ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಿಲ್‌ ವಿಜಯದ ನೆನಪನ್ನು ಚಿಗುರಿಸುವ ಬೆಳಗಾವಿಯ ’ಹುತಾತ್ಮರ ವನ’

ಗಡಿ ನಾಡು ಬೆಳಗಾವಿಯಲ್ಲಿ ವಿಶೇಷ ಗೌರವ
Last Updated 25 ಜುಲೈ 2019, 12:22 IST
ಅಕ್ಷರ ಗಾತ್ರ

1999ರಲ್ಲಿ ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ದಿಗ್ವಿಜಯ ಸಾಧಿಸಿತು. ಯುದ್ಧದಲ್ಲಿ ಅನೇಕ ಭಾರತೀಯ ಯೋಧರು ಹುತಾತ್ಮರಾದರು. ಅವರ ನೆನಪಿಗಾಗಿ ದೇಶದ ಹಲವು ಕಡೆಗಳಲ್ಲಿ ಸ್ಮಾರಕಗಳು ನಿರ್ಮಾಣವಾದವು.

ಇದೇ ರೀತಿ 2015ರಲ್ಲಿ ಗಡಿನಾಡು ಜಿಲ್ಲೆ ಬೆಳಗಾವಿಯಲ್ಲೂ ಕಾರ್ಗಿಲ್‌ ವಿಜಯ ದಿವಸ್‌ ಮತ್ತು ಹುತಾತ್ಮ ಯೋಧರ ನೆನಪಿಗಾಗಿ ವಿಶೇಷ ಚಟುವಟಿಕೆಯೊಂದು ಆರಂಭವಾಯಿತು. ಅದೇ ‘ಹುತಾತ್ಮರ ವನ’ ನಿರ್ಮಾಣ. ಇದು ಕಾರ್ಗಿಲ್‌ ವಿಜಯದ ನೆನಪನ್ನು ಜನಮಾನಸದಲ್ಲಿ ‘ಹಸಿರಾಗಿಸುವ’ ಪ್ರಯತ್ನ. ಜತೆಗೆ, ಯುದ್ಧದಲ್ಲಿ ಮಡಿದ ವೀರಯೋಧರಿಗೆ ನಮನ ಸಲ್ಲಿಸುವ ವಿಶೇಷ ಪ್ರಯತ್ನ.

ಆ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಂದು ಬೆಳಗಾವಿಯ ವ್ಯಾಕ್ಸಿನ್‌ ಡಿಪೊದಲ್ಲಿರುವ ಖಾಲಿ ಜಾಗದಲ್ಲಿ 680 ಸಸಿಗಳನ್ನು ನಡೆಲಾಯಿತು. ಬಿಜೆಪಿ ಮುಖಂಡ ಅಭಯ್‌ ಪಾಟೀಲ ನೇತೃತ್ವದ ‘ಸ್ವಚ್ಛ ಬೆಳಗಾವಿ–ಸುಂದರ ಬೆಳಗಾವಿ’ ತಂಡದ ಯುವಕರು ಸಸಿಗಳನ್ನು ನೆಟ್ಟಿದ್ದರು. ಇವರೊಂದಿಗೆ ರೌಂಡ್ ಟೇಬಲ್ ಇಂಡಿಯಾ, ರೋಟರಿ ಮೊದಲಾದ ಸಂಘ– ಸಂಸ್ಥೆಗಳವರೂ ಶ್ರಮದಾನ ಮಾಡಿದ್ದರು. ಕಾರ್ಗಿಲ್ ವಿಜಯ ದಿವಸವನ್ನು ವಿನೂತನವಾಗಿ ಆಚರಿಸಿ, ಸಂಭ್ರಮಿಸಿದ್ದರು; ಯೋಧರಿಗೆ ನಮಿಸಿದ್ದರು. ಹಲವರು ಮಕ್ಕಳು ಹಾಗೂ ಕುಟುಂಬ ಸಮೇತ ಬಂದು ಸ್ವಂತ ಖರ್ಚಿನಲ್ಲಿ ಗಿಡ ತಂದು ನೆಟ್ಟು ಗೌರವ ಸಲ್ಲಿಸಿದ್ದರು. ಅಂದು ನೆಟ್ಟ ಹೊಂಗೆ, ನೇರಳೆ, ಅರಳಿ ಮತ್ತಿತರ ನೆರಳು ನೀಡುವ ಸಸಿಗಳು ಈಗ ಬೆಳೆದು ನಿಂತಿವೆ.

ಸಸಿಗಳನ್ನು ನೆಟ್ಟಾಗ, ಪ್ರತಿ ಗಿಡಗಳ ಮೇಲೆ ಹುತಾತ್ಮರ ಹೆಸರುಗಳಿರುವ ಫಲಕಗಳನ್ನು ಹಾಕಲಾಗಿತ್ತು. ಆ ಫಲಕಗಳು ಈಗ ಇಲ್ಲ. ಆದರೆ, ಗಿಡಗಳು ಬೆಳವಣಿಗೆ ಹಂತದಲ್ಲಿದ್ದು, ನಳನಳಿಸುತ್ತಿವೆ.

ಆಗ ನೆಟ್ಟ ಸಸಿಗಳಲ್ಲಿ ಪ್ರಸ್ತುತ 500ಕ್ಕೂ ಹೆಚ್ಚಿನವು ಉಳಿದಿವೆ. ಶಾಸಕ ಅಭಯ್‌ ಪಾಟೀಲ ತಮ್ಮ ತಂಡದೊಂದಿಗೆ ಆಗಾಗ, ವಾರಾಂತ್ಯಗಳಲ್ಲಿ ಸಸಿಗಳ ಸುತ್ತಲೂ ಗುಂಡಿ ತೋಡುವುದು, ಬೇಸಿಗೆಯಲ್ಲಿ ನೀರುಣಿಸುವುದು, ಕಳೆ ತೆಗೆಯುವಂತಹ ಚಟುವಟಿಕೆಗಳನ್ನು ನಡೆಸುತ್ತಾರೆ. ಅವರೊಂದಿಗೆ ಸ್ಥಳೀಯರು ಕೂಡ ಕೈಜೋಡಿಸುತ್ತಿದ್ದಾರೆ.

ಇದಕ್ಕೆ ‘ಹುತಾತ್ಮ ವನ’ ಎಂದು ಹೆಸರಿಡಲಾಗಿದೆ. ಸಸಿಗಳು ಮರಗಳಾದ ಮೇಲೆ ಮತ್ತಷ್ಟು ಗಮನ ಸೆಳೆಯಲಿವೆ. ಆಗ ಹುತಾತ್ಮ ಸೈನಿಕರ ಹೆಸರಿನ ಫಲಕಗಳನ್ನು ಮರಗಳಿಗೆ ಹಾಕುವ ಉದ್ದೇಶವಿದೆ ಎನ್ನುತ್ತಾರೆ ಸ್ವಚ್ಛ ಬೆಳಗಾವಿ–ಸುಂದರ ಬೆಳಗಾವಿ ತಂಡ.

‘ಗಿಡ–ಮರಗಳನ್ನು ಬೆಳೆಸುವ ಮೂಲಕ ಯೋಧರ ಸ್ಮರಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಹೀಗಾಗಿ, ಹಸಿರು ಅಭಿಯಾನಕ್ಕೆ ಆದ್ಯತೆ ಕೊಟ್ಟಿದ್ದೇವೆ. ಸಾರ್ವಜನಿಕರೂ ಕೈಜೋಡಿಸಿದ್ದಾರೆ. ಇದರಿಂದ ಪರಿಸರ ಸಂರಕ್ಷಣೆಯೊಂದಿಗೆ ಯೋಧರ ತ್ಯಾಗ, ಬಲಿದಾನದ ನೆನಪನ್ನೂ ಹಸಿರಾಗಿಸಬಹುದು’ ಎನ್ನುತ್ತಾರೆ ಅಭಯ್.

ಇಡೀ ದೇಶ ಕಾರ್ಗಿಲ್‌ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳುಪ್ರಜಾವಾಣಿ ಜಾಲತಾಣದಲ್ಲಿಸರಣಿಯಾಗಿ ಪ್ರಕಟವಾಗಲಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT