ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಬೇಟೆಯ ಹೆಜ್ಜೆ ಜಾಡಿನಲ್ಲಿ...

Last Updated 15 ಮೇ 2021, 19:30 IST
ಅಕ್ಷರ ಗಾತ್ರ

ಚಿಕ್ಕಪುಟ್ಟ ನಿಲ್ದಾಣಗಳಲ್ಲಿ ಹತ್ತಾರು ಜನರನ್ನು ಹತ್ತಿಸಿಕೊಂಡು ಸಾಗುತ್ತಿದ್ದ ಪ್ಯಾಸೆಂಜರ್ ರೈಲು, ಸುರಂಗದೊಳಗೆ ಅದೆಂಥ ರಭಸದಿಂದ ಹೋಗುತ್ತಿತ್ತೆಂದರೆ ಒಳಗಿದ್ದವರು ‘ಹೋ’ ಎಂದು ಕಿರಿಚಿ ಗಲಭೆ ಎಬ್ಬಿಸುತ್ತಿದ್ದರು. ಅಂಥ ಮೂರು ಸುರಂಗಗಳನ್ನು ದಾಟಿ ದಿಗುವಮೆಟ್ಟ ನಿಲ್ದಾಣದಲ್ಲಿ ಇಳಿದಾಗ, ದಶಕಗಳ ಹಿಂದೆ ಅಲ್ಲಿದ್ದ ‘ಕೊಲೆಗಡುಕ’ನನ್ನು ನೆನೆದು ಅರೆಕ್ಷಣ ಹೆದರಿಕೆಯಂತೂ ಆಯಿತು! ಹಾಗಿದ್ದರೂ ಕೆನೆತ್ ಇದ್ದಾನಲ್ಲ; ಭಯ ಯಾಕೆ ಎಂಬ ಸಮಾಧಾನವೂ ಮರುಕ್ಷಣ ಆವರಿಸಿಕೊಂಡಿತು.

ಹಾಗೆ ನೋಡಿದರೆ, ‘ದಿಗುವಮೆಟ್ಟದ ಕೊಲೆಗಡುಕ’ನಾಗಲೀ ಅವನನ್ನು ಬೇಟೆಯಾಡಿದ ಕೆನೆತ್ ಆ್ಯಂಡರ್ಸನ್ನಾಗಲೀ ಭೌತಿಕವಾಗಿ ಉಳಿದುಕೊಂಡಿಲ್ಲ. ಆದರೆ ಅವರಿಬ್ಬರ ನೆನಪುಗಳ ಸುರುಳಿಯಲ್ಲಿ ಉಯ್ಯಾಲೆಯಾಡಲು ಮೂವರು ನಾಡಿನ ಮೂರು ದಿಕ್ಕುಗಳಿಂದ ಗುಂತಕಲ್ಲು ತಲುಪಿ, ಅಲ್ಲಿಂದ ದಿಗುವಮೆಟ್ಟಕ್ಕೆ ಬಂದಿಳಿದಿದ್ದೆವು. ತೆಲುಗು ಭಾಷೆ ಬಲ್ಲ ನಾಗೇಂದ್ರ ಪ್ರಸಾದ್, ಕಾಡಿನ ಫೋಟೊ ತೆಗೆಯುವ ಹುಚ್ಚು ಅಂಟಿಸಿಕೊಂಡಿದ್ದ ಪ್ರಕಾಶ- ಈ ಇಬ್ಬರಿಗೂ ‘ದಿಗುವಮೆಟ್ಟದ ಕೊಲೆಗಡುಕ’ನ ಜಾಡಿನಲ್ಲಿ ಓಡಾಡುವ ಪರಿಯೇ ರೋಮಾಂಚನ ಮೂಡಿಸಿತ್ತು.

ಪುಸ್ತಕ ಪ್ರಕಾಶನದ ‘ಕಾಡಿನ ಕಥೆಗಳು’ ಮಾಲಿಕೆಯಲ್ಲಿ ನರಭಕ್ಷಕ ಚಿರತೆ ಹಾಗೂ ಹುಲಿ ಬೇಟೆಯ ಕಥೆಗಳಿವೆ. ಮೂಲತಃ ಅವು ಕೆನೆತ್ ಆ್ಯಂಡರ್ಸನ್ ಬೇಟೆಯಾಡಿ ಬರೆದ ಕಥನಗಳು. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಅವುಗಳ ಭಾವಾನುವಾದವನ್ನು ಅಷ್ಟೇ ಅತ್ಯುತ್ತಮವಾಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಕೆನೆತ್, ಮೈಸೂರಿನಿಂದ ಶ್ರೀಶೈಲದವರೆಗೂ ಸಂಚರಿಸಿ, ನರಭಕ್ಷಕಗಳನ್ನು ಬೇಟೆಯಾಡಿದ್ದ. ಅವುಗಳ ರಸವತ್ತಾದ ಕಥನಗಳನ್ನು ಓದಿದ ಬಳಿಕ ಒಂದೆರಡು ತಾಣಗಳಿಗೆ ಮರುಭೇಟಿ ಕೊಡಬೇಕೆಂಬ ಆಸೆ ಮೂಡಿತ್ತು. ಅದರ ಫಲಶ್ರುತಿಯೇ ‘ದಿಗುವಮೆಟ್ಟದ ಕೊಲೆಗಡುಕ’ನನ್ನು ಹುಡುಕುತ್ತ ಬಂದಿಳಿದಿದ್ದು.

ಆಂಧ್ರದ ನಲ್ಲಮಲ್ಲ ಅರಣ್ಯ ಶ್ರೇಣಿಯ ಅಂಚಿನಲ್ಲಿರುವ ದಿಗುವಮೆಟ್ಟ, ಪ್ರಕಾಶಂ ಜಿಲ್ಲೆಯಲ್ಲಿದೆ. ಇಲ್ಲಿ ನರಭಕ್ಷಕ ಚಿರತೆಯನ್ನು ಹೊಡೆಯಲು ಬಂದಿಳಿಯುವ ಕೆನೆತ್, ಸತತ ಎರಡು ದಿನ ಸುತ್ತಮುತ್ತ ಓಡಾಡಿ ರೈಲುಮಾರ್ಗದ ಸುರಂಗದ ಬಳಿ ಆ ಕಾರ್ಯದಲ್ಲಿ ಯಶಸ್ವಿಯಾಗುತ್ತಾನೆ. ಅದನ್ನು ತನ್ನ ‘ಅಸಾಸಿನ್ ಆಫ್ ದಿಗುವಮೆಟ್ಟ’ ಕಥನದಲ್ಲಿ ವಿವರವಾಗಿ ಬರೆದಿದ್ದಾನೆ.

ಈ ಬೇಟೆಯಲ್ಲಿ ಪ್ರಮುಖ ಪಾತ್ರವಹಿಸುವ ತಾಣಗಳು ಎರಡು: ಅರಣ್ಯ ಇಲಾಖೆಯ ಪ್ರವಾಸಿ ಬಂಗಲೆ (ಟಿ.ಬಿ) ಹಾಗೂ ರೈಲುಮಾರ್ಗಕ್ಕೆಂದು ಬೆಟ್ಟದುದ್ದಕ್ಕೂ ಕೊರೆದ ಸುರಂಗ. ದಿಗುವಮೆಟ್ಟ ನಿಲ್ದಾಣದಲ್ಲಿ ಇಳಿದು, ಟಿ.ಬಿ.ಯತ್ತ ಹೊರಟಾಗ ಕಂಡಿದ್ದು ಬಿದಿರ ಸಾಮಗ್ರಿ ತಯಾರಿಸುತ್ತಿದ್ದ ಚಂಚೂ ಬುಡಕಟ್ಟು ಜನರು. ಅದೂ ಬರೀ ಲಂಗೋಟಿಯಲ್ಲಿ! ‘ಅರೆ, ಕೆನೆತ್ ಅವತ್ತೂ ಇದನ್ನೇ ಪ್ರಸ್ತಾಪಿಸಿದ್ದಾನಲ್ಲ’ ಎಂದು ಅಚ್ಚರಿಪಡುತ್ತ ಟಿ.ಬಿ ಕಾಂಪೌಂಡ್ ಪ್ರವೇಶಿಸಿದಾಗ ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿದ್ದ ಹಳೆಯ ಕಟ್ಟಡ ಎದುರಾಯಿತು. ‘ಈ ಬಂಗಲೆಯಲ್ಲಿಯೇ ಕೆನೆತ್ ವಾಸ್ತವ್ಯ ಹೂಡಿದ್ದ’ ಎಂದು ಎರಡು ಕೊಠಡಿಗಳ ಪೈಕಿ ಒಂದನ್ನು ಪ್ರಸಾದ್ ತೋರಿಸಿದ. ಕೆನೆತ್ ತನ್ನ ಸಾಮಗ್ರಿ ಬಿಚ್ಚಿಟ್ಟು, ಆ ರೂಮಿನ ಅಟ್ಯಾಚ್ಡ್ ಬಾತ್‌ರೂಮಿನಲ್ಲಿ ಸ್ನಾನ ಮಾಡಿಬಂದು ಕುರ್ಚಿ ಮೇಲೆ ಕೂತು ಸಿಗರೇಟ್ ಸೇದುತ್ತ ಒಂದು ಮಗ್ ಚಹಾ ಹೀರುವ ಸದ್ದು ಕೇಳಿಸಿದಂತಾಯಿತು!

ನಾವು ಅತೀವ ಆಸಕ್ತಿಯಿಂದ ನೋಡಬಯಸಿದ್ದು ‘ಮಿಸ್‌ಛೀಫ್’. 1911ರಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ಇಲ್ಲಿ ವಾಸ್ತವ್ಯ ಹೂಡಿದ್ದಾಗ ಆತನ ನಾಯಿ ‘ಮಿಸ್‌ಛೀಫ್’ ಮೇಲೆ ಚಿರತೆಯೊಂದು ದಾಳಿ ಮಾಡಿತ್ತು. ಅವತ್ತು ಆ ಅಧಿಕಾರಿ ತನ್ನ ನಾಯಿಯನ್ನು ಉಳಿಸಲು ಬಂದೂಕಿನಿಂದ ಗುಂಡು ಹಾರಿಸಿದಾಗ, ಚಿರತೆ ಜತೆಗೆ ನಾಯಿಯೂ ಬಲಿಯಾಗಿತ್ತು. ಆ ದುಃಖದ ನೆನಪಿನಲ್ಲಿ ಅದನ್ನು ಹೂಳಿ, ಗೋರಿ ನಿರ್ಮಿಸಿದ್ದ. ಅದರ ಮೇಲೆ ‘MISCHIEF, LITTLE SHADOW A FRIEND 21.8.1911’ ಎಂದು ಬರೆಸಿದ.

ಬಂಗಲೆಯ ದಕ್ಷಿಣ ಭಾಗಕ್ಕಿದೆ ಎಂಬ ಮಾಹಿತಿಯನ್ನು ಹಿಡಿದು, ಹುಡುಕಾಟ ನಡೆಸಿದ ನಿಮಿಷದಲ್ಲೇ ಗೋರಿಯೊಂದು ಕಾಣಿಸಿತು. ತುಸು ಶಂಕೆಯಿಂದ ಅದರ ಮೇಲಿದ್ದ ತರಗೆಲೆಗಳನ್ನು ಸರಿಸಿದಾಗ ಶಿಲೆಯ ಮೇಲಿನ ಬರಹ ಗೋಚರಿಸಿತು! ಶತಮಾನಗಳಷ್ಟು ಹಳೆಯದಾದ ನೆನಪುಗಳ ಜತೆಗೆ ಅಲೀಮ್ ತಂಗಿಯ ಮಗಳು ‘ಪ್ಯಾರಿ’ ಕೂಡ ಕಾಣಿಸಿಕೊಂಡಳು.

ಪ್ರವಾಸಿ ಮಂದಿರದ ಮೇಟಿ ಅಲೀಮ್ ಖಾನ್‌ಗೆ ಇಬ್ಬರು ಪತ್ನಿಯರು. ಜತೆಗೆ, ಗಂಡನನ್ನು ಕಳೆದುಕೊಂಡ ಅಲೀಮ್‌ನ ತಂಗಿ ಅದೇ ಮನೆಗೆ ಬಂದಳು. ಮಿಸ್‌ಛೀಫ್ ಹಾಗೂ ಗೋರಿಯ ಕಥೆ ಕೇಳಿದ್ದ ಅಲೀಮ್‌ನ ಸೊಸೆ ಪ್ಯಾರಿ, ನಿತ್ಯವೂ ಕಾಡಿನಿಂದ ಹೂಗಳನ್ನು ತಂದು ಗೋರಿ ಮೇಲೆ ಇಡುತ್ತಿದ್ದಳು. ಒಂದು ಇಳಿಸಂಜೆ ಹೀಗೆ ಹೂವು ಇಡಲು ಹೋದ ಪ್ಯಾರಿಯನ್ನು ನರಭಕ್ಷಕ ಚಿರತೆ ಹೊತ್ತೊಯ್ದಿತ್ತು. ಆ ಕ್ಷಣವೇ ಬೆಂಗಳೂರಿನಿಂದ ಹೊರಟು ದಿಗುವಮೆಟ್ಟಕ್ಕೆ ಬಂದಿಳಿದು, ಚಿರತೆಯನ್ನು ಬೇಟೆಯಾಡಲು ಹೊಂಚು ಹಾಕುತ್ತಾನೆ ಕೆನೆತ್. ರಾತ್ರಿ ಹೊತ್ತು ಈ ಗೋರಿಯ ಮೇಲೆ ಬಂದೂಕಿನೊಂದಿಗೆ ಕೂತು ಕಾಯುವ ಆತನಿಗೆ ಯಶಸ್ಸು ಸಿಗುವುದಿಲ್ಲ. ಆದರೆ ಅದೇ ಸಮಯಕ್ಕೆ ಚಂಚೂ ಯುವಕನೊಬ್ಬ ರೈಲಿನ ಸುರಂಗದ ಬಾಯಿಯ ಬಳಿ ನರಭಕ್ಷಕನಿಗೆ ಬಲಿಯಾಗಿರುವ ಸುದ್ದಿ ತಿಳಿಯುತ್ತದೆ. ತನ್ನ ಯೋಜನೆ ಅಲ್ಲೇ ಕೈಬಿಟ್ಟು, ನಸುಕಿನ ಜಾವ ಅಲೀಮ್ ಜತೆ ಸೇರಿಕೊಂಡು ಯುವಕನ ಹತ್ಯೆಯಾದ ಸ್ಥಳಕ್ಕೆ ಹೊರಡುತ್ತಾನೆ. ಅಳಿದುಳಿದ ಶರೀರವನ್ನು ತಿನ್ನಲು ಬರುವ ನರಭಕ್ಷಕನನ್ನು ಹೊಂಚು ಹಾಕಿ ಬೇಟೆಯಾಡುವುದು ಕೆನೆತ್ ತಂತ್ರ.

ನಾವೂ ಆ ತಾಣದತ್ತ ಹೊರಟೆವು. ಸ್ಥಳೀಯರ ಜತೆ ದುಭಾಷಿ ಪ್ರಸಾದ್ ನಡೆಸಿದ ಸಂಭಾಷಣೆಯಿಂದ ಆ ಸುರಂಗ ನಾಲ್ಕೈದು ಕಿಲೊಮೀಟರ್ ದೂರ ಎಂಬುದು ತಿಳಿಯಿತು.

ಅಲ್ಲಿ ಚಂಚೂ ಯುವಕ ಬಲಿಯಾಗುವ ಕೆಲವು ದಿನಗಳ ಮೊದಲು ರೈಲ್ವೆ ಇಲಾಖೆಯ ಗ್ಯಾಂಗ್‌ಮನ್ ನರಭಕ್ಷಕನಿಗೆ ಆಹುತಿಯಾಗಿದ್ದ. ಅದು ನಿಲ್ದಾಣಕ್ಕೆ ಸಮೀಪವಿದ್ದ ಕೈಕಂಬದ (ಸಿಗ್ನಲ್ ಪೋಲ್) ಬಳಿ. ಅದಾಗಿ ತಿಂಗಳ ಬಳಿಕ ಇನ್ನೊಂದು ಬಲಿ. ರೈಲ್ವೆ ಇಲಾಖೆಯ ಇಬ್ಬರು ಕೆಲಸಗಾರರ ಪೈಕಿ ಒಬ್ಬನ ಕೆಲಸ ನೀರಿನ ಟ್ಯಾಂಕ್ ನಿರ್ವಹಣೆಯಾಗಿದ್ದರೆ, ಇನ್ನೊಬ್ಬನದು ಸಿಗ್ನಲ್ ಕಂಬದ ಮೇಲೇರಿ ಸೀಮೆಎಣ್ಣೆ ಹಾಕಿ, ದೀಪ ಹೊತ್ತಿಸಿ ಬರುವುದು. ಒಂದು ದಿನ ದೀಪ ಹಚ್ಚುವವನು ಕಂಬದ ಮೇಲಿನಿಂದ ಕೆಳಗೆ ಇಳಿದು ನೋಡಿದಾಗ, ಆತ ಇರಲೇ ಇಲ್ಲ! ಗಾಬರಿಯಿಂದ ಹುಡುಕಿದಾಗ, ದೂರದಲ್ಲಿ ಅರ್ಧ ಶವ ಕಂಡಿತು.

ಆ ಕೈಕಂಬ ಈಗ ಆಧುನಿಕ ರೂಪ ಪಡೆದಿದೆ. ಸೀಮೆಎಣ್ಣೆ ದೀಪದ ಬದಲಾಗಿ ವಿದ್ಯುತ್ ದೀಪ ಅಳವಡಿಕೆಯಾಗಿದೆ. ಉಳಿದಂತೆ ಅಗಾಧ ಪ್ರಮಾಣದ ಪೊದೆ ಹಾಗೆಯೇ ಉಳಿದಿದೆ. ಪಕ್ಕದಲ್ಲಿನ ನೀರಿನ ಟ್ಯಾಂಕ್ ಈಗಲೂ ಸುಸ್ಥಿತಿಯಲ್ಲಿದ್ದು, ಅದರ ಉಸ್ತುವಾರಿ ಓಬಯ್ಯ ಎಂಬ ವೃದ್ಧನದು. ಟ್ಯಾಂಕ್ ದಂಡೆಯ ಮೇಲೆ ಕುಳಿತು, ಓಬಯ್ಯನನ್ನು ಮಾತಿಗೆಳೆದೆವು. ಹುಲಿ, ಚಿರತೆಗಳು ಆಗಾಗ್ಗೆ ನೀರು ಕುಡಿಯಲು ಈ ಟ್ಯಾಂಕ್ ಹತ್ತಿರ ಬರುತ್ತಿದ್ದದ್ದನ್ನೂ, ನರಭಕ್ಷಕಗಳ ಕಾಟವನ್ನೂ ತಮ್ಮ ತಂದೆ ಬಣ್ಣಿಸುತ್ತಿದ್ದ ನೆನಪು ಅವರಲ್ಲಿ ಇತ್ತು. ‘ಅಂಥ ನರಭಕ್ಷಕಗಳನ್ನು ಬ್ರಿಟಿಷರು ಬೇಟೆಯಾಡುತ್ತಿದ್ದರಂತೆ’ ಎಂಬ ಮಾತು ಅವರಿಂದ ಬಂತು. ಆದರೆ ಖಚಿತವಾಗಿ ಕೆನೆತ್ ಆ್ಯಂಡರ್ಸನ್ ಹೊಡೆದುರುಳಿಸಿದ ನರಭಕ್ಷಕನ ಬಗ್ಗೆ ಏನೂ ಮಾಹಿತಿ ಇರಲಿಲ್ಲ.

ಅಲ್ಲಿಂದ ‘ಕೊಲೆಗಡುಕ’ನನ್ನು ಬೇಟೆಯಾಡಿದ ಸುರಂಗಕ್ಕೆ ಚಿಕ್ಕದೊಂದು ಚಾರಣವೇ ನಡೆಯಿತು. ಅಲ್ಲಿಯವರೆಗೆ ರೈಲು ಹಳಿಗುಂಟ ನಡೆಯುವುದೊಂದು ಸಾಹಸವೇ ಸೈ. ದೊಡ್ಡ ಸೇತುವೆಯುದ್ದಕ್ಕೂ ಕಂಬಿಗೆ ಹಾಕಿರುವ ಸ್ಲೀಪರುಗಳ ಮೇಲೆ ಒಂದೊಂದೇ ಹೆಜ್ಜೆಯಿಡುತ್ತ, ಕೆಳಗೆ ಕಾಣುವ ಪ್ರಪಾತವನ್ನು ಕಂಡು ಹೆದರುತ್ತ ಉದ್ದನೆಯ ಸೇತುವೆ ದಾಟಿದೆವು (ಕೆನೆತ್ ಕೂಡ ಹೀಗೆಯೇ ದಾಟಿ, ಅದನ್ನು ಬರಹದಲ್ಲಿ ದಾಖಲಿಸಿದ್ದಾನೆ). ಒಂದೂವರೆ ತಾಸಿನ ಬಳಿಕ ಸುರಂಗ ಕಾಣಿಸಿತು. ‘ಅಗೋ ಅದರ ಬಾಯಿಯ ಮೇಲ್ಭಾಗದಲ್ಲಿ ಕೆನೆತ್ ಕೂತಿದ್ದಾನೆ ನೋಡಿ; ಹಿಂದೆಯೇ ಅಲೀಮ್ ಕೂಡ ಕಾಣಿಸುತ್ತಿದ್ದಾನೆ’ ಎಂದು ಪ್ರಕಾಶ್ ‘ಆ ಸ್ಥಳ’ದತ್ತ ತೋರಿಸಿ ಭ್ರಮೆ ಮೂಡಿಸಿದರು!

ಚಂಚೂ ಯುವಕನನ್ನು ಅರ್ಧ ತಿಂದಿದ್ದ ನರಭಕ್ಷಕ ಮತ್ತೆ ಖಂಡಿತ ಅಲ್ಲಿಗೆ ಬರುತ್ತದೆ ಎಂಬ ನಂಬಿಕೆಯಿಂದ ಕೆನೆತ್ ಹಾಗೂ ಅಲೀಮ್ ಈ ಸುರಂಗದ ಬಳಿ ಬಂದು, ‘ಗೊತ್ತು ಕೂರಲು’ (ಬೇಟೆಯಾಡಲು ಹೊಂಚು ಹಾಕುವ) ಜಾಗ ಹುಡುಕುತ್ತಾರೆ. ಸುರಂಗದೊಳಗೆ ಕುಳಿತರೆ, ಹಿಂದಿನಿಂದ ಅದು ದಾಳಿ ಮಾಡಬಹುದು ಎಂದು ಊಹಿಸಿ, ಅದರ ಬಾಯಿಯ ಮೇಲ್ಭಾಗದಲ್ಲಿ ಕಲ್ಲು ರಾಶಿ ಮಾಡಿ, ಚಿಕ್ಕ ಕೋಟೆ ಕಟ್ಟಿಕೊಂಡು ತಲೆ ಇಳಿಜಾರು ಮಾಡಿಕೊಂಡು ಕಾಯಲು ಶುರು ಮಾಡುತ್ತಾರೆ. ನಿಧಾನವಾಗಿ ಕತ್ತಲು ಕವಿಯುತ್ತದೆ.

ಶವ ಭಕ್ಷಿಸಲು ಸುರಂಗದೊಳಗಿನಿಂದ ಚಿರತೆ ಬರುತ್ತದೆ ಎಂದು ಕಾಯುತ್ತಿದ್ದ ಕೆನೆತ್‌ಗೆ ಗಾಬರಿ ಮೂಡಿಸಿದ್ದು ನರಭಕ್ಷಕ ಬೆಟ್ಟದ ಮೇಲಿನಿಂದ ತಮ್ಮ ಮೇಲೆ ಜಿಗಿದಾಗಲೇ! ಆತ ಬರೆಯುತ್ತಾನೆ: ‘ಮುಂದೇನಾಯ್ತೆಂದು ಸ್ಪಷ್ಟವಾಗಿ ಗೊತ್ತಿಲ್ಲ. ಅಲೀಮ್‌ ‘ಹೋ’ ಎಂದು ಕೂಗಿ ನೆಗೆದು ಹಾರಿದ. ನಾನು ಟಾರ್ಚ್ ಹಾಕಿ, ನೆಗೆಯುತ್ತಿದ್ದ ಚಿರತೆಯ ಬಾಯೊಳಗೇ ಗುಂಡು ಹಾರಿಸಿ ಪಕ್ಕಕ್ಕೆ ಉರುಳಿದೆ. ಚಿರತೆ ಭಯಂಕರವಾಗಿ ಗರ್ಜಿಸಿ, ನಮ್ಮಿಬ್ಬರ ನಡುವೆ ಉರುಳಿ ಸುರಂಗದ ಮೇಲಿನಿಂದ ಕಂಬಿಯ ಮೇಲೆ ದೊಪ್ಪನೆ ಬಿತ್ತು. ಇವೆಲ್ಲ ಅಸ್ಪಷ್ಟ. ಆಗ ಸಂಭವಿಸಿದ್ದು ದೊಡ್ಡ ಗೊಂದಲ ಮಾತ್ರ.’

ಮಟಮಟ ಮಧ್ಯಾಹ್ನ ಆ ಜಾಗದಲ್ಲಿ ನಿಂತು, ಕೆನೆತ್ ವಿವರಣೆ ನೆನೆಸಿಕೊಂಡಂತೆಲ್ಲ ಮೈ ಜುಂ ಎಂದಿತು. ಬೆಟ್ಟವನ್ನು ಭೇದಿಸಿದ್ದ ಸುರಂಗದ ಆ ತುದಿಯ ಬೆಳಕಲ್ಲಿ ಏನೋ ಕದಲಿದಂತಾಗಿ ಅದು ಮತ್ತೊಂದು ನರಭಕ್ಷಕ ಇರಬಹುದೇ ಎಂಬ ಭೀತಿಯೂ ಮೂಡಿತು. ಆದರೆ ನೆಲ ನಡುಗಿಸುತ್ತ ಪ್ಯಾಸೆಂಜರ್ ರೈಲೊಂದು ಅತ್ತಲಿಂದ ಈ ಕಡೆ ಧಾವಿಸುತ್ತಿತ್ತು. ಅವತ್ತು ಮಧ್ಯರಾತ್ರಿ ಕಂಬಿಯ ಪಕ್ಕದಲ್ಲಿ ಸತ್ತ ಚಿರತೆಯ ಎದುರಿನಲ್ಲಿ ಇಬ್ಬರು ಟೀ ಕುಡಿಯುತ್ತಿರುವುದನ್ನು ನೋಡಿ ಪ್ಯಾಸೆಂಜರ್ ರೈಲಿನ ಚಾಲಕ ಅಚ್ಚರಿಪಟ್ಟಿದ್ದ. ರೈಲುನಿಲ್ಲಿಸಿ, ಸತ್ತ ಚಿರತೆಯನ್ನೂ ಅಲೀಮ್- ಕೆನೆತ್‌ರನ್ನೂ ದಿಗುವಮೆಟ್ಟಕ್ಕೆ ಕರೆದೊಯ್ಯಲು ಸಂತಸದಿಂದ ಒಪ್ಪಿದ್ದ.

ಆ ಘಟನೆ ನಡೆದ ಎಷ್ಟೋ ದಶಕಗಳ ಬಳಿಕ, ನರಭಕ್ಷಕ ನಡೆಸಿದ ಅಟಾಟೋಪದ ತಾಣಗಳನ್ನೂ ಅದನ್ನು ಕೆನೆತ್ ಹೊಡೆದುರುಳಿಸಿದ ಜಾಗವನ್ನೂ ನೋಡಬಂದ ನಮ್ಮನ್ನು ಈ ಪ್ಯಾಸೆಂಜರ್ ರೈಲಿನ ಚಾಲಕ ಶಂಕೆಯಿಂದ ಗಮನಿಸಿದ. ರೈಲು ನಿಲ್ಲಿಸಿ ವಿಚಾರಿಸಿ, ಇಲ್ಲಿಗೆ ಬಂದಿದ್ದು ಯಾಕೆಂದು ತಿಳಿದಿದ್ದರೆ ಆತನಲ್ಲಿ ಯಾವ ಭಾವನೆ ಮೂಡುತ್ತಿತ್ತೋ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT