ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೆ ಅಧ್ಯಕ್ಷ ಸ್ಥಾನ ತೊರೆಯುವೆ ಎಂದ ಅಣ್ಣಾಮಲೈ?

Last Updated 18 ಮಾರ್ಚ್ 2023, 11:40 IST
ಅಕ್ಷರ ಗಾತ್ರ

ಚೆನ್ನೈ: ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ವಿರುದ್ಧವಾಗಿರುವುದಾಗಿ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷದ ಆಂತರಿಕ ಸಭೆಯೊಂದರಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಹೊರಹೊಮ್ಮುವ ಬಗ್ಗೆ ಬಿಜೆಪಿ ಗಂಭೀರವಾಗಿರುವುದೇ ಆಗಿದ್ದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಶುಕ್ರವಾರ ಚೆನ್ನೈನಲ್ಲಿ ನಡೆದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ-ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೀಗೆ ಹೇಳಿದ್ದಾರೆ ಎನ್ನಲಾಗಿದೆ. ಹೈಕಮಾಂಡ್‌ ಏನಾದರೂ ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದರೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಅವರ ಹೇಳಿಕೆ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದು, ರಾಜ್ಯ ಮಟ್ಟದ ಸಭೆಯಲ್ಲಿ ಮೈತ್ರಿ ಬಗ್ಗೆ ಮಾತನಾಡುವ ಅಗತ್ಯವನ್ನು ಕನಿಷ್ಠ ಇಬ್ಬರು ನಾಯಕರು ಪ್ರಶ್ನೆ ಮಾಡಿದ್ದಾರೆ. ಮೈತ್ರಿಗೆ ಸಂಬಂಧಿಸಿದ ನಿರ್ಧಾರಗಳನ್ನು ಬಿಜೆಪಿ ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದವು.

‘ಬಿಜೆಪಿ ಮಹಿಳಾ ಮೋರ್ಚಾ ಮುಖ್ಯಸ್ಥೆ, ಕೊಯಮತ್ತೂರು (ದಕ್ಷಿಣ) ಶಾಸಕಿ ವನತಿ ಶ್ರೀನಿವಾಸನ್ ಮತ್ತು ಉಪಾಧ್ಯಕ್ಷ ನಾರಾಯಣನ್ ತಿರುಪತಿ ಅವರು ಅಣ್ಣಾಮಲೈ ಅವರಿಂದ ಈ ಬಗ್ಗೆ ಸ್ಪಷ್ಟನೆ ಕೇಳಿದರು. ಆದರೆ, ಅಣ್ಣಾಮಲೈ ಅವರ ಅಭಿಪ್ರಾಯಕ್ಕೆ ಪಕ್ಷದ ಕೆಲವು ಮುಖಂಡರಿಂದ ಬೆಂಬಲ ದೊರೆಯಿತು. ಅವರು ಕೂಡ ಬಿಜೆಪಿ ಸ್ವಂತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟರು’ ಎಂದು ಮೂಲಗಳು ಹೇಳಿದವು.

‘ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಯಲ್ಲಿ ದ್ರಾವಿಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂಬುದು ಅಣ್ಣಾಮಲೈ ಅವರ ದೃಢ ನಿಲುವು. ಬಿಜೆಪಿ ಸ್ವತಂತ್ರ ಪಕ್ಷವಾಗಿ ಹೊರಹೊಮ್ಮಬೇಕಾದರೆ ಸ್ವಂತವಾಗಿ ಚುನಾವಣೆ ಎದುರಿಸಬೇಕು ಎಂಬುದು ಅಣ್ಣಾಮಲೈ ಅವರ ಉದ್ದೇಶವಾಗಿತ್ತು’ ಎಂದು ಆಂತರಿಕ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡರೊಬ್ಬರು ‘ಡೆಕ್ಕನ್‌ ಹೆರಾಲ್ಡ್‌’ಗೆ ತಿಳಿಸಿದ್ದಾರೆ.

‘ಕೇಂದ್ರ ನಾಯಕತ್ವವು ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವುದಾಗಿ ಅಣ್ಣಾಮಲೈ ಸಭೆಯಲ್ಲಿ ಹೇಳಿದರು’ ಎಂದು ಮತ್ತೊಬ್ಬ ನಾಯಕ ತಿಳಿಸಿದರು

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT