಿ ಸುಮಾರು 200 ಮಂದಿ ರೈತರು ಪ್ರತಿನಿತ್ಯ ಸಂಸತ್ ಭವನದ ಎದುರು ಪ್ರತಿಭಟಿಸುವರು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಭಾನುವಾರ ಪ್ರಕಟಿಸಿದೆ.
40 ವಿವಿಧ ಕೃಷಿಕ ಸಂಘಟನೆಗಳ ಒಕ್ಕೂಟವಾದ ಎಸ್‌ಕೆಎಂನ ಮುಖಂಡರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ತಿನ ಒಳಗೂ ಪ್ರತಿಭಟಿಸಬೇಕು ಎಂದು ಕೋರಿ ವಿರೋಧಪಕ್ಷದ ಎಲ್ಲ ಸಂಸದರಿಗೂ ಎಚ್ಚರಿಕೆ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.
ಸಂಸತ್ತಿನ ಮುಂಗಾರು ಅಧಿವೇಶನ ಇದೇ 19ರಂದು ಆರಂಭವಾಗಲಿದೆ. ‘ನಾವು ಹೊರಗೆ ಪ್ರತಿಭಟಿಸುತ್ತೇವೆ. ನೀವು ಒಳಗೆ ಪ್ರತಿಭಟಿಸಿ. ವಿಷಯ ಇತ್ಯರ್ಥ ಆಗುವವರೆಗೂ ಕಲಾಪಕ್ಕೆ ಅವಕಾಶ ಕೊಡಬೇಡಿ ಎಂದು ವಿರೋಧಪಕ್ಷಗಳಿಗೆ ಕೋರುತ್ತೇವೆ’ ಎಂದು ಮುಖಂಡ ಗುರ್ನಮ್ ಸಿಂಗ್ ಚಾರುಣಿ ಹೇಳಿದರು.
‘ಪ್ರತಿ ಕೃಷಿಕ ಸಂಘಟನೆಗಳಿಂದಲೂ ಐವರು ಪ್ರತಿಭಟನೆಗೆ ಕೈಜೋಡಿಸುವರು. ಇದರ ಹೊರತಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳ ದರ ಏರಿಕೆಯನ್ನು ಖಂಡಿಸಿ ಜುಲೈ 8ರಂದು ದೇಶವ್ಯಾಪಿ ಪ್ರತಿಭಟನೆಗೂ ಕರೆ ನೀಡಲಾಗಿದೆ’ ಎಂದರು.
‘ಆ ದಿನ ಜನರು ಸ್ವಯಂಪ್ರೇರಿತರಾಗಿ ರಸ್ತೆಗಿಳಿಯಬೇಕು ಹಾಗೂ ತಮ್ಮ ವಾಹನಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೂ ನಿಲ್ಲಿಸಬೇಕು. ನಿಮ್ಮ ಬಳಿ ಯಾವುದೇ ವಾಹನವಿರಲಿ, ತಂದು ರಸ್ತೆಯಲ್ಲಿ ನಿಲ್ಲಿಸಿ. ಆದರೆ ಸಂಚಾರ ದಟ್ಟಣೆ ಮಾಡಬೇಡಿ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.