ಶುಕ್ರವಾರ, ಆಗಸ್ಟ್ 12, 2022
21 °C
ಕೋವಿಡ್‌ನಿಂದಾಗಿ ಮನೆಯಿಂದಲೇ ಕೆಲಸ: ಸಂಗಾತಿ ಮತ್ತು ವೃತ್ತಿ ಸಂಬಂಧಿ ಒತ್ತಡ

ಆಪ್ತ ಸಮಾಲೋಚನೆ ಬಯಸುವ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಕೋವಿಡ್‌–19 ಮೊದಲ ಅಲೆಯಲ್ಲಿ ವಿಧಿಸಲಾಗಿದ್ದ ರಾಷ್ಟ್ರೀಯ ಲಾಕ್‌ಡೌನ್ ವೇಳೆ ಕೌಟುಂಬಿಕ ಹಿಂಸೆ, ಮಾನಸಿಕ ಸಮಸ್ಯೆ, ಭಾವನಾತ್ಮಕ ಏರಿಳಿತಗಳ ಕುರಿತು ಮಹಿಳೆಯರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ವರದಿಯಾಗಿದ್ದವು. ಆದರೆ, ಕೋವಿಡ್ 2ನೇ ಅಲೆಯಲ್ಲಿ ಅಂದರೆ ಕಳೆದ ಐದಾರು ತಿಂಗಳ ಅವಧಿಯಲ್ಲಿ ಬಂದ ದೂರುಗಳಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದೆಯಂತೆ.

‘ಮನೆಯಿಂದಲೇ ಕೆಲಸ ಮಾಡುತ್ತಿರುವ ಪುರುಷರಲ್ಲಿ ಬಹುತೇಕರು ವೃತ್ತಿ ಮತ್ತು ಸಂಗಾತಿಯೊಂದಿಗಿನ ಸಂಬಂಧದಲ್ಲಿನ ಒತ್ತಡದ ಕಾರಣಕ್ಕಾಗಿ ದೂರು ನೀಡಲು ಮುಂದೆ ಬರುತ್ತಿದ್ದಾರೆ’ ಎಂದು ಆಪ್ತ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಸಂಕಷ್ಟದಲ್ಲಿರುವ ಹಿರಿಯ ನಾಗರಿಕರು, ಮಹಿಳೆ ಮತ್ತು ಮಕ್ಕಳ ಸಹಾಯಕ್ಕಾಗಿ ಪುಣೆಯ ಪೊಲೀಸರು ಸ್ಥಾಪಿಸಿರುವ ‘ಭರೋಸಾ’ ಸಹಾಯವಾಣಿಗೆ ಕಳೆದ ಸೆಪ್ಟೆಂಬರ್‌ನಿಂದಲೇ ಪುರುಷರು ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಭರೋಸಾ’ ಸಹಾಯವಾಣಿಯ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಸುಜಾತ ಶನ್ಮೆ ಅವರ ಪ್ರಕಾರ, 2020ರಲ್ಲಿ ಒಟ್ಟು 2,074 ದೂರುಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ 1,283 ದೂರುಗಳು ಮಹಿಳೆಯರಿಂದ ಬಂದಿದ್ದರೆ ಉಳಿದ 791 ದೂರುಗಳು ಪುರುಷರಿಂದ ಬಂದಿದ್ದವು. 2021ರ ಏಪ್ರಿಲ್‌ ವೇಳೆಗೆ ಪುರುಷರಿಂದ 729 ದೂರುಗಳು ಬಂದಿದ್ದರೆ, ಮಹಿಳೆಯರಿಂದ 266 ದೂರುಗಳು ಮಾತ್ರ ಬಂದಿವೆ.

ಕಳೆದ ವರ್ಷ ಕಟ್ಟುನಿಟ್ಟಾದ ಲಾಕ್‌ಡೌನ್‌ ವೇಳೆಯಲ್ಲಿ ಕೌಟುಂಬಿಕ ದೌರ್ಜನ್ಯ, ಭಾವನಾತ್ಮಕ ಏರುಪೇರು, ಮಾನಸಿಕ ಸಮಸ್ಯೆ, ಗಂಡ ಇಲ್ಲವೇ ಗಂಡನ ಮನೆಯವರ ವರ್ತನೆಯ ಕುರಿತಾಗಿ ಮಹಿಳೆಯರಿಂದ ಹೆಚ್ಚು ದೂರುಗಳು ಬಂದಿದ್ದವು. ಆದರೆ, ಸೆಪ್ಟೆಂಬರ್‌ ನಂತರ ಪುರುಷರಿಂದ ದೂರುಗಳು ಹೆಚ್ಚಾದವು. ಇವುಗಳಲ್ಲಿ ಬಹುತೇಕ ದೂರುಗಳು ವೃತ್ತಿ ಸಂಬಂಧಿ ಒತ್ತಡ ಇಲ್ಲವೇ ಮನೆಯಿಂದಲೇ ಕೆಲಸ ಮಾಡುವ ಸಮಯದಲ್ಲಿ ಕೆಲಸದ ಅವಧಿಯ ವಿಸ್ತರಣೆಗೆ ಸಂಬಂಧಿಸಿದ್ದವುಗಳಾಗಿವೆ ಎಂದು ವಕೀಲರಾದ ಪ್ರಾರ್ಥನಾ ಸದಾವರ್ತೆ ಹೇಳಿದ್ದಾರೆ.

ಸಂಗಾತಿಗಳಿಬ್ಬರೂ ಉದ್ಯೋಗಸ್ಥರಾಗಿದ್ದರೆ, ಸಾಮಾನ್ಯವಾಗಿ ಇಬ್ಬರೂ ತಮ್ಮ ತಮ್ಮ ವೃತ್ತಿಯ ಬಗ್ಗೆ ಪರಸ್ಪರ ಸಹಾನುಭೂತಿಯುಳ್ಳವರಾಗಿರುತ್ತಾರೆ. ಆದರೆ, ಸಂಗಾತಿಗಳ ಪೈಕಿ ಒಬ್ಬರು ಉದ್ಯೋಗಸ್ಥರಾಗಿದ್ದು, ಮನೆಯಿಂದಲೇ ಕೆಲಸ ಮಾಡುವವರಾಗಿದ್ದರೆ, ಹೆಂಡತಿ ಸಾಮಾನ್ಯವಾಗಿ ಗಂಡನೂ ಮನೆಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತಾಳೆ. ಆದರೆ, ಹೆಂಡತಿಗೆ, ಗಂಡನು ತನ್ನ ವೃತ್ತಿಯಲ್ಲಿ ಪಡುತ್ತಿರುವ ಕಷ್ಟಗಳ ಬಗ್ಗೆ ಅರಿವಿರುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ಗಂಡಂದಿರು ತಮ್ಮ ವೃತ್ತಿ ಸಂಬಂಧಿ ಸಮಸ್ಯೆಗಳನ್ನು ಹೆಂಡತಿಯರಿಗೆ ಅರ್ಥಮಾಡಿಸಲು ವಿಫಲರಾಗಿದ್ದರು. ಹಾಗಾಗಿ, ಇದು ಪರಸ್ಪರರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ಪ್ರಾರ್ಥನಾ.

‘ಇಂಥ ಪ್ರಕರಣಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರನ್ನೂ ಆಪ್ತ ಸಮಾಲೋಚನೆಗೊಳಪಡಿಸಿ, ಪರಸ್ಪರರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಸೂಚಿಸಲಾಗುತ್ತಿತ್ತು. ಇಬ್ಬರೂ ಜತೆಯಲ್ಲೇ ಹೆಚ್ಚು ಸಮಯ ಕಳೆಯಲು ಸಲಹೆ ನೀಡುತ್ತೇವೆ. ಸಹಾಯವಾಣಿಗಳು ಸಾಮಾನ್ಯವಾಗಿ ಮಹಿಳೆಯರಿಗೆ ಎನ್ನುವ ಗ್ರಹಿಕೆ ನಮ್ಮಲ್ಲಿದೆ. ಆದರೆ, ಲಾಕ್‌ಡೌನ್ ಈ ಗ್ರಹಿಕೆಯನ್ನು ಬದಲಿಸಿದೆ. ಭಾವನಾತ್ಮಕ ಏರುಪೇರು ಮತ್ತು ಕೌಟುಂಬಿಕ–ವೃತ್ತಿ ಸಂಬಂಧಿ ಸಮಸ್ಯೆಗಳ ನಿವಾರಣೆಗಾಗಿ ಪುರುಷರಿಗೂ ಇಂಥ ಸಹಾಯವಾಣಿಗಳ ಅಗತ್ಯವಿದೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು