ಶುಕ್ರವಾರ, ಏಪ್ರಿಲ್ 23, 2021
27 °C

ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಟಿಎಂಸಿ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೇಂದ್ರದ ಮಾಜಿ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿರುವ ಯಶವಂತ್ ಸಿನ್ಹಾ ಅವರು ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆಯಾದರು.

‘2024ರಲ್ಲಿ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲು ಹಾಗೂ ದೇಶವನ್ನು ರಕ್ಷಿಸಬೇಕಾದರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಅಭೂತಪೂರ್ವ ಗೆಲುವು ಕಾಣಬೇಕಾದ ಅನಿವಾರ್ಯತೆ ಇದೆ’ ಎಂದು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸಿನ್ಹಾ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಹಿರಿಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸಿನ್ಹಾ ಅವರು ಬಿಜೆಪಿ ನಾಯಕತ್ವದ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ, 2018ರಲ್ಲಿ ಪಕ್ಷ ತ್ಯಜಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಪರ ಪ್ರಚಾರ ನಡೆಸಿದ್ದರು. ಇವರ ಪುತ್ರ ಜಯಂತ್ ಸಿನ್ಹಾ ಅವರು ಜಾರ್ಖಂಡ್‌ನ ಹಜಾರಿಬಾಗ್‌ನ ಬಿಜೆಪಿ ಸಂಸದರಾಗಿದ್ದಾರೆ.

‘ಮಮತಾ ಬ್ಯಾನರ್ಜಿ ಜತೆ ಕೇವಲ 45 ನಿಮಿಷ ಮಾತುಕತೆ ನಡೆಸಿ, ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದೆ. ನಂದಿಗ್ರಾಮದಲ್ಲಿ ಮಮತಾ ಮೇಲಿನ ಹಲ್ಲೆಯು  ಚುನಾವಣೆಯನ್ನು ಗೆಲ್ಲಲು ಕೇಂದ್ರ ಸರ್ಕಾರ ಏನು ಬೇಕಾದರೂ ಬಾಡಬಲ್ಲದು ಎಂಬುದಕ್ಕೆ ನಿದರ್ಶನದಂತಿಗೆ. ನಾನು ಟಿಎಂಸಿ ಸೇರಲು ಮಮತಾ ಮೇಲೆ ನಡೆದ ಹಲ್ಲೆಯ ಘಟನೆಯೇ ಕಾರಣ. ಅವರೊಂದಿಗೆ ಕೆಲಸ ಮಾಡಲು ಇದು ಪ್ರೇರಣೆಯಾಯಿತು’ ಎಂದು ಸಿನ್ಹಾ ಹೇಳಿದ್ದಾರೆ.

‘ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರಿಂದ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಸಂಸ್ಥೆಗಳು ದೃಢವಾಗಿರಬೇಕು. ಆದರೆ ಎಲ್ಲಾ ಸಂಸ್ಥೆಗಳನ್ನು  ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂದು ಸಿನ್ಹಾ ಆರೋಪಿಸಿದ್ದಾರೆ.

‘ರೈತರು ದೆಹಲಿಯ ಗಡಿಯಲ್ಲಿ ತಿಂಗಳುಗಳಿಂದ ಧರಣಿ ಕುಳಿತಿದ್ದರೂ ಸರ್ಕಾರ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಚುನಾವಣೆಗಳನ್ನು ಗೆಲ್ಲುವುದೊಂದೇ ಆಡಳಿತ ಪಕ್ಷದ ಮಂತ್ರವಾಗಿದೆ ಎಂದರು.

‘ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಭಾರಿ ಅಂತರದಲ್ಲಿ ಜಯ ಸಾಧಿಸಲಿದೆ. ನಾವು ಈ ಗೆಲುವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ. ‘ಬಂಗಾಳ ಇಂದು ಏನು ಚಿಂತಿಸುತ್ತದೆಯೋ, ಭಾರತ ಅದರ ಬಗ್ಗೆ ನಾಳೆ ಆಲೋಚಿಸುತ್ತದೆ’ ಎಂದು ಗೋಪಾಲಕೃಷ್ಣ ಗೋಖಲೆ ಹೇಳಿದ್ದರು. ಬಂಗಾಳದಲ್ಲಿ ಈ ಬಾರಿ ತೃಣಮೂಲ ಕಾಂಗ್ರೆಸ್‌ನ ಗೆಲುವು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ–ಶಾ ಅಧಿಪತ್ಯದ ಪತನಕ್ಕೆ ಸೂಚನೆ ನೀಡಲಿದೆ’ ಎಂದು ಸಿನ್ಹಾ ವಿಶ್ಲೇಷಿಸಿದರು.

ಮಮತಾ ಮೇಲಿನ ಹಲ್ಲೆ: ಸಮಗ್ರ ವರದಿಗೆ ಸೂಚನೆ
ಕೋಲ್ಕತ್ತ:
ನಂದಿಗ್ರಾಮದಲ್ಲಿ ಮಾರ್ಚ್ 10ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯನ್ನು ಕುರಿತ ವರದಿಯು ಸಂಕ್ಷಿಪ್ತವಾಗಿದ್ದು, ವಿವರವಾದ ವರದಿ ನೀಡುವಂತೆ ರಾಜ್ಯದ ಮುಖ್ಯಕಾರ್ಯರ್ಶಿ ಆಲ್ಪನ್ ಬಂಡೋಪಾಧ್ಯಾಯ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ.

‘ಘಟನೆಯು ಹೇಗೆ ನಡೆಯಿತು, ದಾಳಿಯ ಹಿಂದೆ ಯಾರಿದ್ದಾರೆ ಎಂಬಿತ್ಯಾದಿ ಅಂಶಗಳನ್ನೊಳಗೊಂಡ ವಿಸ್ತೃತ ವರದಿ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶುಕ್ರವಾರ ಸಂಜೆ ವೇಳೆಗೆ ರಾಜ್ಯ ಸರ್ಕಾರವು ಆಯೋಗಕ್ಕೆ ವರದಿಯನ್ನು ಸಲ್ಲಿಸಿತ್ತು. ಘಟನಾ ಸ್ಥಳದಲ್ಲಿ ಬೃಹತ್ ಸಂಖ್ಯೆಯ ಜನರು ಸೇರಿದ್ದರು ಎಂದು ವರದಿ ಉಲ್ಲೇಖಿಸಿದೆ. ಆದರೆ ಮಮತಾ ಅವರು ತಮ್ಮ ಮೇಲೆ 4–5 ಜನರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು’ ಎಂದು ಅಧಕಾರಿ ತಿಳಿಸಿದ್ದಾರೆ. 

ನಂದಿಗ್ರಾಮದ ಬಿರುಲಿಯಾ ಬಜಾರ್‌ನಲ್ಲಿ ನಡೆದ ಹಲ್ಲೆಗೆ ಸಂಬಂಧಪಟ್ಟಂತೆ ಸ್ಪಷ್ಟವಾದ ವಿಡಿಯೊ ದೃಶ್ಯಾವಳಿಗಳು ಲಭ್ಯವಿಲ್ಲ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಘಟನೆಯ ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ರಾಜ್ಯಕ್ಕೆ ಇಬ್ಬರು ವೀಕ್ಷಕರನ್ನು ನೇಮಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು