ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದಿಸಿದರೆ ಸಾಕೆ? ಕಾಳಜಿಯೂ ಬೇಕು ನಾಯಿಮರಿಗೆ..

Last Updated 24 ನವೆಂಬರ್ 2020, 3:16 IST
ಅಕ್ಷರ ಗಾತ್ರ

ಬಹುಶಃ ನಾಯಿಯ ಕುರಿತಂತೆ ಕೇಳಿರುವಷ್ಟು ಕಥೆಗಳನ್ನು ಬೇರೆ ಸಾಕು ಪ್ರಾಣಿಗಳ ಬಗ್ಗೆ ಯಾರೂ ಕೇಳಿರಲಾರರು. ‘ಒಡೆಯನನ್ನು ಸಾವಿನಲ್ಲೂ ಹಿಂಬಾಲಿಸಿದ ಸಾಕು ನಾಯಿ’, ‘ಮನೆಯ ಮಾಲೀಕನನ್ನು ಅರಸುತ್ತ ನೂರಾರು ಕಿ.ಮೀ. ಅಲೆದಾಡಿದ ಶ್ವಾನ’, ‘ಕಳ್ಳರ ಬಗ್ಗೆ ಮನೆಯೊಡೆಯನನ್ನು ಎಚ್ಚರಿಸಿದ ನಾಯಿ’, ‘ಒಡತಿಯ ಮಗುವನ್ನು ವಿಷದ ಹಾವಿನಿಂದ ಪಾರು ಮಾಡಿದ ಮುದ್ದು ನಾಯಿ ಮರಿ’... ಹೀಗೆ ಆಗಾಗ ಈ ಮುದ್ದು ಪ್ರಾಣಿಯ ಬಗ್ಗೆ ಸುದ್ದಿಗಳು ಕಿವಿಗೆ ಬೀಳುತ್ತಲೇ ಇರುತ್ತವೆ.

ಒಂಟಿತನ ನಿವಾರಣೆಗೆ, ರಕ್ಷಣೆಗೆ, ಭಾವನಾತ್ಮಕ ಬೆಸುಗೆಗೆ, ನಂಬಿಕಾರ್ಹತೆಗೆ ನಾಯಿಗಿಂತ ಬೇರೆ ಸಾಕು ಪ್ರಾಣಿ ಸಿಗಲಾರದು. ಸಾಕಿದವರ ಮಾತನ್ನು ಅರ್ಥ ಮಾಡಿಕೊಳ್ಳುತ್ತ, ಅವರ ಭಾವನೆಗಳಿಗೆ ಸ್ಪಂದಿಸುತ್ತ, ಮನಸ್ಸಿಗೆ ಮುದ ನೀಡುವ, ಒತ್ತಡ ಕಡಿಮೆ ಮಾಡಿ ಮಾನಸಿಕ ಆರೋಗ್ಯ ಸುಧಾರಿಸುವ ನಾಯಿಯನ್ನು ನಗರಗಳಲ್ಲಿ ಸಾಕುವವರ ಸಂಖ್ಯೆ ಈ ಸಂದರ್ಭದಲ್ಲಿ ಕೊಂಚ ಜಾಸ್ತಿಯಾಗಿದೆ ಎನ್ನಬಹುದು.

ಆದರೆ, ನಗರ ಹಾಗೂ ಪುಟ್ಟ ಪಟ್ಟಣಗಳಲ್ಲಿ ನಾಯಿ ಸಾಕುವುದೆಂದರೆ ಆ ಕೆಲಸ ನಮ್ಮ ಬಹುಪಾಲು ಸಮಯವನ್ನು ಕಬಳಿಸುತ್ತದೆ. ಮನೆ ಕಾವಲಿಗೆ ನಾಯಿ ಇರುವ ಬದಲುಮನೆಯವರೇ ನಾಯಿಯನ್ನು ಕಾಯಬೇಕಾದ ಸನ್ನಿವೇಶವೇ ಇಲ್ಲಿದೆ. ಹಾಗಾಗಿ ನಮ್ಮ ಕೆಲಸದ ಒತ್ತಡ, ನಾಯಿ ಕಾಳಜಿಗೆ ಸಿಗುವ ಸಮಯ ಗಮನದಲ್ಲಿಟ್ಟುಕೊಂಡು ನಾಯಿ ಸಾಕುವುದು ಒಳ್ಳೆಯದು.

ಜರ್ಮನ್ ಶೆಫರ್ಡ್, ಸೇಂಟ್‌ ಬರ್ನಾರ್ಡ್‌, ಲ್ಯಾಬ್ರಡಾರ್‌, ಬಾಕ್ಸ‌ರ್, ಡ್ಯಾಷ್‌ಹೌಂಡ್‌, ಶಿತ್ಸು,ಮಿನಿಯೇಚರ್ ಸ್ಕ್ನಾಜರ್, ಗೋಲ್ಡನ್‌ ರಿಟ್ರೀವರ್‌, ಹಸ್ಕಿ... ಹೀಗೆ ನೂರಾರು ತಳಿವೈವಿಧ್ಯ ನಾಯಿಗಳಲ್ಲಿದೆ.

ಸಾಕುವ ಮುನ್ನ ಮನೆಯಲ್ಲಿ ಜಾಗ ಎಷ್ಟಿದೆ ಎಂದು ನೋಡಿಕೊಳ್ಳಬೇಕು. ಇಕ್ಕಟ್ಟಿನ ಜಾಗದಲ್ಲಿ ಒಂದೇ ಕಡೆ ಕಟ್ಟಿ ಸಾಕುವುದರಿಂದ ಅವುಗಳಿಗೂ ಕಿರಿಕಿರಿ, ಒತ್ತಡ ಶುರುವಾಗುತ್ತದೆ; ಮನೆಯವರ ಓಡಾಟಕ್ಕೂ ತೊಂದರೆ. ಜೊತೆಗೆ ನಾಯಿಗೆ ಕೊಂಚ ಕಾಲಾಡಿಸಲು ಅನುವು ಮಾಡಿಕೊಡಬೇಕಾಗುತ್ತದೆ. ಮನೆ ಮುಂದೆ ಅಂಗಳ, ಖಾಲಿ ಜಾಗ ಇದ್ದಲ್ಲಿ ದೊಡ್ಡ ಗಾತ್ರದ ನಾಯಿಗಳನ್ನು ಸಾಕಬಹುದು. ಪ್ರತ್ಯೇಕ ಗೂಡು ಮಾಡಲೂಬಹುದು. ಅಪಾರ್ಟ್‌ಮೆಂಟ್‌ಗಳಲ್ಲಾದರೆ ಮಧ್ಯಮ ಮತ್ತು ಸಣ್ಣ ಗಾತ್ರದ ನಾಯಿ ಸಾಕುವುದು ಸೂಕ್ತ.

ನಗರ ಪ್ರದೇಶಗಳಲ್ಲಿ ಸೌಮ್ಯ ಸ್ವಭಾವದ ನಾಯಿ ಸಾಕಣೆಯೇ ಸೂಕ್ತ. ಭಿನ್ನ ತಳಿಗಳ ನಾಯಿ ಸಾಕುವಾಗ ಅವು ಪರಸ್ಪರ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ. ನಾಯಿ ಮನೆಯಲ್ಲಿರುವ ಬೇರೆ ಪ್ರಾಣಿಗಳೊಂದಿಗೆ (ಬೆಕ್ಕು, ಪಕ್ಷಿಗಳು ಇತ್ಯಾದಿ) ಹೊಂದಿಕೊಳ್ಳುವಂತೆ ತರಬೇತಿ ಕೊಡಿ.

ತಳಿ ಆಯ್ಕೆ: ನಿರ್ವಹಣೆ ಸುಲಭವಾಗಿರುವ ಯಾವುದೇ ವಾತಾವರಣ ಮತ್ತು ಆಹಾರ ಪದ್ಧತಿಗೆ ಒಗ್ಗುವ ತಳಿಗಳನ್ನೇ ಆಯ್ಕೆ ಮಾಡಿ.

ವ್ಯಾಕ್ಸಿನೇಷನ್‌: ಮರಿ ಖರೀದಿಸುವಾಗ ಕೂಲಂಕಷವಾಗಿ ಆರೋಗ್ಯ ತಪಾಸಣೆ ಮಾಡಿಸಿ. ಅಗತ್ಯ ವ್ಯಾಕ್ಸಿನೇಷನ್‌ಗಳನ್ನು ಆರಂಭದಲ್ಲೇ ಕೊಡಿಸಿ.

ಅದರ ನಿರ್ವಹಣಾ ಕ್ರಮಗಳನ್ನು ಮೊದಲೇ ತಿಳಿದುಕೊಳ್ಳಿ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ನಾಯಿಗಳಿಗೆಂದೇ ಪ್ರತ್ಯೇಕ ಸ್ಪಾ, ಆಹಾರದ ಅಂಗಡಿಗಳು ಇವೆ. ನಿಮಗೆ ಸಮೀಪವಿರುವ ಅಂಥ ಸಂಸ್ಥೆಗಳ ಹಾಗೂ ತಜ್ಞರ ಸಂಪರ್ಕ ಇರಿಸಿಕೊಳ್ಳಿ.

ಸೋಂಕಿನ ಬಗ್ಗೆ ಎಚ್ಚರವಿರಲಿ: ನೆನಪಿಡಿ ನಾಯಿಗೇನಾದರೂ ರೋಗ ತಗಲಿದರೆ ಅದರ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ ರೇಬಿಸ್‌ನಂತಹ ಅಪಾಯಕಾರಿ ಸೋಂಕು. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ.

ನಾಯಿಯನ್ನು ಅತಿಯಾಗಿ ಮುದ್ದಿಸುವುದೂ ಸರಿಯಲ್ಲ. ಮಕ್ಕಳು ನಾಯಿಯ ಜೊತೆ ಹೆಚ್ಚು ಕಾಲ ಕಳೆಯುವುದರಿಂದ ವ್ಯಾಕ್ಸಿನೇಷನ್‌ ಮಾಡಲು ಉದಾಸೀನ ಬೇಡ. ನಿಗದಿಪಡಿಸಿದ ಜಾಗದಲ್ಲೇ ನಾಯಿ ನಿತ್ಯವೂ ಮಲಗುವಂತೆ ಅಥವಾ ವಿಶ್ರಾಂತಿ ಪಡೆಯುವಂತೆ ಅಭ್ಯಾಸ ಮಾಡಿಸಿ.

ಸ್ವಚ್ಛತೆ ಮುಖ್ಯ: ಯಾವುದೇ ತಳಿಯ ನಾಯಿಯಾದರೂ ಸರಿ, ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ನಾಯಿಯ ಶೌಚಕ್ಕೆ ಬೀದಿಗೆ ಕರೆದೊಯ್ದು ಮಾರ್ಗ ಮಧ್ಯೆ ಶೌಚ ಮಾಡಿಸುವವರೂ ಇದ್ದಾರೆ. ಇದು ಒಳ್ಳೆಯ ಅಭ್ಯಾಸ ಅಲ್ಲ. ಶೌಚ ಸಂಗ್ರಹಿಸಿ ತ್ಯಾಜ್ಯದ ಡಬ್ಬಿಗೆ ಎಸೆಯಲು ಕಾಗದದ ಚೀಲ ಇರಿಸಿಕೊಳ್ಳುವುದು ಒಳ್ಳೆಯದು.

ಬೆಂಗಳೂರಿನಲ್ಲಿ ನಾಯಿ ಸಾಕುವುದು ಸವಾಲೇ ಸರಿ. 2018ರಲ್ಲಿ ನಾಯಿ ಸಾಕುವವರು ಪರವಾನಗಿ ಪಡೆಯಬೇಕು ಎಂಬ ನಿಯಮ ರೂಪಿಸಲು ಬಿಬಿಎಂಪಿ ಮುಂದಾಗಿತ್ತು. ಬಳಿಕ ಅದು ಹಾಗೇ ತಣ್ಣಗಾಯಿತು. ಅದೇನೇ ನಿಯಮ ಬರಲಿ ಬಿಡಲಿ, ನಮ್ಮ ಸಾಕು ಪ್ರಾಣಿಯ ಕಾಳಜಿ ನಾವು ಮಾಡಲೇಬೇಕು. ಅದಕ್ಕೆಂದೇ ವಿಶೇಷ ಗುರುತು ಇರಲಿ. ಕತ್ತುಪಟ್ಟಿಯಲ್ಲಿ ಹಾಕುವ ಜಿಪಿಎಸ್‌ ಚಿಪ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ. ಅಗತ್ಯವೆನಿಸಿದರೆ ಬಳಸಬಹುದು.

ಬೀದಿಪಾಲು ಮಾಡದಿರಿ: ನಾಯಿ ಮುದಿಯಾದಾಗ ಸುಮ್ಮನೆ ಬೀದಿಗೆ ಬಿಡಬೇಡಿ. ಅದಕ್ಕೆಂದೇ ಇರುವ ಕಾಳಜಿ ಕೇಂದ್ರಗಳು, ಪ್ರಾಣಿದಯಾ ಸಂಘಗಳ ಪಾಲನಾ ಕೇಂದ್ರಗಳಿವೆ. ಅಲ್ಲಿ ಬಿಡಬಹುದು. ನಿಷ್ಠಾವಂತ ಪ್ರಾಣಿಯನ್ನು ಕೊನೆಯವರೆಗೂ ಪ್ರೀತಿಯಿಂದಲೇ ಕಾಣಿ.

ನಾಯಿಗೂ ಲಾಡ್ಜ್!

ಬೇರೆ ಊರಿಗೆ ಹೋಗುವಾಗ ನಾಯಿಯನ್ನು ಕರೆದೊಯ್ಯಲಾಗದಿದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಏನು ಎಂಬುದನ್ನು ಮೊದಲೇ ಮಾಡಿಕೊಳ್ಳಿ. ಬೆಂಗಳೂರಿನ ಕಲ್ಯಾಣನಗರ ಸೇರಿ ಹಲವು ಕಡೆ, ದಾವಣಗೆರೆಯಭಗತ್‌ಸಿಂಗ್‌ ನಗರದಲ್ಲಿಇಂಥ ನಾಯಿ ಲಾಡ್ಜ್‌ಗಳೇ ಇವೆ. ಸಾಮಾನ್ಯ ಲಾಡ್ಜ್‌ಗೆ ಬಾಡಿಗೆ ಕೊಡುವಂತೆ ಇಲ್ಲಿಯೂ ಹಣ ಪಾವತಿಸಬೇಕು. ನೀವು ವಾಪಸಾಗುವವರೆಗೆ ಅವರು ನಾಯಿಗೆ ಆಸರೆ, ಆಹಾರ ನೀಡುತ್ತಾರೆ. ಆದರೆ, ಸಾಕುವಾತ ಕೆಲಕಾಲ ದೂರವಾದಾಗ ನಾಯಿಗೂ ಒಂಟಿತನ ಕಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT