ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವರ್ಷ ಕಾಲ ಶಾಸಕರ ಅಮಾನತು, ಉಚ್ಚಾಟನೆಗಿಂತಲೂ ಕೆಟ್ಟದ್ದು: ಸುಪ್ರೀಂ

Last Updated 11 ಜನವರಿ 2022, 15:50 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಿಂದ 12 ಶಾಸಕರನ್ನು ಒಂದು ವರ್ಷದ ಅವಧಿಗೆ ಅಮಾನತು ಮಾಡಿರುವುದು ‘ಉಚ್ಚಾಟನೆಗಿಂತಲೂ ಕೆಟ್ಟದಾದ ಕ್ರಮ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಸದನದ ಒಳಗೆ ಮತ್ತು ಹೊರಗೆ ಸಭಾಧ್ಯಕ್ಷರ ಜೊತೆಗೆ ತೋರಿದ ಅನುಚಿತ ವರ್ತನೆಗಾಗಿ ಕಳೆದ ವರ್ಷ ಜುಲೈ ತಿಂಗಳುವಿಧಾನಸಭೆಯ 12 ಶಾಸಕರನ್ನು ಅಮಾನತುಪಡಿಸಲಾಗಿತ್ತು.

ಅಮಾನತುಗೊಂಡಿದ್ದ ಶಾಸಕರು ಆಶೀಶ್‌ ಶೇಲರ್‌ ನೇತೃತ್ವದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ಪೀಠವು, ‘ವಿಧಾನಸಭೆಯಲ್ಲಿ ಈ ಕ್ಷೇತ್ರಗಳ ಪ್ರಾತಿನಿಧಿತ್ವ ಇಲ್ಲವಾಗುವ ಕಾರಣ ಈ ಶಿಸ್ತುಕ್ರಮ ಉಚ್ಚಾಟನೆಗಿಂತಲೂ ಕೆಟ್ಟದ್ದಾಗಿದೆ’ ಎಂದು ಅಭಿಪ್ರಾಯಪಟ್ಟಿತು.

ಒಂದು ವರ್ಷದ ಅಮಾನತು ಎಂದರೆ ಅದು ಈ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ವಿಧಿಸಲಾದ ದಂಡನೆ. ನಿಯಮದ ಪ್ರಕಾರ ಯಾವುದೇ ಕ್ಷೇತ್ರ ಆರು ತಿಂಗಳಿಗೂ ಹೆಚ್ಚು ಪ್ರಾತಿನಿಧಿತ್ವ ಇಲ್ಲದೇ ಇರಬಾರದು ಎಂದಿತು.

ಚಾಲ್ತಿಯಲ್ಲಿರುವ ನಿಯಮಗಳನ್ನು ಉಲ್ಲೇಖಿಸಿ, ವಿಧಾನಸಭೆ ಸದಸ್ಯರನ್ನು 60 ದಿನಕ್ಕೂ ಅಧಿಕ ಕಾಲ ಅಮಾನತು ಮಾಡಲಾಗದು. ಸಂವಿಧಾನದ ವಿಧಿ 190 (4)ರ ಪ್ರಕಾರ ಅನುಮತಿಯಿಲ್ಲದೇ ಸದಸ್ಯ 60 ದಿನಕ್ಕೂ ಹೆಚ್ಚು ಕಾಲ ಸದನದಿಂದ ದೂರ ಉಳಿದರೆ ಆ ಕ್ಷೇತ್ರ ಖಾಲಿ ಇದೆ ಎಂದೇ ಭಾವಿಸಲಾಗುತ್ತದೆ ಎಂದು ಪೀಠವು ಉಲ್ಲೇಖಿಸಿತು.

ಶಾಸಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಅವರು, ಅನುಚಿತ ವರ್ತನೆಗಾಗಿ ಇತ್ತೀಚೆಗೆ ರಾಜ್ಯಸಭೆಯ 12 ಸದಸ್ಯರನ್ನು ಅಧಿವೇಶನದ ಅವಧಿಗೆ ಸೀಮಿತಗೊಳಿಸಿ ಅಮಾನತು ಮಾಡಲಾಗಿತ್ತು ಎಂದರು.

ಮಹಾರಾಷ್ಟ್ರ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ.ಎ.ಸುಂದರಂ, ಶಾಸನಸಭೆ ವಿಧಿಸುವ ದಂಡನೆಯನ್ನು ಕೋರ್ಟ್ ಪರಿಶೀಲಿಸಲು ಬರುವುದಿಲ್ಲ ಎಂದರು. ಆದರೆ ಪೀಠ ಇದನ್ನು ಒಪ್ಪಲಿಲ್ಲ. ವಿಚಾರಣೆಯನ್ನು ಜ.18ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT