ಗುರುವಾರ , ಜನವರಿ 28, 2021
24 °C

ಕಡ್ಡಾಯ ತಪ್ಪೊಪ್ಪಿಗೆ: ‘ಸುಪ್ರೀಂ’ಗೆ ಕೇರಳ ಮಹಿಳೆಯರ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌

ನವದೆಹಲಿ: ಕೇರಳದ ಚರ್ಚ್‌ಗಳಲ್ಲಿ ಅನುಸರಿಸಲಾಗುತ್ತಿರುವ, ಕಡ್ಡಾಯ ತಪ್ಪೊಪ್ಪಿಗೆ ಆಚರಣೆಯನ್ನು ಪ್ರಶ್ನಿಸಿ ಮಹಿಳಾ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ‘ಈ ಆಚರಣೆಯು ಸಂವಿಧಾನವು ಖಾತರಿಪಡಿಸುವ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದು ಸಂಘಟನೆ ವಾದಿಸಿದೆ.

ಶುಕ್ರವಾರ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು, ಮೂರು ವಾರದೊಳಗೆ ಅರ್ಜಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಅವಕಾಶ ನೀಡಿದ್ದಲ್ಲದೆ, ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸೇರಿಸಲು ಅರ್ಜಿದಾರರಾದ ಬೀನಾ ಟಿಟ್ಟಿ ಹಾಗೂ ಇತರರಿಗೆ ಸೂಚಿಸಿತು.

ಈ ವಿಚಾರವಾಗಿ ಹೈಕೋರ್ಟ್‌ ಅನ್ನು ಯಾಕೆ ಸಂಪರ್ಕಿಸಿಲ್ಲ ಎಂದು ನ್ಯಾಯಪೀಠವು ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರನ್ನು ಪ್ರಶ್ನಿಸಿತು.

‘ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ಈಗಾಗಲೇ ಒಪ್ಪಿಸಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಹೈಕೋರ್ಟ್‌ಗೆ ಸಾಧ್ಯವಾಗದು’ ಎಂದು ರೋಹಟಗಿ ಹೇಳಿದರು.

‘ತಪ್ಪೊಪ್ಪಿಗೆಯು ಕಡ್ಡಾಯ ಧಾರ್ಮಿಕ ಕ್ರಿಯೆಯಾಗಿದ್ದರೆ ಮತ್ತು ಅದು ಧರ್ಮದಲ್ಲಿ ನಂಬಿಕೆ ಇರುವವನ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಾದರೆ ಈ ಪ್ರಕರಣವು ಸಾಂವಿಧಾನಿಕ ಮಹತ್ವ ಉಳ್ಳದ್ದಾಗಿದೆ. ಮಹಿಳೆಯರು ಮಾಡಿರುವ ತಪ್ಪೊಪ್ಪಿಗೆಗಳ ದುರುಪಯೋಗ ಮಾಡಿಕೊಂಡ ಪ್ರಸಂಗಗಳಿವೆ’ ಎಂದು ರೋಹಟಗಿ ಹೇಳಿದರು.

‘ಕೇರಳದ ಮಲಂಗರ ಚರ್ಚ್‌ನಲ್ಲಿ ನಡೆದ ಘಟನೆಯ ಪರಿಣಾಮವಾಗಿ ಈ ಪ್ರಶ್ನೆ ಏಳುವಂತಾಗಿದೆ. ಆ ಪ್ರಕರಣವನ್ನು 2017ರಲ್ಲಿ ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಿತ್ತು. ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನಡೆಸಬಹುದಾಗಿದೆ’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದರು.

ಮಲಂಗರ ಆರ್ಥೊಡಕ್ಸ್‌ ಸಿರಿಯನ್‌ ಚರ್ಚ್‌ನಲ್ಲಿ ಅನುಸರಿಸಲಾಗುತ್ತಿರುವ ಈ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಳೆದ ಡಿ.14ರಂದು ಕೇಂದ್ರ ಹಾಗೂ ಕೇರಳ ಸರ್ಕಾರಕ್ಕೆ ನೋಟಿಸ್‌ ನೀಡಿತ್ತು.

‘ಪ್ರತಿಗಾಮಿಯಾದ ಈ ಆಚರಣೆಯು ಲೈಂಗಿಕ ಶೋಷಣೆಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕ್ರೈಸ್ತ ಸನ್ಯಾಸಿನಿಯರೂ ಶೋಷಣೆಗೆ ಒಳಗಾಗಿದ್ದಾರೆ. ಅರ್ಚಕರು ಶೋಷಕರಾಗುವುದು ಸಮಾಜದ ಒಪ್ಪಿತ ನಿಯಮವಾಗುತ್ತಿದೆ. ಇದರಿಂದಾಗಿ ಶೋಷಣೆಗೆ ಒಳಗಾದವರಿಗೆ ಪರಿಹಾರವೇ ಸಿಗದಂಥ ವಾತಾವರಣ ನಿರ್ಮಾಣವಾಗುತ್ತಿದೆ’ ಎಂದು ಮ್ಯಾಥ್ಯು ಟಿ. ಮಾಥಚ್ಚನ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು