ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹೌದು, ನಮ್ಮದು ಇ.ಡಿ ಸರ್ಕಾರ' - ಫಡಣವೀಸ್ ಹೇಳಿಕೆಯ ಮರ್ಮವೇನು?

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಸದನವನ್ನು ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, 'ಹೌದು, ನಮ್ಮದು ಇ.ಡಿ ಸರ್ಕಾರ - ಏಕನಾಥ ಹಾಗೂ ದೇವೇಂದ್ರ ಸರ್ಕಾರ' (ED - Eknath & Devendra) ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುವ ಭೀತಿಯಿಂದಾಗಿ ಬಂಡಾಯ ಶಾಸಕರು ಏಕನಾಥ ಶಿಂಧೆ ಗುಂಪನ್ನು ಸೇರಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಲೇ ಇವೆ. ಇದಕ್ಕೆ ಪ್ರತಿಯಾಗಿ ಫಡಣವೀಸ್ ಈ ರೀತಿಯಾಗಿಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೂತನ ಸರ್ಕಾರವು ಸೋಮವಾರ ವಿಶ್ವಾಸಮತವನ್ನು ಸಾಬೀತುಪಡಿಸಿದೆ.

ಮಹಾರಾಷ್ಟ್ರದ ನೂತನ ಸರ್ಕಾರದಲ್ಲಿ ಯಾವುದೇ ಕಿತ್ತಾಟ ನಡೆಯುವುದಿಲ್ಲ ಎಂದು ಫಡಣವೀಸ್ ಭರವಸೆ ನೀಡಿದರು. 'ಪಕ್ಷ (ಬಿಜೆಪಿ) ಹೇಳಿದ್ದರೆ ಮನೆಯಲ್ಲಿ ಕೂರುತ್ತಿದ್ದೆ. ಅದೇ ಪಕ್ಷ ನನ್ನನ್ನು ಡಿಸಿಎಂ ಮಾಡಿದೆ' ಎಂದು ಹೇಳಿದ್ದಾರೆ.

'ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಬಹುಮತದಿಂದ ದೂರವಿಡಲಾಗಿತ್ತು. ಈಗ ಏಕನಾಥ ಶಿಂಧೆ ಜೊತೆ ಸೇರಿ ಮತ್ತೊಮ್ಮೆ ಶಿವಸೇನಾದೊಂದಿಗೆ ಸರ್ಕಾರ ರಚಿಸಿದ್ದೇವೆ. ನಿಜವಾದ ಶಿವಸೈನಿಕರನ್ನು ಸಿಎಂ ಮಾಡಲಾಗಿದೆ. ನನ್ನ ಪಕ್ಷದ ಸೂಚನೆಯಂತೆ ನಾನು ಉಪಮುಖ್ಯಮಂತ್ರಿಯಾದೆ' ಎಂದು ಹೇಳಿದರು.

'ನಾನು ಮರಳಿ ಬರುತ್ತೇನೆಂದು ಹಿಂದೊಮ್ಮೆ ಹೇಳಿದ್ದೆ. ನನ್ನ ಮಾತನ್ನು ಹಲವರು ಗೇಲಿ ಮಾಡಿದರು. ನಾನು ಮರಳಿದಾಗ ಏಕನಾಥ ಶಿಂಧೆ ಅವರನ್ನು ಜೊತೆಗೆ ಕರೆ ತಂದಿದ್ದೇನೆ. ನನ್ನನ್ನು ಅಪಹಾಸ್ಯ ಮಾಡಿದ ಜನರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ. ನಾನು ಅವರನ್ನು ಕ್ಷಮಿಸುತ್ತೇನೆ. ರಾಜಕಾರಣದಲ್ಲಿ ಎಲ್ಲವನ್ನೂ ಹೃದಯಕ್ಕೆ ಹಾಕೊಳ್ಳೋದಿಲ್ಲ' ಎಂದು ತಿಳಿಸಿದರು.

'ರಾಜಕಾರಣದಲ್ಲಿ ಎದುರಾಳಿಗಳ ಮಾತು ಕೇಳಲು ಎಲ್ಲರೂ ಸಿದ್ಧರಾಗಿರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಜೈಲು ಪಾಲಾಗಿರುವುದನ್ನು ನೋಡಿದ್ದೇವೆ. ನಮ್ಮ ವಿರುದ್ಧ ಮಾತನಾಡುವವರನ್ನು ಎದುರಿಸಲು ನಾವು ಸಜ್ಜಾಗಿರಬೇಕು. ಸರಿಯಾದ ರೀತಿಯಲ್ಲೇ ವಿಮರ್ಶೆಗಳಿಗೆ ಉತ್ತರಿಸಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT