ಶುಕ್ರವಾರ, ಅಕ್ಟೋಬರ್ 23, 2020
26 °C

ಅತ್ಯಾಚಾರ ಪ್ರಕರಣ ದಾಖಲಿಸಲು 800 ಕಿ.ಮೀ.ಪ್ರಯಾಣಿಸಿದ ಯುವತಿ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ನೇಪಾಳದ 22 ವರ್ಷದ ಯುವತಿಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸುವ ಸಲುವಾಗಿ 800 ಕಿಲೊ ಮೀಟರ್‌ ಪ್ರಯಾಣ ಮಾಡಿದ್ದಾರೆ!

2018ರಲ್ಲಿ ಕೆಲಸ ಅರಸಿ ಭಾರತಕ್ಕೆ ಬಂದಿದ್ದ ಯುವತಿಯ ಮೇಲೆ ಪ್ರವೀಣ್‌ ರಾಜ್‌ಪಾಲ್ ಯಾದವ್‌ ಎಂಬ ವ್ಯಕ್ತಿ ಅತ್ಯಾಚಾರ ನಡೆಸಿದ್ದ. ತನ್ನ ಮೊಬೈಲ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಚಿತ್ರಗಳನ್ನು ಸೆರೆಹಿಡಿದುಕೊಂಡಿದ್ದಲ್ಲದೆ ವಿಡಿಯೊ ಕೂಡ ಚಿತ್ರಿಸಿಕೊಂಡಿದ್ದ. ಪೊಲೀಸರಿಗೆ ದೂರು ನೀಡಿದರೆ ಚಿತ್ರ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಇದರಿಂದ ಭಯಭೀತಳಾದ ಸಂತ್ರಸ್ತೆ, ಆರೋಪಿಯ ಕಣ್ತಪ್ಪಿಸಿ ಉತ್ತರ ಪ್ರದೇಶದ ಲಖನೌದಿಂದ ಮಹಾರಾಷ್ಟ್ರದ ನಾಗಪುರಕ್ಕೆ ಬಂದು ಇಲ್ಲಿನ ಕೊರಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಲಖನೌದ ಫೈಜಾಬಾದ್‌ ರಸ್ತೆಯಲ್ಲಿರುವ ಫ್ಲ್ಯಾಟ್‌ವೊಂದರಲ್ಲಿ ಗೆಳತಿಯೊಂದಿಗೆ ವಾಸವಿದ್ದೆ. ಒಮ್ಮೆ ಆಕೆ ವಿಡಿಯೊ ಕರೆ ಮೂಲಕ ನನ್ನನ್ನು ಯಾದವ್‌ಗೆ ಪರಿಚಯಿಸಿದ್ದಳು. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಆತ ದುಬೈನಲ್ಲಿ ನೆಲೆಸಿದ್ದ. ನಾನು ಗೆಳತಿಗೆ ₹1.5 ಲಕ್ಷ ಹಣ ನೀಡಿದ್ದೆ. ಅದನ್ನು ವಾಪಸ್‌ ಕೇಳಿದಾಗ ಆಕೆ ನನ್ನ ಮೇಲೆ ಹಲ್ಲೆ ನಡೆಸಿದಳು. ನಿಂದಿಸಲೂ ಶುರುಮಾಡಿದಳು. ಈ ವಿಷಯವನ್ನು ಯಾದವ್‌ಗೆ ಹೇಳಿದಾಗ ಹೋಟೆಲ್‌ವೊಂದರಲ್ಲಿ ಕೊಠಡಿ ಕಾಯ್ದಿರಿಸಿದ್ದ ಆತ, ಅಲ್ಲಿಯೇ ಇರುವಂತೆ ನನಗೆ ಸೂಚಿಸಿದ್ದ. ಕೆಲ ದಿನಗಳ ನಂತರ ದುಬೈಯಿಂದ ಲಖನೌಗೆ ಬಂದಿದ್ದ ಆತ ಹೋಟೆಲ್‌ ಕೊಠಡಿಯಲ್ಲಿ ನನ್ನ ಮೇಲೆ ಬಲಾತ್ಕಾರ ಮಾಡಿದ್ದ’ ಎಂದು ಸಂತ್ರಸ್ತ ಯುವತಿ ದೂರಿದ್ದಾರೆ.

‘ಲಖನೌದಲ್ಲಿರುವ ತನ್ನ ಸ್ನೇಹಿತನ ಮನೆಗೂ ಯುವತಿಯನ್ನು ಕರೆದೊಯ್ದಿದ್ದ ಯಾದವ್,‌ ಆಕೆಗೆ ಡ್ರಗ್ಸ್‌ ನೀಡಿ ಅತ್ಯಾಚಾರ ನಡೆಸಿದ್ದ. ಸೆಪ್ಟೆಂಬರ್‌ 30ರಂದು ನಾಗಪುರಕ್ಕೆ ಬಂದಿದ್ದ ಸಂತ್ರಸ್ತೆ, ತನ್ನ ಸ್ನೇಹಿತೆಯ ನೆರವಿನಿಂದ ದೂರು ದಾಖಲಿಸಿದ್ದಾಳೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಯುವತಿ ನೀಡಿದ ದೂರಿನ ಆಧಾರದಲ್ಲಿ ಯಾದವ್‌ ಹಾಗೂ ಸಂತ್ರಸ್ತೆಯ ಸ್ನೇಹಿತೆಯ ವಿರುದ್ಧ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ), 354, 392, 342, 406 ಹಾಗೂ 420ರ ಅಡಿಯಲ್ಲಿ ‘ಶೂನ್ಯ ಎಫ್‌ಐಆರ್‌’ ದಾಖಲಿಸಿಕೊಳ್ಳಲಾಗಿದೆ. ಚಿನ್‌ಹಾಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೀಗಾಗಿ ಆ ಠಾಣೆಯಲ್ಲೇ ದೂರು ದಾಖಲಿಸುವ ಸಲುವಾಗಿ ಯುವತಿಯ ಜೊತೆ ನಮ್ಮ ಪೊಲೀಸ್‌ ತಂಡವೂ ಭಾನುವಾರ ಲಖನೌಗೆ ತೆರಳಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು