ಶನಿವಾರ, ಮೇ 28, 2022
25 °C

ಜೀವನವಾಗಲಿ ರಂಗವಲ್ಲಿ

ಸತ್ಯೇಶ್ ಎನ್‌. ಬೆಳ್ಳೂರ್‌ Updated:

ಅಕ್ಷರ ಗಾತ್ರ : | |

Prajavani

ರಂಗವಲ್ಲಿಯ ತೆರದಿ ಬೆಳಗುತಿರು ಜಗಲಿಯಲಿ |

ಭಂಗಗೊಳಿಸದೆ ಮನದ ಒಳನೆಮ್ಮದಿಯನು ||

ರಂಗಿಸುತ್ತೆಲ್ಲರನು ನವನವೀನತೆಯಲ್ಲಿ |

ರಂಗಾಗು ಜೀವನದಿ - ನವ್ಯಜೀವಿ ||

ರಂಗವಲ್ಲಿ ಭಾರತೀಯ ಸಂಸ್ಕೃತಿಯ ಒಂದು ಪ್ರತೀಕ. ನಾನಂತೂ ಮತ್ತಾವ ದೇಶದಲ್ಲೂ ಇದನ್ನು ಕಂಡಿಲ್ಲ.

ಬೆಳಗ್ಗೆ ಎದ್ದು, ಮನೆಯ ಮುಂದಿನ ಆವರಣವನ್ನು ಸ್ವಚ್ಛಗೊಳಿಸಿ ಅಲ್ಲಿ ಒಂದು ರಂಗೋಲಿ ಇಟ್ಟರೆ, ಆ ಮನೆಗೆ ಹೆಣ್ಣೊಬ್ಬಳ ಹಣೆಯಲ್ಲಿ ಮಿನುಗುವ ಕುಂಕುಮದ ಕಳೆ ಬಂದುಬಿಡುತ್ತದೆ. ರಂಗೋಲಿ ಸದಾ ರಂಗುರಂಗುಗಳ ಆಗರವೇ ಆಗಬೇಕೆಂದಿಲ್ಲ; ಬಿಳಿಯ ಬಣ್ಣವೊಂದೇ ಸಾಕು ಒಟ್ಟಾರೆ ರಂಗು ಮೂಡಿಸಲು. ನೋಡುವವರ ಕಣ್ಮನಗಳನ್ನು ತಣಿಸಲು. ಬೆಳಗ್ಗೆ ಎದ್ದು, ಮನೆಯ ಗೃಹಿಣಿ (ಅಥವಾ ಗೃಹಸ್ಥ) ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವ ಮುನ್ನ, ಅರೆಗಳಿಗೆ ಮನೆಯ ಹೊರ ಆವರಣವನ್ನು ಒಪ್ಪವಾಗಿಸಿ ಅಲ್ಲಿ ರಂಗವಲ್ಲಿ ಹಾಕುವ ಈ ಒಂದು ಕ್ರಮವನ್ನು ಪಾಲಿಸುತ್ತ ಬಂದರೆ ಸಾಕು, ಅದು ಅವರ ಜೀವನದಲ್ಲಿ ಇನ್ನೇನಿಲ್ಲದಿದ್ದರೂ ನೆಮ್ಮದಿಯನ್ನು ತರುತ್ತದೆ.

ನೆಮ್ಮದಿ ಹಾಗೂ ರಂಗೋಲಿ? ಇದೆಂತಹ ಸಂಬಂಧ ಎಂದು ಹುಬ್ಬೇರಿಸಬೇಡಿ. ಬೆಳಗ್ಗೆ ಎದ್ದ ಕೂಡಲೇ ನೀವು ಮೊದಲು ಕೈಗೊಳ್ಳುವ ಕೆಲಸವಿದೆಯಲ್ಲ, ಅದು ನಿಮ್ಮ ಅರಿವಿಗೆ ಬರದೆಯೇ ನಿಮ್ಮ ದಿನವನ್ನು ರೂಪಿಸುತ್ತದೆ ಅಂದರೆ ನಂಬುತ್ತೀರಾ? ‘ಚೆಂದದಲ್ಲಿ ಶುರುವಾದ ಕೆಲಸ ಚೆಂದದಲ್ಲಿ ಸಾಗಿ ಚೆಂದದಲ್ಲಿಯೇ ಪರಿಸಮಾಪ್ತಿಯಾಗುತ್ತದೆ‘ ಎಂಬ ಸತ್ಯವನ್ನು ನಾನು ನನ್ನ ಸುದೀರ್ಘವಾದ ಕಾರ್ಪೊರೆಟ್ ಜಗತ್ತಿನ ಅನುಭವದಲ್ಲಿ ಕಂಡುಕೊಂಡಿದ್ದೇನೆ ಎಂದಷ್ಟೇ ಹೇಳಬಲ್ಲೆ. ಇರುವ ರಂಗುಗಳನ್ನು ಮಾತ್ರವೇ ಬಳಸಿ, ಗೊತ್ತಿರುವ ಚಿತ್ತಾರಗಳನ್ನು ಮಾತ್ರವೇ ಬಿಡಿಸಿ, ಅದನ್ನು ಬಿಡಿಸಿ ಮುಗಿಸಿದ ಆ ಕ್ಷಣ ಅದನ್ನು ಕಣ್ಗಳಲ್ಲಿ ತುಂಬಿಸಿಕೊಂಡು ಬೆನ್ನು ತಟ್ಟಿಕೊಳ್ಳುತ್ತ, ಇದು ಅವರ್ಣನೀಯವಾದ ಯಾವುದೋ ರೀತಿಯಲ್ಲಿ ಮನೆಗೆ ಒಂದು ಶೋಭೆ ಎಂದು ಭಾವಿಸುವಾಗ, ಮನಸ್ಸಿನ ಉಗ್ರಾಣದಲ್ಲಿ ನೆಮ್ಮದಿಯಲ್ಲದೇ ಇನ್ನಾವ ಭಾವ ಒಡಮೂಡಲು ಸಾಧ್ಯ ಹೇಳಿ? ದಿನದ ಮುಂಜಾವಿನ ಆ ಹೊತ್ತಿನಲ್ಲಿಯೇ ಇಂತಹ ಒಂದು ಮನಃಸ್ಥಿತಿಯನ್ನು ತಂದುಕೊಂಡರೆ ದಿನದ ಉಳಿದ ಭಾಗವೆಲ್ಲ ನೆಮ್ಮದಿಯಲ್ಲೇ ಇರುವುದು ಖಂಡಿತ.

ರಂಗವಲ್ಲಿಯ ಪದ್ಧತಿ ಶುರುವಾದಾಗ, ಅದು ಕ್ರಮಬದ್ಧವಾಗಿ ಚುಕ್ಕಿಗಳನ್ನು ಗೆರೆಗಳಿಂದ ಒಂದು ಮಾಡುತ್ತ ಚಿತ್ತಾರ ಬಿಡಿಸುವುದೇ ಆಗಿತ್ತು. ಆ ಕ್ರಮವನ್ನು ಪಾಲಿಸಿದರೆ, ಯಾರೂ ರಂಗವಲ್ಲಿ ಹಾಕಬಹುದಿತ್ತು. ಕಾಲ ಕಳೆದಂತೆ, ವಿವಿಧ ಬಣ್ಣಗಳು ಬಂದವು. ಸೃಜನಾತ್ಮಕವಾದ ನವನವೀನ ಚಿತ್ತಾರಗಳು ರೂಪುಗೊಂಡವು. ಅರಳಿರುವ ಹೂವುಗಳ ಚಿತ್ರಗಳಿಂದ ಶುರುವಾದ ಈ ರಂಗೋಲಿ ಕಲೆ ಇಂದು ಸ್ವಾಮಿ ವಿವೇಕಾನಂದರ ಅತ್ಯಂತ ಸಹಜವೆನಿಸುವ ಭಾವಚಿತ್ರಗಳವರೆಗೆ ಬೆಳೆದಿದೆ. ಆದರೆ, ಎಣಿಕೆಯೊಂದರಲ್ಲಿ ಚುಕ್ಕಿಗಳನ್ನಿಟ್ಟು, ಅವುಗಳಲ್ಲಿ ಬೇಕಾಗಿರುವುದನ್ನು ಕ್ರಮವೊಂದರಲ್ಲಿ ಜೋಡಿಸುತ್ತ ಮೂಡಿಸುತ್ತಿದ್ದ ಆ ಪುರಾತನ ಶೈಲಿಯೇ ನನಗೆ ಆಪ್ಯಾಯನ. ಎಲ್ಲರಿಗೂ ಆಗಿಬರದ ಸೃಜನಶೀಲತೆಗಿಂತ ಎಲ್ಲರಿಗೂ ಒದಗಿಬರುವ ಶಿಸ್ತನ್ನು ಇದು ರೂಪಿಸುತ್ತದೆ.

ಶಿಸ್ತು ಹಾಗೂ ರಂಗೋಲಿ? ಇದೆಂತಹ ಸಂಬಂಧ ಎಂದಿರಾ? ಯಾವುದೇ ಕೆಲಸವಾದರೂ ಅದನ್ನು ಕ್ರಮಬದ್ಧವಾಗಿ ಮಾಡಿದಾಗ ನಿಮ್ಮರಿವಿಗಿಲ್ಲದೆಯೇ ನಿಮ್ಮಲ್ಲಿ ಶಿಸ್ತು ತಲೆದೋರುತ್ತದೆ ಎಂದರೆ ನೀವು ನಂಬುತ್ತೀರಾ? ನಮ್ಮ ಕಾರ್ಪೊರೇಟ್ ಜಗತ್ತಿನಲ್ಲಿ ಇದನ್ನೇ ‘ಪ್ರೋಸೆಸ್’ ಎಂದು ಕರೆಯುತ್ತಾರೆ. ಇದಕ್ಕೆ ನಾನು ಕೊಡುವ ಕನ್ನಡ ಪದವೆಂದರೆ: ‘ಕ್ರಿಯಾಚರಣೆಯ ಸಂಸ್ಕರಣೆ’. ಯಾವುದೇ ಕೆಲಸವನ್ನು ಅದಕ್ಕಿರುವ ಕ್ರಮವೊಂದರಲ್ಲಿ ಮಾಡಿದಾಗ, ಆ ಕೆಲಸದ ಯಶಸ್ಸಿನ ಸಾಧ್ಯತೆ ಅಧಿಕ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನೇ ಮತ್ತೆ ಮತ್ತೆ ಮಾಡಬೇಕೆಂದಾಗ ಅದು ಪುನರಾವರ್ತಿಯ ಜಡತ್ವಕ್ಕೆ ಎಡೆ ಮಾಡಿಕೊಡದೆ, ಶಿಸ್ತಿನ ನಿಯಮವೊಂದರಲ್ಲಿ ನಮ್ಮನ್ನು ಬೆಳೆಸುತ್ತದೆ ಎಂಬುದು ನಾನು ಕಂಡುಕೊಂಡ ಸತ್ಯವೇ ಆಗಿದೆ. ದಿನವೂ ಬೆಳಗ್ಗೆ ನಾವಿಡುವ ರಂಗವಲ್ಲಿ ನಮ್ಮನ್ನು ಆ ಹೊತ್ತಿನ ಶಿಸ್ತಿನಲ್ಲಿರಿಸಿ, ಅದರ ಮುಂದುವರೆದ ಭಾವದಲ್ಲಿಯೇ ನಮ್ಮ ಆ ದಿನದ ಇನ್ನೆಲ್ಲ ಕೆಲಸಕಾರ್ಯಗಳನ್ನೂ ನಡೆಸುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ!

ರಂಗವಲ್ಲಿಯ ಬಗ್ಗೆ ಬರೆಯಲು ಇನ್ನೂ ಅನೇಕ ವಿಚಾರಗಳಿವೆ. ಇಷ್ಟು ಮಾತ್ರ ಸತ್ಯ. ನಮ್ಮ ಸಂಸ್ಕೃತಿಯಲ್ಲಿ ತಿಳಿಸಿರುವ ಬಹುತೇಕ ಆಚರಣೆಗಳಲ್ಲಿ ಅಡಗಿರುವ ಸಾರವನ್ನು ಗ್ರಹಿಸಿ, ಅದರಂತೆ ನಡೆದರೆ, ನಮ್ಮ ಬದುಕು ರಂಗಾದೀತು. ರಂಗವಲ್ಲಿಯಾದೀತು. ಹಾಗಾದರೆ, ರಂಗವಲ್ಲಿಯ ಸಂಪ್ರದಾಯ ಇರದವರ ಮನಸ್ಸಿಗೆ ನೆಮ್ಮದಿ ಹಾಗೂ ಶಿಸ್ತು ಇಲ್ಲವೇ? ಅವರವರಿಗೆ ಅವರವರದೇ ಸಂಸ್ಕೃತಿ ತನ್ನದೇ ರೀತಿಯಲ್ಲಿ ’ರಂಗವಲ್ಲಿ‘ಯನ್ನು ಸೂಚಿಸಿರುತ್ತದೆ. ಅದು ಮುಂಜಾವಿನ ಮೊದಲನೆಯ ಪ್ರಾರ್ಥನೆ ಇರಬಹುದು ಅಥವಾ ಮುಂಜಾವಿನ ಚಾಯ್ ಸೇವನೆಯ ಜೊತೆಗಿನ ಧ್ಯಾನವಿರಬಹುದು. ಅವುಗಳನ್ನು ಶ್ರದ್ಧೆಯಿಂದ ಪಾಲಿಸಿಕೊಂಡಬಂದರೂ ನೆಮ್ಮದಿ– ಶಿಸ್ತುಗಳು ಖಂಡಿತ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು